ಲಂಕಾ: ಸಚಿವರ ವೇತನ, ಪ್ರಯಾಣ ಭತ್ತೆ ತಡೆಹಿಡಿದ ಸಂಸತ್ತು

Update: 2018-11-30 17:23 GMT

ಕೊಲಂಬೊ, ನ. 30: ಸಾಂವಿಧಾನಿಕ ಬಿಕ್ಕಟ್ಟು ನೆಲೆಸಿರುವ ಶ್ರೀಲಂಕಾದ ಸಂಸತ್ತು ಶುಕ್ರವಾರ ಸಚಿವರ ವೇತನ ಮತ್ತು ಪ್ರಯಾಣ ವೆಚ್ಚಗಳ ಪಾವತಿಯನ್ನು ತಡೆಹಿಡಿಯುವ ನಿರ್ಣಯವೊಂದನ್ನು ಅಂಗೀಕರಿಸಿದೆ.

ಆದರೆ, ಸಂಸತ್ತಿನ ಈ ಕ್ರಮ ಹಿಂದೂ ಮಹಾ ಸಾಗರದ ದ್ವೀಪ ರಾಷ್ಟ್ರದ ಪ್ರಧಾನಿ ಮಹಿಂದ ರಾಜಪಕ್ಸರ ವಿವಾದಾಸ್ಪದ ಸರಕಾರದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ.

ಆದರೆ, ಸರಕಾರದ ಸಚಿವರು ಈ ನಿರ್ಣಯಕ್ಕೆ ಸಂಬಂಧಿಸಿದ ಮತದಾನದಲ್ಲಿ ಭಾಗವಹಿಸಲಿಲ್ಲ.

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಸುಮಾರು ಒಂದು ತಿಂಗಳ ಹಿಂದೆ ಅತ್ಯಂತ ವಿವಾದಾಸ್ಪದ ನಡೆಯೊಂದರಲ್ಲಿ, ಪ್ರಧಾನಿ ರನಿಲ್ ವಿಕ್ರಮೆಸಿಂಘೆಯನ್ನು ವಜಾಗೊಳಿಸಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ನೇಮಿಸಿದಂದಿನಿಂದ ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ನೆಲೆಸಿದೆ.

ಈ ಅವಧಿಯಲ್ಲಿ ಸಂಸತ್ತು ರಾಜಪಕ್ಸ ಸರಕಾರವನ್ನು ಎರಡು ಬಾರಿ ತಿರಸ್ಕರಿಸಿದರೂ ಅವರು ರಾಜೀನಾಮೆ ನೀಡಿಲ್ಲ. ವಿದೇಶಗಳು ನೂತನ ಸರಕಾರವನ್ನು ಇನ್ನೂ ಮಾನ್ಯ ಮಾಡಿಲ್ಲ.

ಶುಕ್ರವಾರದ ನಿರ್ಣಯವನ್ನು 225 ಸದಸ್ಯ ಬಲದ ಸಂಸತ್ತು 122-0 ಮತಗಳ ಅಂತರದಿಂದ ಅಂಗೀಕರಿಸಿತು. ಇದಕ್ಕೂ ಒಂದು ದಿನ ಮೊದಲು, ಸಂಸತ್ತು ಪ್ರಧಾನಿ ಕಚೇರಿಯ ಬಜೆಟನ್ನು ಕಡಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News