ಎಚ್ಚರಿಕೆ, ಬ್ಯಾಂಕಿಂಗ್ ವಂಚನೆಗಳು ಹೆಚ್ಚುತ್ತಿವೆ

Update: 2018-12-02 16:27 GMT

ಬ್ಯಾಂಕಿಂಗ್ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ)ವು ಸಂಭಾವ್ಯ ವಂಚನೆ ವಿಧಾನಗಳು ಮತ್ತು ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ)ನಲ್ಲಿ ಇಂತಹ ವಂಚನೆಗಳಿಂದ ಹೇಗೆ ಸುಲಭವಾಗಿ ಪಾರಾಗಬಹುದು ಎನ್ನುವ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಜಾಗೃತಿ ಕಾರ್ಯಕ್ರಮವನ್ನು ಆರಂಭಿಸಿದೆ.

ಇದಕ್ಕಾಗಿ ವೀಡಿಯೊವೊಂದನ್ನು ಬಿಡುಗಡೆಗೊಳಿಸಿರುವ ಎನ್‌ಪಿಸಿಐ ದೂರವಾಣಿ ಕರೆಯ ಮೂಲಕ ವಂಚನೆ ಯಾವುದೇ ಸಮಯದಲ್ಲಿಯೂ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದೆ. ನೀವು ಎರಡು ಕೋ.ರೂ.ಗಳ ಲಾಟರಿಯನ್ನು ಗೆದ್ದಿದ್ದೀರಿ,ನಿಮ್ಮ ಯುಪಿಐ ಐಡಿ ಮತ್ತು ಯುಪಿಐ ಪಿನ್ ವಿವರಗಳನ್ನು ನೀಡಿ;ನಿಮ್ಮ ಮೊಬೈಲ್ ಸಂಪರ್ಕದ ಮೇಲೆ ನಿಮ್ಮ ಸಾಲದ ಮಿತಿಯನ್ನು ಹೆಚ್ಚಿಸುತ್ತಿದ್ದೇವೆ,ಕೇವಲ ಒಂದು ಎಸ್‌ಎಂಎಸ್ ಕಳುಹಿಸಿ;ನಿಮ್ಮ ಖಾತೆಯಲ್ಲಿ ಶಂಕಾಸ್ಪದ ಚಟುವಟಿಕೆಗಳು ನಡೆಯುತ್ತಿರುವಂತೆ ಕಂಡು ಬಂದಿದೆ,ನಿಮಗೆ ಒಟಿಪಿಯನ್ನು ಕಳುಹಿಸಿದ್ದೇವೆ ಮತ್ತು ಅದನ್ನು ತಕ್ಷಣ ನಮ್ಮೊಂದಿಗೆ ಹಂಚಿಕೊಳ್ಳಿ; ನಿಮ್ಮ ಡೆಬಿಟ್ ಕಾರ್ಡ್ ನಲ್ಲಿ ವಂಚನೆಯ ಚಟುವಟಿಕೆಗಳು ಕಂಡು ಬರುತ್ತಿವೆ,ನಿಮ್ಮ ಡೆಬಿಟ್ ವಿವರಗಳನ್ನು ತಕ್ಷಣ ನೀಡಿ ಎಂಬಿತ್ಯಾದಿ ದೂರವಾಣಿ ಕರೆಗಳು ಇವುಗಳಲ್ಲಿ ಸೇರಿವೆ.

ಹೀಗೆ ಕರೆ ಮಾಡುವವರು ಬಣ್ಣದ ಮಾತುಗಳಿಂದ ಆಮಿಷವೊಡ್ಡಿ,ಹೆಚ್ಚಿನ ಪ್ರಕರಣಗಳಲ್ಲಿ ಖಾತೆಗಳ ವಿವರಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾಗುತ್ತಾರೆ. ಇಂತಹ ಕರೆಗಳಲ್ಲಿ ಕೇಳಲಾಗುವ ಯಾವುದೇ ಮಾಹಿತಿಯನ್ನು ಒದಗಿಸದಂತೆ ಎನ್‌ಸಿಪಿಐ ಜನರಿಗೆ ಸೂಚಿಸಿದೆ. ಇಂತಹ ದೂರವಾಣಿ ಕರೆಗಳಿಗೆ ಮರುಳಾಗಿ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳದಂತೆ,ತಮ್ಮ ಖಾತೆಗೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ಕೈಗೊಳ್ಳದಂತೆ,ನೂತನ ಸಿಮ್ ಕಾರ್ಡ್ ರಿಜಿಸ್ಟರ್ ಮಾಡಿಸದಂತೆ ಅಥವಾ ಒಟಿಪಿಯನ್ನು ಹಂಚಿಕೊಳ್ಳದಂತೆ ಜಾಗ್ರತೆ ವಹಿಸುವಂತೆ ಅದು ಎಚ್ಚರಿಕೆ ನೀಡಿದೆ. ಯಾವುದೇ ಬ್ಯಾಂಕು ಅವಾ ಹಣಕಾಸು ಸಂಸ್ಥೆ ಎಂದೂ ಇಂತಹ ವಿವರಗಳ್ನು ಕೇಳುವುದಿಲ್ಲ ಎನ್ನುವುದನ್ನು ಜನರು ಮರೆಯಬಾರದು ಎಂದು ಅದು ತಿಳಿಸಿದೆ.

* ಡೆಬಿಟ್ ಕಾರ್ಡ್,ಒಟಿಪಿ,ಯುಪಿಐ ಐಡಿ ಮತ್ತು ಪಿನ್ ಅನ್ನು ಎಂದೂ ದೂರವಾಣಿಯಲ್ಲಿ ಹಂಚಿಕೊಳ್ಳಬೇಡಿ.

* ಅಪರಿಚಿತ ಕೋಡ್ ಹೊಂದಿರುವ ಅಪರಿಚಿತ ನಂಬರ್‌ಗಳಿಗೆ ಎಂದೂ ಎಸ್‌ಎಂಎಸ್ ಕಳುಹಿಸಬೇಡಿ,ಏಕೆಂದರೆ ಇದು ಸಿಮ್ ಸ್ವಾಪ್ ಅಥವಾ ಸಿಮ್ ಸ್ಪೂಂಗ್ ವಂಚನೆಗೆ ಅವಕಾಶ ನೀಡುತ್ತದೆ.

* ಅನಧಿಕೃತ ಮೂಲಗಳಿಗೆ ಎಂದೂ ಹಣವನ್ನು ಕಳುಹಿಸಬೇಡಿ.

* ನಿಮ್ಮ ವಹಿವಾಟುಗಳ ವಿವರಗಳನ್ನೆಂದಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬೇಡಿ.

* ಯಾವುದೇ ಶಂಕಾಸ್ಪದ ಚಟುವಟಿಕೆ ನಿಮ್ಮ ಗಮನಕ್ಕೆ ಬಂದರೆ ತಕ್ಷಣವೇ ನಿಮ್ಮ ಬ್ಯಾಂಕು ಅಥವಾ ಟೆಲಿಕಾಂ ಕಂಪನಿಯನ್ನು ಸಂಪರ್ಕಿಸಿ.

* ಯಾವುದೇ ಕ್ರಮಕ್ಕೆ ಮುನ್ನ ನಿಮ್ಮ ಬ್ಯಾಂಕು ಅಥವಾ ಮೊಬೈಲ್ ಕಂಪನಿಯನ್ನು ವಿಚಾರಿಸಿ ಮಾಹಿತಿಗಳನ್ನು ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News