ಯುಪಿಎ ಆಡಳಿತ ಅವಧಿಯಲ್ಲಿ 3 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು: ರಾಹುಲ್

Update: 2018-12-01 18:03 GMT

ಜೈಪುರ, ಡಿ. 1: ಪ್ರಧಾನಿ ಮನಮೋಹನ್ ಸಿಂಗ್ ಅಧಿಕಾರವಧಿಯಲ್ಲಿ 3 ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಸೇನೆ ಇದನ್ನು ಗೌಪ್ಯವಾಗಿ ಇರಿಸಬೇಕು ಎಂಬ ಕಾರಣಕ್ಕಾಗಿ ಬಹಿರಂಗಪಡಿಸಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ವಿಧಾನ ಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದ ಉದಯಪುರದಲ್ಲಿ ಚುನಾವಣಾ ಪ್ರಚಾರ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಧಾನಿ ಮೋದಿ ಮಾತ್ರ ಮಾಡಿರುವುದಲ್ಲ. ಮನಮೋಹನ್ ಸಿಂಗ್ ಅಧಿಕಾರವಧಿಯಲ್ಲಿ 3 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿರುವುದು ನಿಮಗೆ ಗೊತ್ತಿದೆಯೇ ? ಸೇನೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸಂಪರ್ಕಿಸಿ ಪಾಕಿಸ್ತಾನದ ವಿರುದ್ಧ ಪ್ರತಿದಾಳಿ ನಡೆಸುವ ಅಗತ್ಯತೆ ಇದೆ. ಆದರೆ, ಇದನ್ನು ಗೌಪ್ಯವಾಗಿ ಇರಿಸಲು ಸೇನಾ ಪಡೆ ಬಯಸುತ್ತದೇ ಎಂದು ಹೇಳಿತ್ತು ಎಂದು ಅವರು ತಿಳಿಸಿದರು.

ಸರ್ಜಿಕಲ್ ಸ್ಟ್ರೈಕ್ ಅನ್ನು ಮೋದಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಆಗ ಉತ್ತರಪ್ರದೇಶದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದುದರಿಂದ ಸರ್ಜಿಕಲ್ ಸ್ಟ್ರೈಕ್ ಅನ್ನು ಬಹಿರಂಗಗೊಳಿಸಿತ್ತು. ಸೇನೆಯ ಶ್ರಮವನ್ನು ನಾವು ಸ್ಮರಿಸಬೇಕೇ ಹೊರತು, ನಾವೇ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ ಎಂದು ಬೀಗಬಾರದು. ಇದು ಸೈನಿಕರಿಗೆ ಮಾಡುವ ಅವಮಾನ ಎಂದು ಅವರು ಹೇಳಿದರು.

ಯುಪಿಎ ಅಧಿಕಾರದ ಅವಧಿಯಲ್ಲಿ ಅನುತ್ಪಾದಕ ಆಸ್ತಿ 2 ಲಕ್ಷ ಕೋಟಿ ರೂ. ಇತ್ತು. ಆದರೆ, ಪ್ರಸ್ತುತ ಬಿಜೆಪಿ ಅಧಿಕಾರದ ಅವಧಿಯಲ್ಲಿ ಅದು 12 ಲಕ್ಷ ಕೋ. ರೂ.ಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು. ಕೇಂದ್ರ ಸರಕಾರ 15ರಿಂದ 20 ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿದೆ. ಅನುತ್ಪಾದಕ ಆಸ್ತಿ ಅತಿಸಣ್ಣ, ಸಣ್ಣ, ಮದ್ಯಮ ಉದ್ಯಮಗಳು, ವ್ಯಾಪಾರಿಗಳು ಅಥವಾ ವಕೀಲರದ್ದಲ್ಲ ಎಂದು ಅವರು ಹೇಳಿದರು. ನಗದು ನಿಷೇಧ ಹಾಗೂ ಜಿಎಸ್‌ಟಿ ಜಾರಿ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಇದರ ಬಗ್ಗೆ ಜನರಲ್ಲಿ ಗೊಂದಲವಿದೆ. ಇದು ಬೃಹತ್ ಕಂಪೆನಿಗಳಿಗೆ ಬಾಗಿಲು ತೆರೆದಿಟ್ಟಿದೆ. ನಗದು ನಿಷೇಧ ಹಾಗೂ ಜಿಎಸ್‌ಟಿ ಆರ್ಥಿಕತೆಯನ್ನು ಧ್ವಂಸಗೊಳಿಸಿದೆ ಹಾಗೂ ಜನಸಾಮಾನ್ಯರ ಬೆನ್ನೆಲುಬು ಮುರಿದಿದೆ. ಇದಲ್ಲದೆ ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ಸರಕಾರ ವಿಫಲವಾಗಿದೆ ಎಂದರು.

ಮೋದಿ ಅವರಿಗೆ ಹಿಂದುತ್ವದ ಬಗ್ಗೆ ಏನೂ ಗೊತ್ತಿಲ್ಲ. ಹಿಂದೂ ಧರ್ಮದ ಮೂಲ ಗ್ರಂಥ ಯಾವುದು ? ಅದರ ಸ್ಥಾಪನೆ ಹೇಗಾಯಿತು ಎಂಬ ಬಗ್ಗೆ ಕೊಂಚವೂ ಮಾಹಿತಿ ಇಲ್ಲ. ಹಿಂದೂ ಧರ್ಮಕ್ಕೆ ಅಡಿಪಾಯ ಹಾಕಿದವರು ಯಾರೆಂದು ಗೊತ್ತಿಲ್ಲದ ಮೇಲೆ ಮೋದಿ ಯಾವ ಹಿಂದೂ ?

ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News