ಛತ್ತೀಸ್ ಗಢದಲ್ಲಿ ಹೆಚ್ಚುತ್ತಲೇ ಹೋದ ಮತದಾನ ಪ್ರಮಾಣ: ಸಂಶಯ ಮೂಡಿಸಿದೆ ಅಧಿಕಾರಿಗಳ ಹೇಳಿಕೆ

Update: 2018-12-04 11:49 GMT

ಹೊಸದಿಲ್ಲಿ, ಡಿ.4: ಛತ್ತೀಸಗಢದ ರಾಜ್ಯ ಚುನಾವಣಾ ಆಯೋಗ ರಾಜ್ಯದಲ್ಲಿನ ಮತದಾನ ಪ್ರಮಾಣ ಕುರಿತಾಗಿ ಬಿಡುಗಡೆಗೊಳಿಸುತ್ತಿರುವ ಅಂಕಿಅಂಶಗಳು ನೀತಿ ಆಯೋಗದ ಜಿಡಿಪಿ ಅಂಕಿಅಂಶಗಳಿಗಿಂತಲೂ ಕ್ಲಿಷ್ಟಕರವಾಗಿದೆ. ನವೆಂಬರ್ 20ರಂದು ರಾಜ್ಯದಲ್ಲಿ ನಡೆದ ಅಂತಿಮ ಹಂತದ ಚುನಾವಣೆಗಳ ನಂತರ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸುಬ್ರತೋ ಸಾಹು ಅವರು ಬಿಡುಗಡೆಗೊಳಿಸಿದ ಮಾಹಿತಿಯಂತೆ ಒಟ್ಟಾರೆ ಶೇಕಡಾವಾರು ಮತದಾನ ಪ್ರಮಾಣ 72 ಆಗಿತ್ತು. ಮರುದಿನ ಈ ಪ್ರಮಾಣ ಶೇ 74 ಆಯಿತು. ಮತದಾನ ಮುಗಿದ ನಂತರದ ಮೂರನೇ ದಿನ ಈ ಪ್ರಮಾಣ ಶೇ 76ಕ್ಕೇರಿತ್ತು.

ಇದು ಹಾಗಿರಲಿ, ಒಂದು ವಾರದ ನಂತರ ಬಿಡುಗಡೆಗೊಳಿಸಲಾದ ಇನ್ನೊಂದು ಅಂಕಿಅಂಶದಲ್ಲಿ ಸುಮಾರು 46 ಕ್ಷೇತ್ರಗಳಲ್ಲಿನ ಮತದಾನ ಪ್ರಮಾಣಗಳಲ್ಲಿ ಏರಿಕೆ ತೋರಿಸಲಾಗಿತ್ತು. ಇದರಿಂದ ಒಟ್ಟು ಮತದಾನ ಪ್ರಮಾಣ 0.26%ರಷ್ಟು ಏರಿಕೆ ಕಂಡಿತ್ತು. ಕಾಂಗ್ರೆಸ್ ಈ ಮತದಾನ ಪ್ರಮಾಣದಲ್ಲಿನ ಬದಲಾವಣೆಯುನ್ನು ಪ್ರಶ್ನಿಸಿದರೆ ಬಿಜೆಪಿಗೆ ಕೂಡ ಈ ಬಗ್ಗೆ ಆತಂಕ ಮೂಡಬೇಕಿದ್ದರೂ ಅದು ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿಲ್ಲ.

ಅತ್ತ ರಾಜ್ಯ ಮುಖ್ಯ ಚುನಾವಣಾಧಿಕಾರಿ ಈ ಬಗ್ಗೆ ವಿವರಣೆ ನೀಡಿಲ್ಲ, ಚುನಾವಣಾ ಆಯೋಗದ ಅಧಿಕೃತ ವೆಬ್ ತಾಣದಲ್ಲೂ ಪರಿಷ್ಕೃತ ಅಂಕಿಅಂಶಗಳನ್ನು ಒದಗಿಸಲಾಗಿಲ್ಲ. ಇದಕ್ಕೆ ಅವರು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ದೂರುತ್ತಾರೆ. ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಅಲೋಕ್ ದೇವ್  ಪ್ರತಿಕ್ರಿಯಿಸಿ ತಮಗೆ ಸಾಹು ಒದಗಿಸಿದ ಮಾಹಿತಿಯನ್ನಷ್ಟೇ ಮಾಧ್ಯಮಗಳಿಗೆ ಒದಗಿಸಿದ್ದಾಗಿ ಹೇಳುತ್ತಾರೆ. ಸಾರ್ವಜನಿಕ ಸಂಪರ್ಕ ಇಲಾಖೆಯ ಅಂಕಿಅಂಶಗಳನ್ನು ನೋಡಿದ ನಂತರವಷ್ಟೇ ತಾವು ಪ್ರತಿಕ್ರಿಯಿಸಬಹುದೆಂದು ಸಾಹು ಹೇಳುತ್ತಿದ್ದಾರೆ.

