ತೆಲಂಗಾಣ ಕಾಂಗ್ರೆಸ್ ಪ್ರಣಾಳಿಕೆ ‘ಮುಸ್ಲಿಂ ಕೇಂದ್ರಿತ’ ಎಂದು ಅರ್ಧಸತ್ಯ ಹೇಳಿದ ಟೈಮ್ಸ್ ನೌ, ರಿಪಬ್ಲಿಕ್ ಟಿವಿ

Update: 2018-12-04 06:58 GMT

ತೆಲಂಗಾಣ ಚುನಾವಣೆ: ಶಾಕಿಂಗ್; ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಮರಿಗೆ ಮಾತ್ರ ಶಾಲೆ, ಸರಕಾರಿ ಗುತ್ತಿಗೆ ನೀಡಲು ಪಣ ತೊಟ್ಟಿದೆ- ವಿವರಗಳು’’ ಎಂಬ ಶೀರ್ಷಿಕೆಯ ಸುದ್ದಿ ‘ಟೈಮ್ಸ್‌ ನೌ’ನಲ್ಲಿ 2018ರ ನವೆಂಬರ್ 27ರಂದು ಪ್ರಕಟವಾಯಿತು. ಈ ವರದಿಯ ಪ್ರಕಾರ, ‘‘ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಮತದಾರರನ್ನು ಓಲೈಸುವ ಸಲುವಾಗಿ ಮುಸ್ಲಿಮರಿಗೆ ಸೀಮಿತವಾದ ಏಳು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದೆ. ಎಲ್ಲ ಮಸೀದಿಗಳು ಮತ್ತು ಚರ್ಚ್‌ಗಳಿಗೆ ಉಚಿತ ವಿದ್ಯುತ್, ಮುಸ್ಲಿಂ ಯುವಕರಿಗೆ ಸರಕಾರಿ ಕಾಮಗಾರಿ ಗುತ್ತಿಗೆಯಲ್ಲಿ ವಿಶೇಷ ಅವಕಾಶ, ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷ ರೂಪಾಯಿ ನೆರವು, ಮುಸ್ಲಿಮರಿಗೆ ಸನಿವಾಸ ಶಾಲೆ, ಅಲ್ಪಸಂಖ್ಯಾತರಿಗೆ ಆಸ್ಪತ್ರೆಗಳು. ಇವು ಕಾಂಗ್ರೆಸ್ ಪ್ರಣಾಳಿಕೆಯ ಅಂಶಗಳು’’ ಎಂದು ವರದಿ ವಿವರಿಸಿತ್ತು.

ಟೈಮ್ಸ್ ನೌ ಕಾರ್ಯನಿರ್ವಾಹಕ ಸಂಪಾದಕ ನವಿಕಾ ಕುಮಾರ್ ಅವರು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿಶೇಷ ಕಾರ್ಯಕ್ರಮವೊಂದನ್ನೂ ನಡೆಸಿಕೊಟ್ಟರು. ಇದರಲ್ಲಿ ‘‘ಮುಸ್ಲಿಮರಿಗಾಗಿ ಆಸ್ಪತ್ರೆ ನಿರ್ಮಿಸಲಾಗುತ್ತದೆ; ಮುಸ್ಲಿಮರಿಗೆ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ’’ ಎಂದು ಹೇಳಿದ್ದರು. ರಿಪಬ್ಲಿಕ್ ಟಿವಿ ಕೂಡಾ ಇದೇ ಅರ್ಥದ ವರದಿ ಮಾಡಿ, ‘‘ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಕ್ಕೆ ಏಳು ವಿಶೇಷ ಯೋಜನೆಗಳನ್ನು ಘೋಷಿಸಿದೆ’’ ಎಂದು ಹೇಳಿತು. ಈ ವರದಿಯ ಶೀರ್ಷಿಕೆ ಹೀಗಿತ್ತು: ‘‘ತೆಲಂಗಾಣದಲ್ಲಿ ಓಲೈಕೆ ಮೇಲೆ ಓಡುತ್ತಿರುವ ಕಾಂಗ್ರೆಸ್; ಮುಸ್ಲಿಮರಿಗೆ ಮಾತ್ರ ಶಾಲೆ, ಆಸ್ಪತ್ರೆಗಳು, ಮಸೀದಿಗಳಿಗೆ ಉಚಿತ ವಿದ್ಯುತ್ ಭರವಸೆ’’

