ಬೋರ್ನ್‌ವಿಟಾ, ಹಾರ್ಲಿಕ್ಸ್‌ನಂತಹ ಪೇಯಗಳು ಪೌಷ್ಟಿಕಾಂಶಗಳನ್ನು ಒದಗಿಸುತ್ತವೆಯೇ ?

Update: 2018-12-06 07:53 GMT

19ನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ಫಾರ್ಮಾಸಿಸ್ಟ್ ಜೇಮ್ಸ್ ಹಾರ್ಲಿಕ್ಸ್ ಮತ್ತು ಆತನ ಸೋದರ ವಿಲಿಯಂ ಅಮೆರಿಕಕ್ಕೆ ವಲಸೆ ಹೋಗಿ ಚಿಕಾಗೋದಲ್ಲಿ ಹಾರ್ಲಿಕ್ ಫುಡ್ ಕಂಪನಿಯನ್ನು ಆರಂಭಿಸಿದ್ದರು. ಅಲ್ಲಿ ಅವರು ತಯಾರಿಸಿದ್ದ ಮಾಲ್ಟ್ ಆಧರಿತ ಹುಡಿ ಹಾರ್ಲಿಕ್ಸ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ನೂರು ವರ್ಷಗಳಲ್ಲಿ,ಅಂದರೆ 1987ರ ವೇಳೆಗೆ ಹಾರ್ಲಿಕ್ಸ್ ಭಾರತದಲ್ಲಿ ಅತ್ಯಂತ ಹೆಚ್ಚಾಗಿ ಮಾರಾಟವಾಗುವ ಮಾಲ್ಟ್ ಆಧರಿತ ಆರೋಗ್ಯಪೇಯವಾಗಿ ಹೊರಹೊಮ್ಮಿತ್ತು. ಇಂದಿಗೂ ಅದು ದೇಶದಲ್ಲಿ ತನ್ನ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ.

ಇದೇ ಕಾರಣದಿಂದ ಯುನಿಲಿವರ್ ಜಿಎಸ್‌ಕೆಯ ಭಾರತದಲ್ಲಿನ ಪೌಷ್ಟಿಕ ಆಹಾರಗಳ ಉದ್ಯಮವನ್ನು ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿದೆ. ಜಿಎಸ್‌ಕೆಯ ಉತ್ಪನ್ನಗಳಲ್ಲಿ ಹಾರ್ಲಿಕ್ಸ್ ಅತ್ಯಂತ ಪ್ರತಿಷ್ಠಿತವಾಗಿದೆ. ಜಿಎಸ್‌ಕೆಯ ಭಾರತೀಯ ವಿಭಾಗದ ಶೇ.70ರಷ್ಟು ಪಾಲನ್ನು ಮೂರು ಶತಕೋಟಿ ಡಾ.ಗಳಿಗೆ ಖರೀದಿಸಲು ಯುನಿಲಿವರ್ ಮುಂದಾಗಿದೆ.

ಆದರೆ ಭಾರತೀಯರು ಹಾರ್ಲಿಕ್ಸ್‌ನಂತಹ ಮಾಲ್ಟ್ ಆಧರಿತ ಪಾನೀಯಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಭೀತಿಯಿಂದ ಈ ಮಾರಾಟ ನಡೆಯುವ ಬಗ್ಗೆ ಅನುಮಾನಗಳೆದ್ದಿವೆ.

ಹಾಲಿಗೆ ಪರ್ಯಾಯವಾಗಿ ಬೆಳೆದು ಬಂದ ಬಗೆ

ಭಾರತವು ಮಾಲ್ಟ್ ಆಧರಿತ ಪಾನೀಯಗಳಿಗೆ ವಿಶ್ವದ ಅತ್ಯಂತ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಿದೆ. ಈ ಪಾನೀಯಗಳನ್ನು ಇಲ್ಲಿ ಆರೋಗ್ಯ ಪೇಯಗಳೆಂದು ಬಿಂಬಿಸಿ ಮಾರಾಟ ಮಾಡಲಾಗುತ್ತಿದೆ ಮತ್ತು ಅದಕ್ಕಾಗಿ ನಿರ್ದಿಷ್ಟವಾಗಿ ಮಕ್ಕಳನ್ನು ಗುರಿಯನ್ನಾಗಿಸಿಕೊಳ್ಳಲಾಗುತ್ತಿದೆ. ಹಾರ್ಲಿಕ್ಸ್ ಜೊತೆಗೆ ಬೋರ್ನ್‌ವಿಟಾ, ಕೋಂಪ್ಲಾನ್,ಬೂಸ್ಟ್ ಮತ್ತು ಮಿಲೋ ಪೇಯಗಳೂ  ದೇಶದಲ್ಲಿ ಜನಪ್ರಿಯವಾಗಿವೆ.

