ದೇಶಾದ್ಯಂತ ಹನುಮಾನ್ ದೇವಸ್ಥಾನದ ಆಡಳಿತ ಹಕ್ಕು ನೀಡುವಂತೆ ದಲಿತರ ಆಗ್ರಹ

Update: 2018-12-01 15:55 GMT

   ಲಕ್ನೊ, ಡಿ.1: ಕಳೆದ ವಾರ ರಾಜಸ್ತಾನದ ಆಲ್ವಾರ್ ಎಂಬಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ , ಹನುಮಂತ ದಲಿತ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಲಿತ ಸಂಘಟನೆಗಳು, ದೇಶದಾದ್ಯಂತ ಇರುವ ಹನುಮಂತ ದೇವಸ್ಥಾನಗಳ ನಿರ್ವಹಣೆಯ ಹಕ್ಕನ್ನು ತಮಗೆ ನೀಡುವಂತೆ ಆಗ್ರಹಿಸಿವೆ.

ದಿಲ್ಲಿ ಕಾನ್ಪುರ ಹೆದ್ದಾರಿ ಬಳಿಯ ಲಂಗ್ರೇ ಕಿ ಚೌಕಿ ಎಂಬಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಗುರುವಾರ ಜನಿವಾರ ಧರಿಸಿ ಮೆರವಣಿಗೆಯಲ್ಲಿ ಸಾಗಿದ 30ರಷ್ಟು ದಲಿತರು, ಹನುಮಾನ್ ಚಾಲೀಸ ಮಂತ್ರವನ್ನು ಪಠಣೆ ಮಾಡಿದರಲ್ಲದೆ ದಲಿತ ದೇವತೆ ಹನುಮಂತರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

“ಹನುಮಂತ ದೇವರು ನಮ್ಮ ಸಮುದಾಯಕ್ಕೆ ಸೇರಿದವರು ಎಂದು ನಮಗೆ ತಿಳಿದಿರಲಿಲ್ಲ. ಇದನ್ನು ಮುಖ್ಯಮಂತ್ರಿ ಆದಿತ್ಯನಾಥ್ ನಮಗೆ ತಿಳಿಸಿಕೊಟ್ಟರು. ಈಗ ಎಲ್ಲಾ ಹನುಮಂತ ದೇವಸ್ಥಾನಗಳ ನಿರ್ವಹಣೆಯ ಹಕ್ಕನ್ನೂ ನಮಗೆ ನೀಡಬೇಕು. ಮುಖ್ಯಮಂತ್ರಿಗಳಿಗೆ ತಮ್ಮ ಮಾತಿನಲ್ಲಿ ಅಷ್ಟೊಂದು ವಿಶ್ವಾಸವಿದೆ ಎಂದಾದರೆ ಈ ದೇವಸ್ಥಾನಗಳನ್ನು ದಲಿತರಿಗೆ ಹಸ್ತಾಂತರಿಸಲು ಮುಂದೆ ಬರಬೇಕು” ಎಂದು ದಲಿತ ಮುಖಂಡರ ಮೆರವಣಿಗೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಅಮಿತ್ ಸಿಂಗ್ ಹೇಳಿದ್ದಾರೆ.

ಈ ಮಧ್ಯೆ, ಕರುಕಾಹ್‌ನಲ್ಲಿ ಜನತೆ ಆಡುವ ಭಾಷೆಗೆ ಟಿಗ್ಗ(ಮಂಗ) ಎಂಬ ಹೆಸರಿದೆ. ನಮ್ಮ ಕನ್ವರ್ ಪಂಗಡದಲ್ಲಿ ‘ಹನುಮಾನ್’ ಎಂಬ ಹೆಸರಿನ ವಂಶವೊಂದಿದೆ. ಆದ್ದರಿಂದ ಹನುಮ ಬುಡಕಟ್ಟು ವಂಶಕ್ಕೆ ಸೇರಿದವನಾಗಿರಬೇಕು ಮತ್ತು ರಾವಣನ ಎದುರಿನ ಯುದ್ದದಲ್ಲಿ ರಾಮನ ಪರ ಹೋರಾಟ ನಡೆಸಿರಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷ ನಂದಕುಮಾರ್ ಸಾಯ್ ಹೇಳಿದ್ದಾರೆ. ಆದಿತ್ಯನಾಥ್ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್‌ನ ರಾಜಸ್ತಾನ ಘಟಕ, ಚುನಾವಣಾ ಆಯೋಗದಲ್ಲಿ ದೂರು ದಾಖಲಿಸಿದೆ. ದೇವರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು. ದೇವರು ಜಾತಿಯ ಕಟ್ಟುಪಾಡನ್ನು ಮೀರಿ ನಿಂತವರು ಉ.ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News