"ದಲಿತರು, ಮುಸ್ಲಿಮರ ವಿರುದ್ಧ ಸುಳ್ಳು ಕೇಸು ಹಾಕುತ್ತೇನೆ"

Update: 2018-12-02 17:38 GMT

ಮಹಾರಾಷ್ಟ್ರ, ಡಿ.2: ದಲಿತರು ಮತ್ತು ಮುಸ್ಲಿಮರ ವಿರುದ್ಧ ತಾನು ಹೇಗೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತೇನೆ ಎಂದು ಮಹಾರಾಷ್ಟ್ರದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಿರುವ ವಿಡಿಯೋವೊಂದು ವಿವಾದ ಸೃಷ್ಟಿಸಿದೆ. ಈ ಬಗ್ಗೆ scroll.in ವರದಿ ಮಾಡಿದೆ.

“ನಾನು ದಲಿತರ ಕೈ ಮತ್ತು ಕಾಲುಗಳನ್ನು ಕಟ್ಟಿ ಹಾಕಿ ನನ್ನ ಕೋಪವನ್ನು ಅದರ (ದೌರ್ಜನ್ಯ ಕಾಯ್ದೆ) ವಿರುದ್ಧ ಅವರ ಮೇಲೆ ತೀರಿಸಿಕೊಳ್ಳುತ್ತೇನೆ” ಎಂದು ಮಹಾರಾಷ್ಟ್ರದ ಮಜಲ್ಗಾಂವ್ ನ ಡಿವೈಎಸ್ ಪಿ ಭಾಗ್ಯಶ್ರೀ ನವ್ಟಾಕೆ ಎನ್ನುವವರು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯನ್ವಯ ದೂರು ನೀಡಲು ಬಂದಿದ್ದ 21 ದಲಿತರ ವಿರುದ್ಧ ತಾನು ತನ್ನ ಜೊತೆಗಿದ್ದ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದೇನೆ. ಭಾರತೀಯ ದಂಡಸಂಹಿತೆಯ 307 ಸೆಕ್ಷನ್ ನಡಿ ಅಥವಾ ಕೊಲೆಯತ್ನ ಪ್ರಕರಣಗಳನ್ನು ತಾನು ಮುಸ್ಲಿಮರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದೇನೆ. ಆದ್ದರಿಂದ ಅವರಿಗೆ ಸುಲಭವಾಗಿ ಜಾಮೀನು ಸಿಗುವುದಿಲ್ಲ ಎಂದು ವಿಡಿಯೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಹೇಳುವುದು ಕೇಳಿಸುತ್ತದೆ.

ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲ್ಪಟ್ಟ ಮರಾಠಾ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿ ಜೊತೆಗೆ ಮಾತುಕತೆ ನಡೆಸುತ್ತಿರುವುದು ವಿಡಿಯೋದಲ್ಲಿದೆ. ತಾನು ಈಗ ನಿನ್ನನ್ನು ಬಿಡುಗಡೆಗೊಳಿಸಿದರೆ ಆಕ್ರೋಶಗಳು ವ್ಯಕ್ತವಾಗಬಹುದು ಎಂದು ಮಹಿಳಾ ಅಧಿಕಾರಿ ಆತನಿಗೆ ಹೇಳುತ್ತಾರೆ.

ತಾನು ಪುಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಇಂತಹ ಪ್ರಕರಣಗಳನ್ನು ಹೇಗೆ ನಿಭಾಯಿಸಿದ್ದೆ ಎಂದೂ ಇದೇ ಸಂದರ್ಭ ಆಕೆ ವಿವರಿಸಿದ್ದಾರೆ. ಆ ಪ್ರಕರಣದಲ್ಲಿ ಮೂರು ದಿನಗಳ ಕಾಲ ಆಕೆ ಮರಾಠರನ್ನು ಬಂಧಿಸಿರಲಿಲ್ಲ, ಬದಲಾಗಿ ದಲಿತರ ವಿರುದ್ಧ ಹೇಗೆ ಪ್ರಕರಣ ದಾಖಲಿಸಬಹುದೆಂದು ಆಕೆ ಹೇಳಿದ್ದಾಗಿ ಆ ವ್ಯಕ್ತಿ ನೆನಪಿಸುತ್ತಾನೆ. ಇದೇ ಸಂದರ್ಭ ಭಾರತೀಯ ದಂಡಸಂಹಿತೆಯ ಸೆಕ್ಷನ್ 122ರಡಿ ದಲಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿ ಆರೋಪಿಗಳಿಗೆ ಸಲಹೆ ನೀಡುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಸ್ಕ್ರೋಲ್ ಡಾಟ್ ಇನ್ ನವ್ಟಾಕೆಯವರನ್ನು ಸಂಪರ್ಕಿಸಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News