ಆದರೆ ವಾಸ್ತವವಾಗಿ ಮುಸ್ಲಿಮರ ಅಗತ್ಯ ಈಡೇರಿಸುವ ಸಲುವಾಗಿ ಕಾಂಗ್ರೆಸ್ ಪಕ್ಷ ನೀಡಿದ ಏಳು ಭರವಸೆಗಳು ಈ ಕೆಳಗಿನಂತಿವೆ.
1. ಸರಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂ ಯುವಕರನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ.
2. ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷ ರೂಪಾಯಿವರೆಗೂ ಹಣಕಾಸು ನೆರವು ನೀಡಲಾಗುವುದು.
3. ಮುಸ್ಲಿಂ ವಿದ್ಯಾರ್ಥಿಗಳಿಗೆ ವಿಶೇಷ ಸನಿವಾಸ ಶಾಲೆ
4. ಅಲ್ಪಸಂಖ್ಯಾತರಿಗಾಗಿ ವಿಶೇಷ ಉರ್ದು ಡಿಎಸ್‌ಸಿ (ಶಿಕ್ಷಕರ ನೇಮಕಾತಿಗೆ ಜಿಲ್ಲಾ ಆಯ್ಕೆ ಸಮಿತಿ)ಯನ್ನು ಘೋಷಿಸಲಾಗುವುದು.
5. ಮುಸ್ಲಿಮರಿಗೆ ವಿಶೇಷವಾಗಿ ಆಸ್ಪತ್ರೆಗಳನ್ನು ತೆರೆಯಲಾಗುವುದು.
6. ಧರ್ಮದ ಆಧಾರದಲ್ಲಿ ಉದ್ಯೋಗ ನಿರಾಕರಿಸುವ ಖಾಸಗಿ ಕಂಪೆನಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
7. ಮಸೀದಿ ಮತ್ತು ಚರ್ಚ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು.

ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಕೂಡಾ ತಮ್ಮ ವಾಹಿನಿಯಲ್ಲಿ ಪ್ರಸಾರವಾದ ಲೇಖನದ ಅಂಶಗಳನ್ನು ಪುನರುಚ್ಚರಿಸಿದರು.

ಪ್ರತಿಪಾದನೆ ವರ್ಸಸ್ ಪ್ರಣಾಳಿಕೆ

ಆರೋಪ 1: ಮಸೀದಿ ಹಾಗೂ ಚರ್ಚ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ
ಕಾರ್ಮಿಕ ವಲಯದಡಿ, ರಾಜ್ಯದ ಎಲ್ಲ ದೇವಾಲಯಗಳು, ಮಸೀದಿಗಳು ಮತ್ತು ಚರ್ಚ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುವುದು. ಮೇಲೆ ಹೇಳಿದ ಮಾಧ್ಯಮಗಳಲ್ಲಿ ವರದಿಯಾದಂತೆ, ದೇಗುಲಗಳಿಗೆ ಉಚಿತ ವಿದ್ಯುತ್ ಸರಬರಾಜು ಪ್ರಸ್ತಾವವನ್ನು ಮರೆಮಾಚಲಾಗಿದ್ದು, ಕೇವಲ ಮಸೀದಿ ಮತ್ತು ಚರ್ಚ್ ಗಳು ಎಂದಷ್ಟೇ ಬಿಂಬಿಸಲಾಗಿದೆ.

