ಬಿಜೆಪಿ ಸರಕಾರವನ್ನು ಟೀಕಿಸಿದ ಪತ್ರಕರ್ತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನ

Update: 2018-12-01 15:55 GMT

ಇಂಫಾಲ, ಡಿ.1: ಮಣಿಪುರದ ಸ್ವಾತಂತ್ರ್ಯ ಚಳವಳಿಗೂ ಝಾನ್ಸಿ ರಾಣಿ ಹೋರಾಟಕ್ಕೂ ಸಂಪರ್ಕವಿದೆ ಎಂದಿರುವ ಬಿಜೆಪಿ ನೇತೃತ್ವದ ರಾಜ್ಯ ಸರಕಾರವನ್ನು ಟೀಕಿಸಿ ವೀಡಿಯೊ ಪೋಸ್ಟ್ ಮಾಡಿರುವ ಆರೋಪದಲ್ಲಿ ಮಣಿಪುರದ ಪತ್ರಕರ್ತನನ್ನು ನವೆಂಬರ್ 27ರಂದು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯಡಿ ಬಂಧಿಸಿರುವುದಾಗಿ ವರದಿಯಾಗಿದೆ.

ಮೈಟಿ ಭಾಷೆಯಲ್ಲಿ ಪ್ರಸಾರವಾಗಿರುವ ವೀಡಿಯೊದಲ್ಲಿ ಪತ್ರಕರ್ತ ಕಿಶೋರ್‌ಚಂದ್ರ ವಾಂಗ್‌ಖೆಮ್ ರಾಜ್ಯದ ಬಿಜೆಪಿ ಸರಕಾರ ಹಾಗೂ ಆರೆಸ್ಸೆಸ್ ಬಗ್ಗೆ ಅವಹೇಳನಾತ್ಮಕವಾಗಿ ಮಾತನಾಡಿದ್ದಾರೆ . ಅಲ್ಲದೆ ಬಿಜೆಪಿ ಮುಖಂಡರ ಹೇಳಿಕೆಯನ್ನು ವಿರೋಧಿಸಿರುವ ತನ್ನನ್ನು ಸಾಧ್ಯವಿದ್ದರೆ ಬಂಧಿಸುವಂತೆ ಸವಾಲನ್ನೂ ಹಾಕಿದ್ದಾರೆ ಎನ್ನಲಾಗಿದೆ.

