ಮಧ್ಯ ಪ್ರದೇಶದಲ್ಲಿ ಇವಿಎಂಗಳನ್ನು ಇರಿಸಿದ್ದ ಕೋಣೆಗೆ ಢಿಕ್ಕಿ ಹೊಡೆದ ಕಾರು

Update: 2018-12-04 16:10 GMT
ಸಾಂದರ್ಭಿಕ ಚಿತ್ರ

ಭೋಪಾಲ್,ಡಿ.4: ಮಧ್ಯ ಪ್ರದೇಶದಲ್ಲಿ ಇಲೆಕ್ಟ್ರಾನಿಕ್ ಮತಯಂತ್ರಗಳ ಭದ್ರತೆಯ ಸುತ್ತ ಉಂಟಾಗಿರುವ ವಿವಾದ ಹೊಸ ತಿರುವನ್ನು ಪಡೆದುಕೊಂಡಿದ್ದು ಸತ್ನಾ ಜಿಲ್ಲೆಯಲ್ಲಿ ಎಸ್‌ಯುವಿ ಕಾರೊಂದು ಇವಿಎಂ ಯಂತ್ರಗಳನ್ನು ಇರಿಸಲಾಗಿದ್ದ ಕೋಣೆಯ ಆವರಣಗೋಡೆಗೆ ಢಿಕ್ಕಿ ಹೊಡೆದ ಘಟನೆ ರವಿವಾರ ರಾತ್ರಿ ನಡೆದಿದೆ. ಘಟನೆಯಿಂದ ಆವರಣಗೋಡೆಯು ಭಾಗಶಃ ಹಾನಿಗೀಡಾಗಿದೆ.

ಇದಕ್ಕೂ ಮೊದಲ ನವೆಂಬರ್ 30ರಂದು ಇವಿಎಂಗಳನ್ನು ಇರಿಸಲಾಗಿದ್ದ ಸತ್ನಾದ ಮುಖ್ಯಕಚೇರಿಯ ಆವರಣ ಗೋಡೆಯು ಭಾಗಶಃ ಹಾನಿಗೀಡಾಗಿರುವುದು ಕಂಡುಬಂದಿತ್ತು. ಆವರಣಗೋಡೆಗೆ ಡಿಕ್ಕಿ ಹೊಡೆದ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಮತ್ತು ಅದರೊಳಗಿದ್ದ ಆರು ಮಂದಿಯ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಪ್ರಮೋದ್ ಯಾದವ್ ಮತ್ತು ರುದ್ರ ಕುಶ್ವಾಹ ಎಂದು ಗುರುತಿಸಲಾಗಿದೆ. ಉಳಿದ ನಾಲ್ವರು ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೈಲೇಶ್ ಕುಶ್ವಾಹ, ಪ್ರಿನ್ಸ್ ಅಲಿಯಾಸ್ ಸತ್ಯವೃತ ಸಿಂಗ್, ಸನು ಕುಶ್ವಾಹ ಹಾಗೂ ಇನ್ನೊರ್ವ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ಕುಡಿದ ಅಮಲಿನಲ್ಲಿದ್ದರು ಮತ್ತು ಇವಿಎಂ ಇರಿಸಿದ್ದ ಕೋಣೆಯೊಳಗೆ ತೆರಳಲು ಬಯಸಿದ್ದರು ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಘಟನೆಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಮತ್ತು ಇವಿಎಂಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News