ಅಂದ ಹಾಗೆ ಹಾರ್ಲಿಕ್ಸ್ ಭಾರತದಲ್ಲಿ ನಂ.1 ಸ್ಥಾನದಲ್ಲಿದ್ದರೂ ವಿಶ್ವದಲ್ಲಿ ಕೇವಲ 56ನೇ ರ್ಯಾಂಕ್ ಪಡೆಯುವಲ್ಲಿ ಮಾತ್ರ ಅದು ಸಫಲವಾಗಿದೆ.

 ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶದಲ್ಲಿ ಪೌಷ್ಟಿಕ ಆಹಾರಗಳ ತೀವ್ರ ಕೊರತೆಯಿತ್ತು ಮತ್ತು ಮಾಲ್ಟ್ ಆಧರಿತ ಪೇಯಗಳಿಗೆ ಬೇಡಿಕೆ ಹೆಚ್ಚತೊಡಗಿತ್ತು. ಉತ್ತರ ಮತ್ತು ಪೂರ್ವ ಭಾರತಗಳಲ್ಲಿ ಹಾಲಿನ ಕೊರತೆಯಿದ್ದುದನ್ನೇ ಬಂಡವಳವನ್ನಾಗಿಸಿಕೊಂಡ ಈ ಕಂಪನಿಗಳು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಕೆಲವೇ ಸಮಯದಲ್ಲಿ ತಮ್ಮ ಪೇಯಗಳು ಹಾಲಿಗೆ ಪರ್ಯಾಯವಾಗಿವೆ ಎನ್ನುವುದನ್ನು ಜನಮಾನಸದಲ್ಲಿ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದವು.

ಇಂದು ಈ ಕಂಪನಿಗಳು ತಮ್ಮ ಜಾಹೀರಾತುಗಳಲ್ಲಿ ಮಕ್ಕಳನ್ನೇ ಮುಖ್ಯ ಗುರಿಯಾಗಿಸಿಕೊಂಡಿವೆ. ತನ್ನ ಪೇಯ “ಮಕ್ಕಳು ಎತ್ತರವಾಗಿ ಬೆಳೆಯಲು,ಸದೃಢವಾಗಿರಲು ಮತ್ತು ಚುರುಕಾಗಿರಲು ನೆರವಾಗುತ್ತದೆ” ಎನ್ನುವುದು ವೈದ್ಯಕೀಯವಾಗಿ ಸಿದ್ಧಗೊಂಡಿದೆ ಎಂದು ಹಾರ್ಲಿಕ್ಸ್ ಹೇಳಿಕೊಂಡರೆ, ತನ್ನ ಪೇಯವು  “ಮಕ್ಕಳು ಎರಡು ಪಟ್ಟು ವೇಗವಾಗಿ ಬೆಳೆಯಲು ನೆರವಾಗುತ್ತದೆ ಎನ್ನುವುದು ವೈದ್ಯಕೀಯವಾಗಿ ರುಜುವಾತಾಗಿದೆ.” ಎಂದು ಕೋಂಪ್ಲಾನ್ ಹೇಳಿಕೊಳ್ಳುತ್ತಿದೆ. ಈ ವಿಷಯದಲ್ಲಿ ಬೋರ್ನ್‌ವಿಟಾ ಕೂಡ ಹಿಂದೆ ಬಿದ್ದಿಲ್ಲ. ಅದು ತನ್ನ ಉತ್ಪನ್ನವು ಮಕ್ಕಳ ಮಿದುಳು,ಮೂಳೆಗಳು ಮತ್ತು ಮಾಂಸಖಂಡಗಳ ಬೆಳವಣಿಗೆಗೆ ನೆರವಾಗುವ “ಇನ್ನರ್ ಸ್ಟ್ರೆಂಗ್ತ್ ಫಾರ್ಮ್ಯುಲಾ” ವನ್ನು ಒಳಗೊಂಡಿದೆ ಎಂದು ಹೇಳಿಕೊಳ್ಳುತ್ತಿದೆ.

