ಈ ರಾಜ್ಯಗಳಲ್ಲಿ ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ

Update: 2018-12-04 14:22 GMT

ಹೊಸದಿಲ್ಲಿ, ಡಿ.4: ಮಾಜಿ ಮತ್ತು ಹಾಲಿ ಶಾಸಕರು ಹಾಗೂ ಸಂಸದರ ವಿರುದ್ಧ ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ಬಿಹಾರ ಮತ್ತು ಕೇರಳದ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ.

 ಈ ಸಂಬಂಧ ನಿರ್ದೇಶಗಳನ್ನು ಹೊರಡಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ಡಿ.14ರೊಳಗೆ ಪಾಲನಾ ವರದಿಗಳನ್ನು ಸಲ್ಲಿಸುವಂತೆ ಪಾಟ್ನಾ ಮತ್ತು ಕೇರಳ ಉಚ್ಚ ನ್ಯಾಯಾಲಯಗಳಿಗೆ ಸೂಚಿಸಿತು.

 ಈಗಾಗಲೇ ವಿಶೇಷ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯಗಳಿಗೆ ಮರಳಿಸುವಂತೆ ನಿರ್ದೇಶ ನೀಡಿದ ಪೀಠವು,ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ಇವೆರಡು ರಾಜ್ಯಗಳಲ್ಲಿ ಅಗತ್ಯವಿರುವಷ್ಟು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಹೈಕೋರ್ಟ್‌ಗಳಿಗೆ ಮುಕ್ತ ಅಧಿಕಾರವನ್ನು ನೀಡಿತು.

ಶಾಸಕರು ಮತ್ತು ಸಂಸದರ ವಿರುದ್ಧ ಬಾಕಿಯುಳಿದಿರುವ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯಗಳು ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾದ ಪ್ರಕರಣಗಳಿಗೆ ಮೊದಲ ಆದ್ಯತೆಯನ್ನು ನೀಡಬೇಕು ಎಂದೂ ಪೀಠವು ಸೂಚಿಸಿತು.

ಕ್ರಿಮಿನಲ್ ಪ್ರಕರಣಗಳಲ್ಲಿ ದೋಷನಿರ್ಣಯಗೊಂಡ ರಾಜಕಾರಣಿಗಳಿಗೆ ಜೀವಾವಧಿ ನಿಷೇಧವನ್ನು ಹೇರಬೇಕು ಮತ್ತು ಚುನಾಯಿತ ಪ್ರತಿನಿಧಿಗಳು ಭಾಗಿಯಾಗಿರುವ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಕೋರಿ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.

ಅಮಿಕ್ಯುಸ್ ಕ್ಯೂರಿಯಾಗಿ ನ್ಯಾಯಾಲಯಕ್ಕೆ ನೆರವಾಗುತ್ತಿರುವ ಹಿರಿಯ ನ್ಯಾಯವಾದಿ ವಿಜಯ ಹನ್ಸಾರಿಯಾ ಅವರು ರಾಜ್ಯಗಳು ಮತ್ತು ಉಚ್ಚ ನ್ಯಾಯಾಲಯಗಳಿಂದ ಸಂಗ್ರಹಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ದತ್ತಾಂಶಗಳಂತೆ ಹಾಲಿ ಮತ್ತು ಮಾಜಿ ಶಾಸಕರ ವಿರುದ್ಧ 4,000ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳು ಬಾಕಿಯುಳಿದಿವೆ. ಈ ಪೈಕಿ ಕೆಲವು ಪ್ರಕರಣಗಳಿಗೆ ಮೂರು ದಶಕಗಳಿಗೂ ಹೆಚ್ಚಿನ ವಯಸ್ಸಾಗಿದೆ.

 264 ಪ್ರಕರಣಗಳ ವಿಚಾರಣೆಗೆ ಉಚ್ಚ ನ್ಯಾಯಾಲಯಗಳು ತಡೆಯಾಜ್ಞೆ ನೀಡಿವೆ. ಹಲವಾರು ಪ್ರಕರಣಗಳು 1991ರಿಂದಲೂ ಬಾಕಿಯಾಗಿದ್ದು,ಆರೋಪಪಟ್ಟಿಗಳನ್ನೇ ಸಲ್ಲಿಸಲಾಗಿಲ್ಲ ಎಂದು ಹನ್ಸಾರಿಯಾರ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News