4 ಡಿಗ್ರಿ ವಾಲಿ ನಿಂತಿರುವ ಮಂಗಳ ಶೋಧಕ ‘ಇನ್‌ಸೈಟ್’
ಲಾಸ್ ಏಂಜಲಿಸ್, ಡಿ. 1: ನಾಸಾದ ಮಂಗಳ ಶೋಧಕ ನೌಕೆ ‘ಇನ್‌ಸೈಟ್’ ಕೆಂಪು ಗ್ರಹದಲ್ಲಿ ಕಿರು ಕೋನದಲ್ಲಿ ಇಳಿದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಶುಕ್ರವಾರ ಹೇಳಿದೆ.
ಅದೇ ವೇಳೆ, ನೌಕೆಯು ಯೋಜಿತ ರೀತಿಯಲ್ಲಿ ಕೆಲಸ ಮಾಡುವ ವಿಶ್ವಾಸವನ್ನು ಪರಿಣತರು ಹೊಂದಿದ್ದಾರೆ.
ಇನ್‌ಸೈಟ್ ನೌಕೆಯು ಸೋಮವಾರ ತನ್ನ ಗಮ್ಯಸ್ಥಾನವಾದ ‘ಎಲಿಸಿಯಮ್ ಪ್ಲಾನಿಶಿಯ’ ಎಂಬ ಮಂಗಳ ಗ್ರಹದ ಬಯಲು ಪ್ರದೇಶದಲ್ಲಿ ಇಳಿದಿದೆ. ಭೂಮಿಯ ನೆರೆಯ ಗ್ರಹ ಹೇಗೆ ರೂಪುಗೊಂಡಿದೆ ಎಂಬುದನ್ನು ಅದು ಎರಡು ವರ್ಷಗಳ ಕಾಲ ಅಧ್ಯಯನ ಮಾಡಲಿದೆ.
‘‘ನೌಕೆಯು ತೆಳು ಧೂಳಿನಲ್ಲಿ ಸುಮಾರು 4 ಡಿಗ್ರಿಗಳಷ್ಟು ವಾಲಿ ನಿಂತಿದೆ’’ ಎಂದು ನಾಸಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
15 ಡಿಗ್ರಿವರೆಗಿನ ಕೋನದ ಮೇಲ್ಮೈಯಲ್ಲೂ ಕೆಲಸ ಮಾಡಲು ಸಾಧ್ಯವಾಗುವಂತೆ ಅದನ್ನು ರೂಪಿಸಲಾಗಿದೆ.
ಹಾಗಾಗಿ, ಅದರ ಎರಡು ಪ್ರಮುಖ ಉಪಕರಣಗಳಾದ ಕಂಪನ ಸೆನ್ಸರ್ ಮತ್ತು ಮೇಲ್ಮೈ ಕೆಳಗಿನ ಉಷ್ಣತೆಯನ್ನು ಅಳೆಯುವ ‘ಸೆಲ್ಫ್ ಹ್ಯಾಮರಿಂಗ್ ಮೋಲ್’ ಯೋಜಿತ ರೀತಿಯಲ್ಲಿ ಕೆಲಸ ಮಾಡುವ ಭರವಸೆಯಿದೆ ಎಂದು ಪರಿಣತರು ಹೇಳುತ್ತಾರೆ.