ಆದರೆ ಇವೆಲ್ಲ ಪೇಯಗಳು ನಿಜಕ್ಕೂ ಈ ಗುಣಗಳನ್ನು ಹೊಂದಿಲ್ಲ ಮತ್ತು ಮುಖ್ಯವಾಗಿ ಇವು ಮಕ್ಕಳಿಗೆ ಸರಿಯಾದ ಪೂರಕ ಆಹಾರಗಳೂ ಅಲ್ಲ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.

ಸಂಪೂರ್ಣ ಪೋಷಕಾಂಶಗಳು ಮತ್ತು ಸಕ್ಕರೆ

ಹೆಚ್ಚಿನ ಪ್ಯಾಕ್ ಮಾಡಲಾದ ಆಹಾರ ಉತ್ಪನ್ನಗಳಂತೆ ಮಾಲ್ಟ್ ಆಧರಿತ ಪೇಯಗಳೂ ನಮ್ಮ ಶರೀರಕ್ಕೆ ಹೆಚ್ಚಿನ ಲಾಭವನ್ನೇನೂ ನೀಡುವುದಿಲ್ಲ. ಮೂಲ ಘಟಕವು ಮಾಲ್ಟ್ ಆಗಿದ್ದರೂ ನಂತರ ಘಟಕ ಯಾವಾಗಲೂ ಸಕ್ಕರೆಯೇ ಆಗಿದ್ದು,ಪ್ರೋಟಿನ್,ಫ್ಯಾಟ್‌ಮತ್ತು ಕಾರ್ಬೊಹೈಡ್ರೆಟ್‌ಗಳಂತಹ ಪೌಷ್ಟಿಕಾಂಶಗಳು ಅಲ್ಪಪ್ರಮಾಣಗಳಲ್ಲಿರುತ್ತವೆ.

ಭಾರತದಲ್ಲಿ ಸಕ್ಕರೆಯ ಸೇವನೆಯ ಬಗ್ಗೆ ಯಾವುದೇ ಶಿಫಾರಸು ಇಲ್ಲವಾದರೂ,ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶವು 2,000 ಕ್ಯಾಲರಿ ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು 100 ಕ್ಯಾಲರಿ(ಶೇ.5)ಗಳಿಗೆ ಸೀಮಿತಗೊಳಿಸಿದೆ.

ಆಧುನಿಕ ಯುಗದ ಆಹಾರಗಳು ಸಕ್ಕರೆಯನ್ನೊಳಗೊಂಡ ಜಂಕ್ ಉತ್ಪನ್ನಗಳಿಂದಲೇ ತುಂಬಿರುವ ಹಿನ್ನೆಲೆಯಲ್ಲಿ ಈ ಮಾಲ್ಟ್ ಆಧರಿತ ಪೇಯಯಗಳು ನಾವು ನಿಗದಿತ ಮಿತಿಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸುವಂತೆ ಮಾಡಬಹುದು.

ಮಕ್ಕಳು ಈ ಪೇಯಗಳಿಂದ ಪಡೆಯುವ ಎಲ್ಲ ಪೌಷ್ಟಿಕಾಂಶಗಳು ವಾಸ್ತವದಲ್ಲಿ ಹಾಲಿನಿಂದ ದೊರೆಯುತ್ತವೆ ಎಂದು ಹೇಳಿದ ಪೌಷ್ಟಿಕಾಂಶ ತಜ್ಞೆ ಪ್ರಿಯಾ ಕಥ್ಪಾಲ್ ಅವರು,ಮಕ್ಕಳು ಸಾಮಾನ್ಯವಾಗಿ ಹಾಲನ್ನು ಇಷ್ಟಪಡುವುದಿಲ್ಲ ಮತ್ತು ಈ ಉತ್ಪನ್ನಗಳು ಹಾಲಿನ ರುಚಿಯನ್ನು ಹೆಚ್ಚಿಸುವ ಕೆಲಸವನ್ನಷ್ಟೇ ಮಾಡುತ್ತವೆ. ಮಕ್ಕಳಿಗೆ ನಿರಂತರವಾಗಿ ಇಂತಹ ಪೇಯಗಳನ್ನು ಕುಡಿಸುವುದು ಹೆತ್ತವರ ತಪ್ಪುನಿರ್ಧಾರವಾಗುತ್ತದೆ ಎಂದು ಹೇಳಿದರು.

