×
Ad

ಮಿಲಿಟರಿ ಸೇವಾ ವೇತನ ಹೆಚ್ಚಿಸಬೇಕೆಂಬ ಸೇನೆಯ ಬೇಡಿಕೆ ತಿರಸ್ಕರಿಸಿದ ಕೇಂದ್ರ ಸರಕಾರ‌

Update: 2018-12-04 18:40 IST

ಹೊಸದಿಲ್ಲಿ,ಡಿ.4: ಜೂನಿಯರ್ ಕಮಿಶನ್ಡ್ ಅಧಿಕಾರಿ(ಜೆಸಿಓ)ಗಳು ಸೇರಿ ದಂತೆ ಸುಮಾರು 1.12 ಲಕ್ಷ ಮಂದಿ ಸೇನಾಸಿಬ್ಬಂದಿಗೆ ಮಿಲಿಟರಿ ಸೇವಾ ವೇತನ (ಎಂಎಸ್‌ಪಿ)ದಲ್ಲಿ ಏರಿಕೆ ಮಾಡಬೇಕೆಂಬ ಸಶಸ್ತ್ರ ಪಡೆಗಳ ದೀರ್ಘಕಾಲದ ಬೇಡಿಕೆಯನ್ನು ಕೇಂದ್ರ ಸರಕಾರವು ತಿರಸ್ಕರಿಸಿದೆ.

 ವಿತ್ತ ಸಚಿವಾಲಯದ ಈ ನಿರ್ಧಾರಕ್ಕೆ ಸೇನಾ ಮುಖ್ಯ ಕಾರ್ಯಾಲಯ ತೀವ್ರ ಬೇಸರ ವ್ಯಕ್ತಪಡಿಸಿದೆ ಹಾಗೂ ಈ ನಿರ್ಧಾರವನ್ನು ಮರುಪರಿಶೀ ಲಿಸಬೇಕೆಂದು ಅದು ಆಗ್ರಹಿಸಿದೆಯೆಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

87,646 ಮಂದಿ ಜೆಸಿಓಗಳು ಹಾಗೂ ನೌಕಾಪಡೆ ಹಾಗೂ ವಾಯುಪಡೆಯ ತತ್ಸಮಾನ ದರ್ಜೆಯ 25,434 ಸಿಬ್ಬಂದಿ, ಕೇಂದ್ರ ಸರಕಾರದ ಈ ನಿರ್ಧಾರದಿಂದ ಬಾಧಿತರಾಗಲಿದ್ದಾರೆ.

  ಮಾಸಿಕ ಎಂಎಸ್‌ಪಿಯು 5,500 ರೂ.ನಿಂದ 10 ಸಾವಿರ ರೂ.ಗೆ ಏರಿಕೆ ಮಾಡಬೇಕೆಂಬುದೇ ಸಶಸ್ತ್ರ ಪಡೆಗಳ ಬೇಡಿಕೆಯಾಗಿತ್ತು. ಒಂದು ವೇಳೆ ಕೇಂದ್ರ ಸರಕಾರವು ಈ ಬೇಡಿಕೆಯನ್ನು ಒಪ್ಪಿದ್ದೇ ಆದಲ್ಲಿ ಬೊಕ್ಕಸಕ್ಕೆ 610 ಕೋಟಿ ರೂ. ವಿತ್ತೀಯ ಹೊರೆ ಬೀಳುತ್ತಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೇನಾ ಸಿಬ್ಬಂದಿಯ ವಿಶಿಷ್ಟ ಸೇವಾ ಸನ್ನಿವೇಶಗಳು ಹಾಗೂ ಅವರು ಕರ್ತವ್ಯನಿರ್ವಹಣೆ ಎದುರಿಸುವ ಕಠಿಣಪರಿಸ್ಥಿತಿಗಳನ್ನು ಪರಿಗಣಿಸಿ ಅವರಿಗೆ ಮಿಲಿಟರಿ ಸೇವಾ ವೇತನ (ಎಂಎಸ್‌ಪಿ) ನೀಡುವ ಪದ್ಧತಿಯನ್ನು ಜಾರಿಗೆ ತರಲಾಗಿತ್ತು.

‘‘ ಸೇನೆಯ ಜೆಸಿಓಗಳಿಗೆ ಹಾಗೂ ನೌಕಾಪಡೆ ಮತ್ತು ಭಾರತೀಯ ವಾಯು ಪಡೆಯಲ್ಲಿ ಅದಕ್ಕೆ ತತ್ಸಮಾನ ದರ್ಜೆಯ ಸಿಬ್ಬಂದಿಗೆ ಅಧಿಕ ಮೊತ್ತದ ಎಂಎಸ್‌ಪಿಯನ್ನು ನೀಡುವ ಪ್ರಸ್ತಾವವನ್ನು ವಿತ್ತ ಸಚಿವಾಲಯ ತಿರಸ್ಕರಿಸಿದೆ’’ ಎಂದು ಮೂಲಗಳು ತಿಳಿಸಿವೆ.

 ಎಂಎಸ್‌ಪಿಯಲ್ಲಿ ಎರಡು ಶ್ರೇಣಿಗಳಿದ್ದು, ಒಂದು ಶ್ರೇಣಿಯಲ್ಲಿ ಸೇನಾಧಿಕಾರಿಗಳು ಹಾಗೂ ಇನ್ನೊಂದು ಶ್ರೇಣಿಯಲ್ಲಿ ಜೆಸಿಓ ಹಾಗೂ ಜವಾನರಿರುತ್ತಾರೆ.

