ರಾವಣ ಹಣೆಪಟ್ಟಿ,ಗುಂಪಿನಿಂದ ಹತ್ಯೆ ಆತಂಕದಲ್ಲಿ ಭಾರತಕ್ಕೆ ಮರಳಲು ನೀರವ್ ಮೋದಿಗೆ ಭಯವಂತೆ!

Update: 2018-12-01 17:12 GMT

ಮುಂಬೈ,ಡಿ.1: ಎರಡು ಶತಕೋಟಿ ಡಾ.ಗಳ ಪಿಎನ್‌ಬಿ ವಂಚನೆ ಪ್ರಕರಣದ ಪ್ರಮುಖ ಆರೋಪಿ,ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಗೆ ಗುಂಪಿನಿಂದ ಹತ್ಯೆಯಾಗುವ ಮತ್ತು ತನ್ನನ್ನು ರಾವಣನಿಗೆ ಹೋಲಿಸುತ್ತಿರುವ ಭೀತಿಯಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲವಂತೆ.

ಮೋದಿ ಪರ ವಕೀಲರು ಶನಿವಾರ ಈ ವಿಷಯವನ್ನು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಇದನ್ನು ತಳ್ಳಿಹಾಕಿದ ಜಾರಿ ನಿರ್ದೇಶನಾಯ(ಇಡಿ)ವು,ತನಗೆ ಭದ್ರತಾ ಬೆದರಿಕೆಯಿದೆ ಎಂದು ಮೋದಿ ಭಾವಿಸಿದ್ದರೆ ಪೊಲೀಸ್ ದೂರನ್ನು ದಾಖಲಿಸಬೇಕಿತ್ತು ಎಂದು ಹೇಳಿತು.

ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಮೋದಿಯನ್ನು ದೇಶಭ್ರಷ್ಟನೆಂದು ಘೋಷಿಸುವಂತೆ ಕೋರಿ ಇಡಿ ಸಲ್ಲಿಸಿರುವ ಅರ್ಜಿಯ ವಿರುದ್ಧ ಪಿಎಂಎಲ್‌ಎ ನ್ಯಾಯಾಲಯದ ನ್ಯಾ.ಎಂ.ಎಸ್.ಆಝ್ಮಿ ಅವರ ಮುಂದೆ ವಾದಿಸಿದ ಮೋದಿ ಪರ ವಕೀಲ ವಿಜಯ ಅಗರವಾಲ್ ಅವರು,ತನ್ನ ಹಣಕಾಸು ಕುರಿತು ಯಾವುದೇ ದಾಖಲೆ ಅಥವಾ ದತ್ತಾಂಶ ಮೋದಿ ಬಳಿಯಿಲ್ಲ ಎಂದು ತಿಳಿಸಿದರು.

ತಾನು ಕಳುಹಿಸಿದ್ದ ಮೇಲ್‌ಗಳು ಮತ್ತು ಸಮನ್ಸ್ ಗಳನ್ನು ಸ್ವೀಕರಿಸಿದ್ದರೂ ತನಿಖೆಗೆ ಹಾಜರಾಗಲು ಮೋದಿ ತಿರಸ್ಕರಿಸಿದ್ದಾರೆ ಎಂದು ಇಡಿ ಪ್ರತಿಪಾದಿಸಿದೆ.

ಆದರೆ,ತನಿಖಾ ಸಂಸ್ಥೆಗಳ ಮೇಲ್‌ಗಳಿಗೆ ಮೋದಿ ಉತ್ತರಿಸಿದ್ದಾರೆ ಮತ್ತು ಭದ್ರತಾ ಬೆದರಿಕೆಗಳಿಂದಾಗಿ ಭಾರತಕ್ಕೆ ಮರಳಲು ತನ್ನ ಅಸಾಮರ್ಥ್ಯವನ್ನು ವ್ಯಕ್ತಡಿಸಿದ್ದಾರೆ ಎಂದು ಅಗರವಾಲ್ ತಿಳಿಸಿದರು.

ಭಾರತದಲ್ಲಿ ತನ್ನ 50 ಅಡಿ ಎತ್ತರದ ಪ್ರತಿಕೃತಿಯನ್ನು ದಹಿಸಲಾಗಿದೆ. ತಾನು ಗುಂಪಿನಿಂದ ಥಳಿಸಲ್ಪಟ್ಟು ಹತ್ಯೆಗೊಳಗಾಗುವ ಬಗ್ಗೆ ನಂಬಲರ್ಹ ಸೂಚನೆಗಳಿವೆ ಮತ್ತು ತನ್ನನ್ನು ರಾವಣನಿಗೆ ಹೋಲಿಸಲಾಗುತ್ತಿದೆ. ತನ್ನನ್ನು ದುಷ್ಟನೆಂದು ಬಿಂಬಿಸಲಾಗುತ್ತಿದೆ ಮತ್ತು ಬ್ಯಾಂಕ್ ವಂಚನೆಯ‘ಪೋಸ್ಟರ್ ಬಾಯ್’ ಆಗಿ ಮಾಡಲಾಗುತ್ತಿದೆ ಎಂದು ಮೋದಿ ತನ್ನ ವಕೀಲರ ಮೂಲಕ ನ್ಯಾಯಾಲತಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News