ಭಾರತದ ನೌಕಾಪಡೆಯ ಕಮಾಂಡರ್, ಕ್ಯಾಪ್ಟನ್‌ಗೆ ‘ಏಶ್ಯನ್ ಆಫ್ ದಿ ಇಯರ್’ ಪುರಸ್ಕಾರ

Update: 2018-11-29 14:32 GMT
ವಿಜಯ್ ವರ್ಮ, ರಾಜ್‌ಕುಮಾರ್‌

ಹೊಸದಿಲ್ಲಿ, ನ.29: ಕೇರಳದಲ್ಲಿ ಸಂಭವಿಸಿದ್ದ ಜಲಪ್ರಳಯದ ಸಂದರ್ಭ ಸಂತ್ರಸ್ತರನ್ನು ರಕ್ಷಿಸುವಲ್ಲಿ ಧೈರ್ಯದ ಮತ್ತು ಸ್ವಾರ್ಥರಹಿತ ಸೇವೆ ಸಲ್ಲಿಸಿದ ಭಾರತದ ನೌಕಾಪಡೆಯ ಕಮಾಂಡರ್ ವಿಜಯ್ ವರ್ಮ ಹಾಗೂ ಕ್ಯಾಪ್ಟನ್ ರಾಜ್‌ಕುಮಾರ್‌ಗೆ ಸಿಂಗಾಪುರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ‘ಏಶ್ಯನ್ ಆಫ್ ದಿ ಇಯರ್’ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಆಗಸ್ಟ್‌ನಲ್ಲಿ ಕೇರಳದಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದ ಸಂದರ್ಭ ಸೇನೆಯ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿದ್ದ ಕಮಾಂಡರ್ ವಿಜಯ್ ವರ್ಮ ಕೊಚ್ಚಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ತುಂಬು ಗರ್ಭಿಣಿಯೊಬ್ಬರನ್ನು ಹೆಲಿಕಾಪ್ಟರ್‌ಗೆ ಹತ್ತಿಸಿಕೊಂಡು ರಕ್ಷಿಸಿದ್ದರು. ಇದಾದ ಕೆಲವೇ ಕ್ಷಣಗಳ ಬಳಿಕ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಗಾಲಿಚಕ್ರದಲ್ಲಿ ಕುಳಿತಿದ್ದ ಮಹಿಳೆಯನ್ನು ಗಾಲಿಚಕ್ರ ಸಹಿತ ಮೇಲೆತ್ತಿ ಹೆಲಿಕಾಪ್ಟರ್‌ನೊಳಗೆ ಕಳುಹಿಸುವ ಘಟನೆಯ ವೀಡಿಯೊ ವೈರಲ್ ಆಗಿತ್ತು.

ಕ್ಯಾಪ್ಟನ್ ರಾಜ್‌ಕುಮಾರ್ ಕೊಚ್ಚಿಯಲ್ಲಿ ನೆರೆನೀರಿನಿಂದ ಆವೃತವಾಗಿದ್ದ ಮನೆಯೊಂದರ ಮಾಡಿನಲ್ಲಿ ಕುಳಿತು ಅಸಹಾಯಕರಾಗಿ ನೆರವು ಯಾಚಿಸುತ್ತಿದ್ದ 26 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದರು. ವಿಪತ್ತು ಸಂಭವಿಸಿದಾಗ ತಕ್ಷಣ ಅಲ್ಲಿಗೆ ಧಾವಿಸಿ ಸಂತ್ರಸ್ತರಿಗೆ ನೆರವಾಗುವ ವ್ಯಕ್ತಿಗಳು ಹಾಗೂ ಸಂಘಟನೆಯ ಕಾರ್ಯವನ್ನು ಗೌರವಿಸಲು ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರಶಸ್ತಿಯ ಸಹಸಂಯೋಜಕರಾಗಿರುವ ‘ದಿ ಸ್ಟ್ರೈಟ್ ಟೈಮ್ಸ್ ಡೈಲಿ’ ತಿಳಿಸಿದೆ.

 ಜೊತೆಗೆ, ಇಂಡೋನೇಶ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಲ್ಲಿ ಸಂತ್ರಸ್ತ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸಿಂಗಾಪುರದ ಪ್ಯಾರಾಗ್ಲೈಡರ್ ದಿವಂಗತ ಎನ್‌ಜಿ ಕಾಕ್ ಚೂಂಗ್, ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸುವ ಕಾರ್ಯದಲ್ಲಿ ಸಾಹಸ ಮೆರೆದ ಇಂಡೋನೇಶ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯ ವಕ್ತಾರ ಸುತೊಪೊ ಪುರ್ವೊ ನುಗ್ರೋಹೊರಿಗೆ ಈ ಪ್ರತಿಷ್ಠಿತ ಪುರಸ್ಕಾರ ಸಂದಿದೆ.

 ಸಂಘ ಸಂಸ್ಥೆಗಳ ವಿಭಾಗದಲ್ಲಿ ಸೆಂಟರ್ ಫಾರ್ ಹ್ಯುಮಾನಿಟೇರಿಯನ್ ಅಸಿಸ್ಟೆನ್ಸ್ ಆನ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್‌ನ ಆಸಿಯಾನ್ ಸಮನ್ವಯ ಕೇಂದ್ರ , ಪ್ರವಾಹ, ಭೂಕಂಪ ಮತ್ತಿತರ ವಿಪತ್ತು ಸಂಭವಿಸಿದಾಗ ನೆರವಿಗೆ ಧಾವಿಸುವ ಸಿಂಗಾಪುರದ ಸರಕಾರೇತರ ಸಂಘಟನೆ ‘ಮರ್ಸಿ ರಿಲೀಫ್’ ಪ್ರಶಸ್ತಿಗೆ ಆಯ್ಕೆಯಾಗಿದೆ.

 ವಿಪತ್ತು ಸಂಭವಿಸಿದಾಗ ನಿಸ್ವಾರ್ಥ ಸೇವೆ ಹಾಗೂ ಧೈರ್ಯ ಪ್ರದರ್ಶಿಸಿ ಮೊದಲು ಪ್ರತಿಸ್ಪಂದಿಸುವ ವ್ಯಕ್ತಿಗಳನ್ನು ಹೆಚ್ಚಿನ ಚರ್ಚೆ ಇಲ್ಲದೆ ಆಯ್ಕೆ ಮಾಡಲಾಗಿದೆ ಎಂದು ‘ಸ್ಟ್ರೈಟ್ ಟೈಮ್ಸ್’ನ ಸಂಪಾದಕ ವಾರೆನ್ ಫೆರ್ನಾಂಡಿಸ್ ತಿಳಿಸಿದ್ದಾರೆ. ಅಂತಿಮವಾಗಿ ಸುರಕ್ಷತೆ ಅವಿಭಾಜ್ಯ ವಿಷಯವಾಗಿದೆ ಎಂಬುದನ್ನು ಈ ವ್ಯಕ್ತಿಗಳು ಹಾಗೂ ಸಂಘಟನೆಗಳು ತೋರಿಸಿಕೊಟ್ಟಿದ್ದಾರೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News