ಸಕ್ಕರೆಯು ಈ ಪೇಯಗಳಲ್ಲಿ ಕೇವಲ ಪೂರಕ ಘಟಕವಾಗಿದೆ ಎನ್ನುವುದು ಕಥ್ಪಾಲ್ ಅವರ ಈ ಹೇಳಿಕೆಯ ಹಿಂದಿನ ಮುಖ್ಯ ಕಾರಣವಾಗಿದೆ. ಈ ಪೇಯಗಳ ಸೇವನೆಯು ಮಕ್ಕಳು ಬರಿಯ ಹಾಲನ್ನು ಕುಡಿಯದಿರಲು ಕಾರಣವಾಗುತ್ತದೆ ಮತ್ತು ಅವರು ಹಾಲು ಸಿಹಿಯಾಗಿದ್ದು ಚಾಕ್ಲೇಟ್ ಒಳಗೊಂಡ ರುಚಿಯನ್ನು ಹೊಂದಿರಬೇಕೆಂದು ಬಯಸುತ್ತಾರೆ ಎಂದು ಅವರು ನುಡಿದರು.

ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿರುವದರಿಂದ ಈ ಪೇಯಗಳು ಅವರಲ್ಲಿ ಸಮಸ್ಯೆಗಳಿಗೆ ಕಾರಣವಾಗದಿರಬಹುದು. ಆದರೆ ಈ ಪೇಯಗಳನ್ನು,ವಿಶೇಷವಾಗಿ ವಯಸ್ಕರು ನಿಯಮಿತವಾಗಿ ಸೇವಿಸುತ್ತಿದ್ದರೆ ಅದರಲ್ಲಿಯ ಸಕ್ಕರೆಯು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಇನ್ನೋರ್ವ ಪೌಷ್ಟಿಕಾಂಶ ತಜ್ಞೆ ಇಷಿ ಖೋಸ್ಲಾ ಹೇಳಿದರು.

ಈ ಪೇಯಗಳಲ್ಲಿ ಸಂಪೂರ್ಣ ಪೌಷ್ಟಿಕಾಂಶಗಳಿವೆ ಎನ್ನುವುದೆಲ್ಲ ಬೊಗಳೆ ಎನ್ನುತ್ತಾರೆ ಆಹಾರ ತಜ್ಞರು.

ಕಿರು ಪೌಷ್ಟಿಕಾಂಶಗಳು

 ತಮ್ಮ ಪೇಯಗಳು ಅಗತ್ಯ ಕಿರು ಪೌಷ್ಟಿಕಾಂಶಗಳನ್ನು ಒಳಗೊಂಡಿವೆ ಎನ್ನುವುದು ಈ ಕಂಪನಿಗಳ ಇನ್ನೊಂದು ಬಡಾಯಿಯಾಗಿದೆ. ಕ್ಯಾಲ್ಸಿಯಂ,ವಿಟಾಮಿನ್ ಬಿ,ಸಿ ಮತ್ತು ಡಿ,ಪೊಟ್ಯಾಷಿಯಂ,ಸತುವು ಮತ್ತು ಅಯೊಡಿನ್‌ನಂತಹ ಕಿರು ಪೌಷ್ಟಿಕಾಂಶಗಳು ಶರೀರದ ಕಾರ್ಯ ನಿರ್ವಹಣೆ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ಅವು ಸಣ್ಣ ಪ್ರಮಾಣಗಳಲ್ಲಿ ಅಗತ್ಯವಾಗಿವೆ. ಆದರೆ ಹಾರ್ಲಿಕ್ಸ್,ಕೋಂಪ್ಲಾನ್‌ನಂತಹ ಪೇಯಗಳಲ್ಲಿ ಮಕ್ಕಳ ದೈನಂದಿನ ಅಗತ್ಯಕ್ಕಿಂತ ತುಂಬ ಕಡಿಮೆ ಪ್ರಮಾಣದಲ್ಲಿ ಈ ಕಿರು ಪೌಷ್ಟಿಕಾಂಶಗಳಿರುತ್ತವೆ ಮತ್ತು ಇವು ಏಕೂ ಸಾಲದು.

