ಕೇರಳ: ಸ್ಥಳೀಯಾಡಳಿತ ಉಪಚುನಾವಣೆಯಲ್ಲಿ ಎಲ್‌ಡಿಎಫ್ ಜಯಭೇರಿ, ಬಿಜೆಪಿಗೆ ಮುಖಭಂಗ

Update: 2018-11-30 15:34 GMT

ತಿರುವನಂತಪುರ,ನ.30: ಕೇರಳದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಿಭಿನ್ನ ಕಾರಣಗಳಿಂದಾಗಿ ತೆರವಾಗಿದ್ದ ಸ್ಥಾನಗಳಿಗೆ ನಡೆದ ಉಪಚುನಾವಣೆಗಳಲ್ಲಿ ಸಿಪಿಎಂ ನೇತೃತ್ವದ ಎಡರಂಗವು ಭರ್ಜರಿ ಜಯಭೇರಿ ಬಾರಿಸಿದೆ. ಉಪ ಚುನಾವಣೆ ನಡೆದ 39 ವಾರ್ಡ್‌ಗಳ ಪೈಕಿ 21 ಸ್ಥಾನಗಳನ್ನು ಗೆದ್ದು, ಉತ್ತಮ ನಿರ್ವಹಣೆ ಪ್ರದರ್ಶಿಸಿದೆ. ಕಾಂಗ್ರೆಸ್ ನೇತೃತ್ವ ಯುಡಿಎಫ್ ಮೈತ್ರಿಕೂಟವು 12 ಸ್ಥಾನಗಳಲ್ಲಿ ಗೆಲುವು ಕಂಡಿದ್ದು, ಬಿಜೆಪಿಯು ಕೇವಲ 2 ಸ್ಥಾನಗಳಲ್ಲಿ ವಿಜಯಗಳಿಸಿದ್ದು, ತೀವ್ರ ಮುಖಭಂಗ ಅನುಭವಿಸಿದೆ.

ಶಬರಿಮಲೆಗೆ ಮಹಿಳಾ ಪ್ರವೇಶದ ವಿಷಯವಾಗಿ ಹಿಂಸಾತ್ಮಾಕ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿಗೆ ಯಾವುದೇ ರಾಜಕೀಯ ಲಾಭ ಪಡೆಯಲು ಸಾಧ್ಯವಾಗಿಲ್ಲವೆಂಬುದನ್ನು ಈ ಉಪಚುನಾವಣೆಯ ಫಲಿತಾಂಶವು ನಿಚ್ಚಳವಾಗಿ ತೋರಿಸಿಕೊಟ್ಟಿದೆ.

ಕೇರಳದ 14 ಜಿಲ್ಲೆಗಳಾದ್ಯಂತ 27 ಪಂಚಾಯತ್ ವಾರ್ಡ್‌ಗಳು, ಐದು ಬ್ಲಾಕ್ ಪಂಚಾಯತ್ ವಾರ್ಡ್‌ಗಳು, ಆರು ಮುನ್ಸಿಪಾಲಿಟಿ ವಾರ್ಡ್‌ಗಳು ಹಾಗೂ ಒಂದು ಕಾರ್ಪೊರೇಶನ್ ವಾರ್ಡ್‌ಗೆ ಉಪಚುನಾವಣೆಗಳು ನಡೆದಿದ್ದವು.