  ಏಳನೇ ವೇತನ ಆಯೋಗವು ಜೆಸಿಓ ಹಾಗೂ ಸೇನಾಧಿಕಾರಿಗಳಿಗೆ ಮಾಸಿಕವಾಗಿ 5200 ರೂ.ಗಳ ಮಾಸಿಕ ಎಂಎಸ್‌ಪಿಯನ್ನು, ಲೆಫ್ಟಿನೆಂಟ್ ದರ್ಜೆಯ ಹಾಗೂ ಬ್ರಿಗೇಡಿಯರ್ ದರ್ಜೆಗಳ ನಡುವಿನ ಶ್ರೇಣಿಯ ಅಧಿಕಾರಿಗಳಿಗೆ 15,500 ರೂ. ಮಾಸಿಕ ಎಂಎಸ್‌ಪಿ ನಿಗದಿಪಡಿಸಿತ್ತು.

  ಜೆಸಿಓಗಳಿಗೂ ಅಧಿಕ ಎಂಎಸ್‌ಪಿಯನ್ನು ನೀಡುವಂತೆ ಸೇನಾಪಡೆಯು ದೀರ್ಘ ಸಮಯದಿಂದ ಒತ್ತಡಹೇರುತ್ತಲೇ ಬಂದಿದೆ. ಜೆಸಿಓಗಳು ಗೆಜೆಟೆಡ್ ಅಧಿಕಾರಿಗಳಾಗಿದ್ದು, ಸೇನೆಯ ಸಂರಚನೆಯಲ್ಲಿ ಅತ್ಯಂತ ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತಾರೆಂದು ಅದರ ವಾದವಾಗಿದೆ.

  ಜೆಸಿಓಗಳಿಗೆ ಎಂಎಸ್‌ಪಿಯಲ್ಲಿ ಏರಿಕೆ ಮಾಡುವಂತೆ ಆಗ್ರಹಿಸಿ ಸೇನಾಪಡೆಯು ರಕ್ಷಣಾ ಸಚಿವರ ಜೊತೆ ಮಾತುಕತೆ ನಡೆಸಿತ್ತು. ಎಂಎಸ್‌ಪಿಯನ್ನು, ಆರನೇ ವೇತನ ಆಯೋಗವು ಮೊದಲ ಬಾರಿಗೆ ಪರಿಚಯಿಸಿತ್ತು. ಮಿಲಿಟರಿ ಸೇವೆಯಲ್ಲಿ ಯೋಧರಿಗೆ ಎದುರಾಗುವ ಕಠಿಣಪರಿಸ್ಥಿತಿಗಳಿಗೆ ಪರಿಹಾರವಾಗಿ ಈ ವೇತನವನ್ನು ನೀಡಲಾಗುತ್ತಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಸೇನೆಯು, ಜೆಸಿಓಗಳು ಗೆಜೆಟೆಡ್ ಅಧಿಕಾರಿಗಳೆಂಬುದನ್ನು ಸ್ಪಷ್ಟಪಡಿಸಿತ್ತು ಹಾಗೂ ಅವರನ್ನು ನಾನ್‌ಗೆಜೆಟೆಡ್ ಅಧಿಕಾರಿಗಳೆಂದು ವಿವರಿಸುವ ಏಳುವರ್ಷಗಳಷ್ಟು ಹಿಂದಿನ ಟಿಪ್ಪಣಿಯನ್ನು ತಿರಸ್ಕರಿಸಿತ್ತು.

ಸೇನೆಯ ಬೇಡಿಕೆ

 ಮಿಲಿಟರಿ ಸೇವಾ ವೇತನವನ್ನು 5,500 ರೂ.ನಿಂದ 10 ಸಾವಿರ ರೂ.ಗೆ ಏರಿಕೆ ಮಾಡಬೇಕೆಂಬುದೇ ಸಶಸ್ತ್ರ ಪಡೆಗಳ ಬೇಡಿಕೆಯಾಗಿತ್ತು.

ಕೇಂದ್ರದ ವಾದ

ಎಂಎಸ್‌ಪಿ ಏರಿಕೆ ಮಾಡಿದಲ್ಲಿ ಬೊಕ್ಕಸಕ್ಕೆ ವಾರ್ಷಿಕವಾಗಿ 610 ಕೋಟಿ ರೂ. ಅಧಿಕ ಹೊರೆ.

ಏನಿದು ಎಂಎಸ್‌ಪಿ

ಸೇನಾ ಸಿಬ್ಬಂದಿ ಕರ್ತವ್ಯನಿರ್ವಹಣೆ ಎದುರಿಸುವ ಕಠಿಣ ಪರಿಸ್ಥಿತಿಗಳನ್ನು ಪರಿಗಣಿಸಿ ಅವರಿಗೆ ಪ್ರತ್ಯೇಕವಾಗಿ ಮಿಲಿಟರಿ ಸೇವಾ ವೇತನ (ಎಂಎಸ್‌ಪಿ) ನೀಡುವ ಪದ್ಧತಿಯನ್ನು ಜಾರಿಗೆ ತರಲಾಗಿತ್ತು.

ಕೇಂದ್ರ ಸರಕಾರದ ಕಠಿಣ ನಿರ್ಧಾರದಿಂದಾಗಿ 1.12 ಲಕ್ಷ ಸೇನಾ ಸಿಬ್ಬಂದಿ ಎಎಂಸ್‌ಪಿ ಏರಿಕೆಯಿಂದ ವಂಚಿತರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News