ಆರೋಪ 2: ಇಮಾಮ್‌ ಗಳಿಗೆ ಮಾತ್ರ ಗೌರವಧನ
ಗೌರವಧನದ ಬಗ್ಗೆ ಮಾತನಾಡುತ್ತಾ, ರಿಪಬ್ಲಿಕ್ ಟಿವಿ ನಿರೂಪಕ ಅರ್ನಬ್ ಗೋಸ್ವಾಮಿ ತಮ್ಮ ಚರ್ಚೆಯಲ್ಲಿ, ‘‘ಮಸೀದಿಗಳ ಇಮಾಮ್‌ಗಳಿಗೆ ಹೆಚ್ಚುವರಿಯಾಗಿ 6,000 ರೂಪಾಯಿ ನೀಡಲಾಗುತ್ತದೆ. ಆದರೆ ದೇವಸ್ಥಾನಗಳ ಅರ್ಚಕರಿಗೆ ಇಲ್ಲ’’ ಎಂದು ಹೇಳಿದ್ದರು.

ಪ್ರಣಾಳಿಕೆಯಲ್ಲಿ ವಾಸ್ತವವಾಗಿ, ‘‘643 ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುವ ಪೂಜಾರಿಗಳಿಗೆ ರಾಜ್ಯ ಸರಕಾರಿ ಉದ್ಯೋಗಿಗಳಿಗೆ ಸಮಾನವಾದ ವೇತನ ನೀಡಲಾಗುವುದು. ಪೂಜಾರಿಗಳು ಹಾಗೂ ಸಿಬ್ಬಂದಿಗೆ ಅಪಘಾತ ವಿಮೆ ಮತ್ತು ಆರೋಗ್ಯ ಕಾರ್ಡ್‌ಗಳನ್ನೂ ನೀಡಲಾಗುತ್ತದೆ.’’ ಇಷ್ಟಲ್ಲದೇ, ‘‘ಎಲ್ಲ ಪಾಸ್ಟರ್‌ಗಳು ಮತ್ತು ಫಾದರ್‌ಗಳಿಗೆ, ದೇವಸ್ಥಾನದ ಅರ್ಚಕರು ಮತ್ತು ಮಸೀದಿಗಳ ಇಮಾಮ್/ ಮುಅಝ್ಝಿನ್‌ಗಳ ವೇತನಕ್ಕೆ ಅನುಗುಣವಾಗಿ ಗೌರವಧನ ನೀಡಲಾಗುವುದು.’’

ಅಲ್ಪಸಂಖ್ಯಾತರು ವಿಭಾಗದಲ್ಲಿ, ಎಲ್ಲ ಇಮಾಮ್‌ಗಳು ಮತ್ತು ಮುಅಝ್ಝಿನ್‌ಗಳಿಗೆ ಮಾಸಿಕ 6,000 ರೂಪಾಯಿಗಳನ್ನು ನೀಡಲಾಗುವುದು ಎಂದು ಹೇಳಿರುವುದನ್ನು ಆಧರಿಸಿ ಗೋಸ್ವಾಮಿ ಈ ಪ್ರತಿಪಾದನೆ ಮಾಡಿದ್ದಾರೆ.

ಆರೋಪ 3: ಮುಸ್ಲಿಮರಿಗೆ ವಿದ್ಯಾರ್ಥಿವೇತನ

ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ತಮ್ಮ ವರದಿಗಳಲ್ಲಿ ಹಾಗೂ ಅರ್ನಬ್ ಗೋಸ್ವಾಮಿ ತಮ್ಮ ವಿಶೇಷ ಕಾರ್ಯಕ್ರಮದಲ್ಲಿ, ಮುಸ್ಲಿಂ ಬಡ ವಿದ್ಯಾರ್ಥಿಗಳಿಗೆ ಸಾಗರೋತ್ತರ ಶಿಕ್ಷಣಕ್ಕೆ 20 ಲಕ್ಷ ರೂಪಾಯಿ ನೆರವು ನೀಡುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇದನ್ನು ಮುಸ್ಲಿಮರಿಗೆ ಮಾತ್ರ ಇರುವ ವಿಶೇಷ ಯೋಜನೆ ಎಂದು ಬಿಂಬಿಸಲಾಗಿದೆ. ಆದರೆ ಪ್ರಣಾಳಿಕೆಯ ಪ್ರಕಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ನೀಡಲಾಗುತ್ತದೆ ಎಂಬ ಉಲ್ಲೇಖವಿದೆ.