ತ್ರಿಶೂರ್ ಜಿಲ್ಲೆಯಲ್ಲಿ ಎಲ್‌ಡಿಎಫ್, ಉಪಚುನಾವಣೆ ನಡೆದ ಎಲ್ಲಾ 5 ವಾರ್ಡ್‌ಗಳಲ್ಲಿ ಗೆಲುವಿನ ನಗೆ ಬೀರಿದೆ. ಕಣ್ಣೂರು ಜಿಲ್ಲೆಯಲ್ಲಿ 4 ವಾರ್ಡ್‌ಗಳ ಪೈಕಿ 2ರಲ್ಲಿ, ಮಲಪ್ಪುರಂ ಜಿಲ್ಲೆಯಲ್ಲಿ 4 ವಾರ್ಡ್‌ಗಳ ಪೈಕಿ 2ರಲ್ಲಿ, ಅಲಪ್ಪುಳ ಜಿಲ್ಲೆಯಲ್ಲಿ 5 ವಾರ್ಡ್‌ಗಳ ಪೈಕಿ 1ರಲ್ಲಿ ಹಾಗೂ ಪಾಲಕ್ಕಾಡ್ ಜಿಲ್ಲೆಯಲ್ಲಿ 2 ವಾರ್ಡ್‌ಗಳ ಪೈಕಿ 2ರಲ್ಲಿ ಮತ್ತು ಕಲ್ಲಿಕೋಟೆಯಲ್ಲಿ ಉಪಚುನಾವಣೆ ನಡೆದ ಏಕೈಕ ಸ್ಥಾನದಲ್ಲಿ ಜಯಭೇರಿ ಬಾರಿಸಿದೆ.

ಈ ಹಿಂದೆ 39 ವಾರ್ಡ್‌ಗಳ ಪೈಕಿ 13 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಈ ಬಾರಿ 12 ವಾರ್ಡ್‌ಗಳಿಗೆ ತೃಪ್ತಿ ಪಟ್ಟುಕೊಂಡಿದೆ.ಐದು ವಾರ್ಡ್‌ಗಳಲ್ಲಿ ಅದು ಸೋಲು ಕಂಡಿದ್ದರೂ, ಪ್ರತಿಪಕ್ಷಗಳ ವಶವಿದ್ದ ನಾಲ್ಕು ವಿಭಿನ್ನ ವಾರ್ಡ್‌ಗಳನ್ನು ಈ ಬಾರಿ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿ.ಯಾಗಿದೆ.ಪಟ್ಟಣಂತಿಟ್ಟ ಮುನ್ಸಿಪಾಲಿಟಿಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯು, ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

ಈ ಉಪಚುನಾವಣೆಗಳಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದ್ದು, ಕೇವಲ ಎರಡು ವಾರ್ಡ್‌ಗಳನ್ನಷ್ಟೇ ಗೆಲ್ಲಲು ಸಫಲವಾಗಿದೆ. ಅಲಪ್ಪುಳ ಜಿಲ್ಲೆಯಲ್ಲಿ ಯುಡಿಎಫ್‌ನ ನಿಯಂತ್ರಣದಲ್ಲಿದ್ದ ಎರಡೂ ಸ್ಥಾನಗಳನ್ನು ಅದು ಗೆದ್ದುಕೊಂಡಿದೆ.

ಶಬರಿಮಲೆ ವಿವಾದದ ಕೇಂದ್ರಬಿಂದುವಾಗಿದ್ದ ಪಂದಳಂನಲ್ಲಿ ಪೊಪ್ಯುಲರ್ ಫ್ರಂಟ್‌ನ ರಾಜಕೀಯ ಘಟಕವಾದ ಎಸ್‌ಡಿಪಿಐ ಗೆದ್ದುಕೊಂಡಿದೆ. ಸಿಪಿಎಂನ ವಶದಲ್ಲಿದ್ದ ವಾರ್ಡ್‌ನ್ನು ಅದು ಕಸಿದುಕೊಂಡಿದೆ.ತ್ರಿಶೂರ್ ಜಿಲ್ಲೆಯಲ್ಲಿ ಬಿಜೆಪಿಯ ವಶದಲ್ಲಿದ್ದ ಒಂದು ಸ್ಥಾನ ಸಿಪಿಎಂನ ಪಾಲಾಗಿದೆ.

ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ವಿವಾದಕ್ಕೆ ಸಂಬಂಧಿಸಿ ಕೇರಳಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದ ಬಳಿಕ ನಡೆದ ಈ ಉಪಚುನಾವಣೆಗಳು ರಾಜಕೀಯವಾಗಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News