ನವೆಂಬರ್ 19ರಂದು ನಡೆದ ಝಾನ್ಸಿ ರಾಣಿಯ ಜನ್ಮದಿನಾಚರಣೆ ಸಂದರ್ಭದಲ್ಲಿ ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಮಾತನಾಡಿ, ಝಾನ್ಸಿ ರಾಣಿಯ ಹೋರಾಟ ಹಾಗೂ ಮಣಿಪುರದ ಸ್ವಾತಂತ್ರ್ಯ ಹೋರಾಟಕ್ಕೂ ಸಂಬಂಧವಿದೆ ಎಂದಿದ್ದರು. ಈ ಹೇಳಿಕೆಯನ್ನು ಪತ್ರಕರ್ತ ಕಿಶೋರ್‌ಚಂದ್ರ ವಾಂಗ್‌ಖೆಮ್ ಖಂಡಿಸಿರುವ ವೀಡಿಯೊ ವೈರಲ್ ಆಗಿರುವಂತೆಯೇ, ಅವರನ್ನು ಖಾಸಗಿ ಟಿವಿ ಚಾನೆಲ್ ಐಎಸ್‌ಟಿವಿಯಿಂದ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಶೋರ್‌ ಚಂದ್ರರ ಪತ್ನಿ ಎಳಾಂಗ್‌ಬಾಮ್ ರಂಜಿತ, ತನ್ನ ಪತಿಯನ್ನು ನವೆಂಬರ್ 21ರಂದು ಬಂಧಿಸಿದ್ದ ಪಶ್ಚಿಮ ಪೊಲೀಸರು ಐದು ದಿನ ಪೊಲೀಸ್ ಕಸ್ಟಡಿಯಲ್ಲಿ ಇರಿಸಿದ್ದರು ಎಂದು ದೂರಿದ್ದಾರೆ. ನವೆಂಬರ್ 21ರಂದು ಕಿಶೋರ್‌ ಚಂದ್ರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾಗ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆದರೆ 24 ಗಂಟೆಯೊಳಗೆ, ಸಮವಸ್ತ್ರ ಧರಿಸಿರದ ಐದಾರು ಪೊಲೀಸರು ಮನೆಗೆ ಬಂದು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಸಂಜೆಯಾದರೂ ಪತಿ ಮನೆಗೆ ಮರಳದ ಕಾರಣ ತಾನು ಠಾಣೆಗೆ ಹೋಗಿ ವಿಚಾರಿಸಿದಾಗ ಅವರನ್ನು ಸೆಂಟ್ರಲ್ ಜೈಲಿಗೆ ಹಾಕಲಾಗಿದ್ದು ಆತನ ವಿರುದ್ಧದ ಆರೋಪವನ್ನು ನಾಳೆ ಬೆಳಿಗ್ಗೆ ತಿಳಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 29ರವರೆಗೆ ನಮಗೆ ಯಾವ ಮಾಹಿತಿಯನ್ನೂ ನೀಡಲಾಗಿಲ್ಲ. ನವೆಂಬರ್ 29ರಂದು ಸೆಂಟ್ರಲ್ ಜೈಲಿನಲ್ಲಿದ್ದ ಪತಿಯನ್ನು ಭೇಟಿ ಮಾಡಲು ಅವಕಾಶ ದೊರೆಯಿತು. ಆಗ ವೀಡಿಯೊದಲ್ಲಿ ಕಿಶೋರ್‌ಚಂದ್ರ ನೀಡಿದ ಹೇಳಿಕೆ ಪ್ರಚೋದಕವಾಗಿರುವ ಕಾರಣ ಅವರನ್ನು ಎನ್‌ಎಸ್‌ಎ ಅಡಿ ಬಂಧಿಸಲಾಗಿದೆ ಎಂದು ನೋಟಿಸ್ ನೀಡಿರುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

“ನನ್ನ ಪತಿ ಭಯೋತ್ಪಾದಕನಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ತನ್ನ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಈ ರೀತಿಯ ಪ್ರಜಾಪ್ರಭುತ್ವ ವಿರೋಧಿ ವರ್ತನೆಯನ್ನು ಎಲ್ಲರೂ ಖಂಡಿಸಬೇಕು” ಎಂದವರು ಹೇಳಿದ್ದಾರೆ. ಕಿಶೋರ್‌ಚಂದ್ರರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ನವೆಂಬರ್ 30ರಂದು ಕೀಶಮ್‌ಥಾಂಗ್ ಪ್ರದೇಶದಲ್ಲಿ ಹಲವಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಅವಹೇಳನಕಾರಿ ಪದ ಬಳಸಿದರೆಂಬ ಕಾರಣಕ್ಕೆ ಬಿಜೆಪಿ ಸರಕಾರ ವ್ಯಕ್ತಿಯೊಬ್ಬನ ಮೇಲೆ ಎನ್‌ಎಸ್‌ಎಯಡಿ ಪ್ರಕರಣ ದಾಖಲಿಸುವುದಾದರೆ ಅದು ಸರಕಾರಕ್ಕಿರುವ ಅಭದ್ರತೆಯ ಭಾವನೆಯನ್ನು ತೋರಿಸುತ್ತದೆ. ಜೊತೆಗೆ, ಈ ಪ್ರಕರಣದಲ್ಲಿ ಬಂಧಿತ ಪತ್ರಕರ್ತನ ನೆರವಿಗೆ ಧಾವಿಸದೆ ವೌನವಾಗಿರುವ ಮಾಧ್ಯಮಗಳ ವರ್ತನೆಯಿಂದ ಆಘಾತವಾಗಿದೆ ಎಂದು ಮಣಿಪುರದ ಖ್ಯಾತ ಜಾದೂಗಾರ ಅಖು ಚಿಂಗಾಂಗ್‌ಬಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News