ಆರೋಪ 4: ಮುಸ್ಲಿಮರಿಗೆ ಸರಕಾರಿ ಗುತ್ತಿಗೆ ನೀಡಲು ವಿಶೇಷ ಪರಿಗಣನೆ

‘‘ಸರಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂ ಯುವಕರನ್ನು ವಿಶೇಷವಾಗಿ ಪರಿಗಣಿಸಲಾಗುವುದು’’ ಎಂದು ರಿಪಬ್ಲಿಕ್ ಟಿವಿ ವರದಿ ಹೇಳಿದೆ. ಆದರೆ ವಾಸ್ತವವಾಗಿ ತೆಲಂಗಾಣ ಚಳವಳಿಯಲ್ಲಿ ಭಾಗವಹಿಸಿದ ಯುವಕರಿಗೆ ನೀಡಿದ ಭರವಸೆಯನ್ನು ಮತ್ತು ಸರಕಾರಿ ಗುತ್ತಿಗೆಯಲ್ಲಿ ಪರಿಶಿಷ್ಟರಿಗೆ ಮತ್ತು ಇತರ ದುರ್ಬಲ ವರ್ಗದವರಿಗೆ ಶೇ. 5ರಷ್ಟು ಮೀಸಲಾತಿ ಸೌಲಭ್ಯ ಒದಗಿಸುವುದಾಗಿ ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

ಆರೋಪ 5: ಮುಸ್ಲಿಂ ಆಸ್ಪತ್ರೆ
ತೆಲಂಗಾಣದಲ್ಲಿ ಮುಸ್ಲಿಮರಿಗೆ ವಿಶೇಷವಾಗಿ ಆಸ್ಪತ್ರೆಗಳನ್ನು ಆರಂಭಿಸುವ ಆಶ್ವಾಸನೆಯನ್ನು ಕಾಂಗ್ರೆಸ್ ನೀಡಿದೆ ಎಂದು ಗೋಸ್ವಾಮಿ ತಮ್ಮ ಚರ್ಚೆಯಲ್ಲಿ ಪ್ರಸ್ತಾಪಿಸಿದ್ದರು. ಇದನ್ನೇ ಚಾನಲ್‌ನಲ್ಲಿ ಪ್ರಕಟವಾದ ವರದಿ ಕೂಡಾ ಪ್ರತಿಪಾದಿಸಿತ್ತು. ಆದರೆ ವಾಸ್ತವವಾಗಿ ಪ್ರಣಾಳಿಕೆಯಲ್ಲಿ ಇರುವುದು, ಅಲ್ಪಸಂಖ್ಯಾತರು ಅಧಿಕವಾಗಿರುವ ಪ್ರದೇಶಗಳಲ್ಲಿ ಸರಕಾರಿ ಆಸ್ಪತ್ರೆಗಳನ್ನು ತೆರೆಯಲಾಗುವುದು. ಇದೀಗ ಈ ಆಸ್ಪತ್ರೆಗಳನ್ನು ಮುಸ್ಲಿಮರಿಗಾಗಿಯೇ ವಿಶೇಷವಾಗಿ ಇರುವ ಆಸ್ಪತ್ರೆಗಳು ಎಂದು ಹಲವು ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಆದರೆ ಈ ವರದಿಗಳು ಪ್ರತಿ ಮಂಡಲ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸುವ ಭರವಸೆಯನ್ನು ಕಡೆಗಣಿಸಿವೆ.

