ನೆರೆ ಸಂದರ್ಭ ರಕ್ಷಣಾ ಕಾರ್ಯಾಚರಣೆ, ಆಹಾರ ಪೂರೈಕೆಗೆ ಕೇರಳಕ್ಕೆ 291 ಕೋ.ರೂ.ಶುಲ್ಕ ವಿಧಿಸಿದ ವಾಯುಪಡೆ

Update: 2018-11-30 15:07 GMT

ತಿರುವನಂತಪುರ,ನ.30: ಕಳೆದ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ನೆರೆ ಪ್ರಕೋಪವುಂಟಾಗಿದ್ದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ವಿಮಾನಗಳ ಬಳಕೆ ಮತ್ತು ಆಹಾರ ಸಾಮಗ್ರಿಗಳನ್ನು ಪೂರೈಸಿದ್ದಕ್ಕಾಗಿ 290.74 ಕೋ.ರೂ.ಗಳನ್ನು ಪಾವತಿಸುವಂತೆ ಭಾರತೀಯ ವಾಯುಪಡೆಯು ಕೇರಳ ಸರಕಾರಕ್ಕೆ ಸೂಚಿಸಿದೆ.

ವಿಧಾನಸಭೆಯಲ್ಲಿ ಹೇಳಿಕೆಯನ್ನು ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ರಾಜ್ಯ ವಿಕೋಪ ಪ್ರತಿಕ್ರಿಯಾ ನಿಧಿ(ಎಸ್‌ಆರ್‌ಡಿಎಫ್)ಯಲ್ಲಿ 987.73 ಕೋ.ರೂ.ಗಳಿದ್ದು, ಈ ಪೈಕಿ 586.04 ಕೋ.ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಕೇಂದ್ರವು ವಿಧಿಸಿರುವ ಶುಲ್ಕ 290.74 ಕೋ.ರೂ.ಸೇರಿದಂತೆ ಬಾಧ್ಯತೆಗಳನ್ನು ತೀರಿಸಲು ರಾಜ್ಯಕ್ಕೆ 706.74 ಕೋ.ರೂ.ಗಳ ತುರ್ತು ಅಗತ್ಯವಿದೆ. ವಿಮಾನ ಬಳಕೆಯ ಶುಲ್ಕವೇ 33.79 ಕೋ.ರೂ.ಗಳಷ್ಟಿದೆ. ಎಸ್‌ಆರ್‌ಡಿಎಫ್‌ನಲ್ಲಿರುವ ಬಾಕಿ ಹಣವನ್ನು ತನ್ನ ಹಾಲಿ ಚಟುವಟಿಕೆಗಳಿಗಾಗಿ ರಾಜ್ಯ ಸರಕಾರವು ಬಳಸಿಕೊಂಡರೆ ಬಾಧ್ಯತೆಗಳನ್ನು ತೀರಿಸಲು ಅದು ಸಾಲ ಮಾಡಬೇಕಾಗುತ್ತದೆ ಎಂದರು.

ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಯು ದೇಣಿಗೆಯ ರೂಪದಲ್ಲಿ ಒಟ್ಟು 2,683.16 ಕೋ.ರೂ.ಗಳನ್ನು ಈವರೆಗೆ ಸ್ವೀಕರಿಸಿದೆ ಎಂದೂ ವಿಜಯನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News