ಇದೊಂದು ವಿಚಿತ್ರ ಬೆಳವಣಿಗೆ. ಇದೊಂದು ನಗಣ್ಯ ವಿಚಾರವೂ ಅಲ್ಲ. ಕನಿಷ್ಠ ಎಂಟು ಕ್ಷೇತ್ರಗಳಲ್ಲಿ ಪರಿಷ್ಕೃತ ಮತದಾನ ಪ್ರಮಾಣದಲ್ಲಿ ಆಗಿರುವ ಏರಿಕೆ ಕಳೆದ ಬಾರಿಯ ವಿಜೇತ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತಲೂ ಹೆಚ್ಚಾಗಿದೆ. ಈ ಎಂಟು ಕ್ಷೇತ್ರಗಳ ಪೈಕಿ ಬಿಜೆಪಿ ಕಳೆದ ಬಾರಿ ಆರು ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ರಾಜ್ಯ ಚುನಾವಣಾ ಆಯೋಗ ನವೆಂಬರ್ 22ರಂದು ಬಿಡುಗಡೆಗೊಳಿಸಿದ ಅಂತಿಮ ಅಂಕಿಅಂಶದಲ್ಲಿ ಒಟ್ಟು 46,377 ಹೆಚ್ಚುವರಿ ಮತಗಳನ್ನು ಸೇರಿಸಲಾಗಿದೆ. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಡೆದ ಮತಗಳ ನಡುವಿನ ಅಂತರ ಕೇವಲ 5 ಲಕ್ಷ ಆಗಿತ್ತು.

ನವೆಂಬರ್ 12ರಂದು ಪ್ರಥಮ ಹಂತದ ಮತದಾನ ನಡೆದ ನಂತರ ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ 5 ಗಂಟೆಗೆ ಮತದಾನ ಪ್ರಮಾಣ 60.65% ಆಗಿತ್ತು. ಆದರೆ ದೇಶದ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಮಾತ್ರ ಶೇ.70ರಷ್ಟು ಮತದಾನ ದಾಖಲಾಗಿದೆ ಎಂದಿದ್ದರು. ಆದರೆ ರಾವತ್ ಅವರಿಗೆ ಈ ಮಾಹಿತಿ ಎಲ್ಲಿಂದ ದೊರಕಿತೆಂದು ತಿಳಿಯದಾಗಿದೆ. ಹದಿನೆಂಟು ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಪ್ರಮಾಣ ಮರುದಿನ ಶೇ 76.75 ಆಗಿತ್ತು. ಇಲ್ಲಿ ಶೇ 16ರಷ್ಟು ಏರಿಕೆಯಾಗಿತ್ತು.  ಹಲವಾರು ಗ್ರಾಮಗಳ ಮತದಾನ ಪ್ರಮಾಣ ಮಾಹಿತಿ ತಡವಾಗಿ  ಬಂದ ಕಾರಣ ಈ ಅಂತರ ಎಂದು ಸಾಹು ಆಗ ವಿವರಣೆ ನೀಡಿದ್ದರು.

ಭರತಪುರ್ ಸೋನ್‍ಹತ್ ಕ್ಷೇತ್ರದ ಮತದಾನ ಪ್ರಮಾಣ ಶೇ 72.88 ಆಗಿತ್ತು ಎಂದು ನವೆಂಬರ್ 22ರಂದು ಹೇಳಲಾಗಿದ್ದರೆ ನವೆಂಬರ್ 29ರಂದು ಈ ಪ್ರಮಾಣ ಶೇ.84ಕ್ಕೆ ಏರಿತ್ತು.

ಸಾಮಾನ್ಯವಾಗಿ ಚುನಾವಣೆಯಂದು ರಾತ್ರಿಯೊಳಗಾಗಿ ಅಧಿಕೃತ ಮತದಾನ ಪ್ರಮಾಣ ಲಭ್ಯವಾಗುತ್ತದೆ. ಛತ್ತೀಸಗಢದಂತಹ ರಾಜ್ಯದಲ್ಲಿ ಪ್ರತಿ ಕ್ಷೇತ್ರದಲ್ಲಿ 200ರಿಂದ 300 ಬೂತ್‍ಗಳಿದ್ದು ಕನಿಷ್ಠ ಮರುದಿನದೊಳಗೆ ಎಲ್ಲಾ ಅಂಕಿಅಂಶಗಳು ಲಭ್ಯವಾಗಬೇಕಿದೆ. ಸುಮಾರು 46 ಕ್ಷೇತ್ರಗಳಲ್ಲಿ ಹತ್ತು ದಿನಗಳ ಅವಧಿಯ ಲೆಕ್ಕಾಚಾರದಲ್ಲಿ ತಲಾ 4,000 ಮತಗಳು ಹೆಚ್ಚಿಳವಾಗಿದೆ. ಅಂತಿಮ ಹಂತದ ಮತದಾನದ ದಿನಾಂಕಕ್ಕೂ ಮತ ಎಣಿಕೆ ದಿನಕ್ಕೂ 21 ದಿನಗಳ ಅಂತರವಿದೆ. ಈ ಅಂತರವಿಲ್ಲದೇ ಇದ್ದಿರುತ್ತಿದ್ದರೆ ನವೆಂಬರ್ 22ರಂದು ನಿಡಲಾದ ಅಂಕಿಅಂಶಗಲೇ ಅಂತಿಮವಾಗುತ್ತಿತ್ತೇನೋ.

ತಮ್ಮ ಪಕ್ಷ ಚುನಾವಣಾ ಆಯೋಗಕ್ಕೆ ಮತದಾನ ಪ್ರಮಾಣದಲ್ಲಿನ ಬದಲಾವಣೆಗಳ ಬಗ್ಗೆ ದೂರಿದೆ ಎಂದು ರಜಿಮ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಮಿತೇಶ್ ಶುಕ್ಲಾ ಹೇಳುತ್ತಾರೆ. ಸದ್ಯ ಅಧಿಕೃತ ಮಾಹಿತಿಯ ಪ್ರಕಾರ ರಾಜ್ಯದಲ್ಲಿನ ಮತದಾನ ಪ್ರಮಾಣ ಶೇ 76.28 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News