ಆರೋಪ 6: ಮುಸ್ಲಿಮರಿಗೆ ಸನಿವಾಸ ಶಾಲೆ
‘‘ವಿಶೇಷ ಸನಿವಾಸ ಶಾಲೆಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ಆರಂಭಿಸಲಾಗುತ್ತದೆ’’ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆದರೆ ದೃಷ್ಟಿಮಾಂದ್ಯರು ಮತ್ತು ಬುಡಕಟ್ಟು ಸಮುದಾಯದವರೂ ಸೇರಿದಂತೆ ಇತರ ಸಮುದಾಯಗಳಿಗೆ ಕೂಡಾ ಸನಿವಾಸ ಶಾಲೆಗಳನ್ನು ತೆರೆಯುವ ಪ್ರಸ್ತಾವವನ್ನು ಇವು ಗಣನೆಗೆ ತೆಗೆದುಕೊಂಡಿಲ್ಲ.

ಆರೋಪ 7: ಧಾರ್ಮಿಕ ತಾರತಮ್ಯ ವಿರುದ್ಧ ಕ್ರಮ
‘‘ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ನೀಡುವುದೂ ಸೇರಿದಂತೆ ಧರ್ಮದ ಆಧಾರದಲ್ಲಿ ನಡೆಸುವ ಎಲ್ಲ ತಾರತಮ್ಯಗಳನ್ನು ತಡೆಯಲಾಗುವುದು’’ ಎಂದು ಪ್ರಣಾಳಿಕೆ ಹೇಳಿದೆ. ಇದನ್ನು ರಿಪಬ್ಲಿಕ್ ಟಿವಿ ಹಾಗೂ ಟೈಮ್ಸ್ ನೌ ಮುಸ್ಲಿಂ ಓಲೈಕೆ ಎಂದು ಬಿಂಬಿಸಿವೆ. ಆದರೆ ಎಲ್ಲೂ ಮುಸ್ಲಿಂ ಎಂಬ ಪದದ ಬಳಕೆ ಪ್ರಣಾಳಿಕೆಯಲ್ಲಿ ಇಲ್ಲ. ಧರ್ಮದ ಆಧಾರದಲ್ಲಿ ಉದ್ಯೋಗ ನಿರಾಕರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆದರೆ ನಿರ್ದಿಷ್ಟವಾಗಿ ಇಲ್ಲಿ ಯಾವುದೇ ಧರ್ಮದ ಉಲ್ಲೇಖ ಇಲ್ಲದಿದ್ದರೂ, ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತ ವರ್ಗದಲ್ಲಿ ಸೇರಿಸಿರುವುದರಿಂದ ನಿರ್ದಿಷ್ಟವಾಗಿ ಮುಸ್ಲಿಮರು ಎಂದು ಹೇಳಲಾಗುತ್ತಿದೆ. ಟೈಮ್ಸ್ ನೌ ವರದಿಗಾರ ಪಾಲ್ ಓಮ್ಮನ್ ಇದನ್ನು ತಪ್ಪಾಗಿ ವಿಶ್ಲೇಷಿಸಿ, ಧರ್ಮದ ಆಧಾರದಲ್ಲಿ ಇವರು ಉದ್ಯೋಗ ನೀಡಬೇಕಾಗುತ್ತದೆ ಎಂದು ಹೇಳಿದ್ದರು.

ಆರೋಪ 8: ಮುಸ್ಲಿಮರಿಗೆ ಮಾತ್ರ ಮನೆಗಳನ್ನು ನಿರ್ಮಿಸಿಕೊಳ್ಳಲು 5 ಲಕ್ಷ ರೂಪಾಯಿ ನೀಡಲಾಗುತ್ತದೆ
‘‘ಹಿಂದೂಗಳು ಮತ್ತು ಸಿಖ್ಖರಿಗೆ ಮನೆ ನಿರ್ಮಿಸಿಕೊಳ್ಳಲು ಸಾಲ ನೀಡುವುದಿಲ್ಲ; ಕೇವಲ ಮುಸ್ಲಿಮರಿಗೆ ಮಾತ್ರ ನೀಡಲಾಗುತ್ತದೆ’’ ಎಂದು ಅರ್ನಬ್ ಗೋಸ್ವಾಮಿ ಚರ್ಚೆಯಲ್ಲಿ ಹೇಳಿದ್ದರು.
ಆದರೆ ವಾಸ್ತವವಾಗಿ ಪ್ರಣಾಳಿಕೆಯಲ್ಲಿ, ‘‘ಎಲ್ಲ ಅರ್ಹ ಅಲ್ಪಸಂಖ್ಯಾತರಿಗೆ ಸ್ವಂತಮನೆಗಳನ್ನು ನಿರ್ಮಿಸಿಕೊಳ್ಳಲು ಐದು ಲಕ್ಷ ರೂಪಾಯಿ ಹಣಕಾಸು ನೆರವು ನೀಡಲಾಗುತ್ತದೆ’’ ಎಂದು ಹೇಳಲಾಗಿದೆ. ಇದರ ಜತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ಆರು ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ ಎಂದು ಭರವಸೆ ನೀಡಲಾಗಿದೆ. ತಮ್ಮದೇ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುವ ಎಲ್ಲ ಅರ್ಹ ಜನರಿಗೆ 5 ಲಕ್ಷ ರೂಪಾಯಿ ನೀಡಲಾಗುತ್ತದೆ. ಕುಟುಂಬ ಸಮೀಕ್ಷೆಯಂತೆ ರಾಜ್ಯದಲ್ಲಿ 22 ಲಕ್ಷ ಮಂದಿ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ ಎಂದು ವಿವರಿಸಲಾಗಿದೆ.

ಇತರ ಮಾಧ್ಯಮ ಸಂಸ್ಥೆಗಳು ಮತ್ತು ಸಮಾಜ ಮಾಧ್ಯಮ
ಝೀ ನ್ಯೂಸ್ ಕೂಡಾ ಇಂಥದ್ದೇ ವರ್ಣನೆ ಮಾಡಿ, ಪ್ರಣಾಳಿಕೆಯನ್ನು ಮುಸ್ಲಿಂ ಕೇಂದ್ರಿತ ಎಂದು ವಿವರಿಸಿತ್ತು. ಈ ಪ್ರತಿಪಾದನೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಧ್ವನಿಸಿದೆ. ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ‘ಭಾರತ್ ಪಾಸಿಟಿವ್’ ಎಂಬ ಫೇಸ್‌ಬುಕ್ ಪೇಜ್, ಟೈಮ್ಸ್ ನೌ ಮೂಲದ ಪ್ರತಿಪಾದನೆಯನ್ನು ಬಿಂಬಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್‌ನಲ್ಲಿ ಅನುಸರಿಸುವ ರಿಶಿ ಬಗ್ರೀ ಎಂಬ ಟ್ವಿಟರ್ ಹ್ಯಾಂಡಲ್ ಕೂಡಾ ಟೈಮ್ಸ್ ನೌ ಚರ್ಚೆಯ ವೀಡಿಯೊವನ್ನು ಟ್ವೀಟ್ ಮಾಡಿದೆ.

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಟೈಮ್ಸ್ ನೌ ವರದಿ ಬಿಂಬಿಸಿದ ಏಳು ಅಂಶಗಳ ಇಮೇಜ್ ಟ್ವೀಟ್ ಮಾಡಿದ್ದಾರೆ. ತೆಲಂಗಾಣ ಮತದಾರರು ಡಿಸೆಂಬರ್ 7ರಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ಟೈಮ್ಸ್ ನೌ ಹಾಗೂ ರಿಪಬ್ಲಿಕ್ ಟಿವಿಯಂಥ ಚಾನಲ್‌ಗಳು ವರದಿ ಮಾಡುವ ವಿಧಾನ, ಮತದಾನ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕ ಅಭಿಪ್ರಾಯ ರೂಪಿಸುವುದರ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ ಹಾಗೂ ಅಂತರ್ ಧರ್ಮದ ಪೂರ್ವಾಗ್ರಹಕ್ಕೆ ಕೂಡಾ ಕಾರಣವಾಗಲಿದೆ.

Writer - ಜಿಗ್ನೇಶ್ ಪಟೇಲ್, altnews.in

contributor

Editor - ಜಿಗ್ನೇಶ್ ಪಟೇಲ್, altnews.in

contributor

Similar News