ಇಲ್ಲಿ ಸಂಕೀರ್ಣ ಕೆಮಿಸ್ಟ್ರಿಯೊಂದಿದೆ. ಸಕ್ಕರೆಯು ವಿಟಾಮಿನ್ ಡಿ ಮತ್ತು ಕ್ಯಾಲ್ಸಿಯಂ ಅನ್ನು ಶರೀರವು ಹೀರಿಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಇದೇ ರೀತಿ ಆಕಳ ಹಾಲು ಕಬ್ಬಿಣದ ಹೀರುವಿಕೆಯನ್ನು ಪ್ರತಿರೋಧಿಸುತ್ತದೆ. ವಾಸ್ತವದಲ್ಲಿ ಆಕಳ ಹಾಲಿನ ಸೇವನೆ ಶಿಶುಗಳಲ್ಲಿ ರಕ್ತಹೀನತೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ಪೇಯಗಳು ವಿಟಾಮಿನ್ ಡಿ ಮತ್ತು ಕಬ್ಬಿಣ,ಹಾಲು ಮತ್ತು ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದರೂ ಸಕ್ಕರೆ ಮತ್ತು ಹಾಲು ಇತರ ಖನಿಜಗಳ ಹೀರುವಿಕೆಯನ್ನು ತಡೆಯುವ ಮೂಲಕ ಅವುಗಳನ್ನು ವೌಲ್ಯರಹಿತವಾಗಿಸುತ್ತವೆ.

ಸ್ವತಂತ್ರ ಅಧ್ಯಯನಗಳೇ ನಡೆದಿಲ್ಲ

ತಮ್ಮ ಉತ್ಪನ್ನಗಳ ಬಗ್ಗೆ ಈ ಕಂಪನಿಗಳು ಇನ್ನಿಲ್ಲದಂತೆ ಹೇಳಿಕೊಳ್ಳುತ್ತಿವೆಯಾದರೂ ಮಾಲ್ಟ್ ಆಧರಿತ ಪೇಯಗಳಿಂದ ನಮ್ಮ ಶರೀರವು ಕಿರು ಪೌಷ್ಟಿಕಾಂಶಗಳನ್ನು ಸಮರ್ಥವಾಗಿ ಹೀರಿಕೊಳ್ಳುತ್ತದೆಯೇ ಎಂಬ ಬಗ್ಗೆ ಒಂದೇ ಒಂದು ಸ್ವತಂತ್ರ ಅಧ್ಯಯನ ಈ ದೇಶದಲ್ಲಿ ನಡೆದಿಲ್ಲ.

ಗ್ರಹಗತಿ ಬದಲಾಗುತ್ತಿದೆ

ಇಂದು ಮಾರುಕಟ್ಟೆಯಲ್ಲಿ ಈ ಆರೋಗ್ಯ ಪೇಯಗಳ ಗ್ರಹಗತಿ ಬದಲಾಗುತ್ತಿದೆ. 2014-17ರ ಅವಧಿಯಲ್ಲಿ ಮಾಲ್ಟ್ ಆಧರಿತ ಪೇಯಗಳ ಮಾರಾಟದ ಬೆಳವಣಿಗೆ ಶೇ.13.2ರಿಂದ ಶೇ.8.6ಕ್ಕೆ ಕುಸಿದಿದೆ ಎಂದು ಯುರೊಮಾನಿಟರ್ ಇಂಟರ್‌ನ್ಯಾಷನಲ್‌ನ ಸಮೀಕ್ಷೆಯು ತಿಳಿಸಿದೆ.

ಗ್ರಾಹಕರು ಇಂದುಹೆಚ್ಚಿನ ಅರಿವನ್ನು ಹೊಂದಿದ್ದು, ಎಲ್ಲ ವಿಷಯಗಳನ್ನು ತಿಳಿದುಕೊಂಡೇ ತಮ್ಮ ಆಯ್ಕೆಗಳನ್ನು ಮಾಡುತ್ತಿದ್ದಾರೆ. ಪರಿಣಾಮವಾಗಿ ಪ್ರೋಟಿನ್ ಪ್ರಮಾಣವನ್ನು ಹೆಚ್ಚಿಸಲ್ಪಟ್ಟಿರುವ ಆರೋಗ್ಯ ಪಾನೀಯಗಳ ಮಾರಾಟ ಹೆಚ್ಚುತ್ತಿದೆ. ಹಲವಾರು ಗ್ರಾಹಕರು ಹಾಲಿಗೆ ಹಾರ್ಲಿಕ್ಸ್ ,ಬೂಸ್ಟ್,ಬೋರ್ನ್ ವಿಟಾದಂತಹ ಹುಡಿಗಳ ಬದಲು ಸಿರಪ್‌ಗಳನ್ನು ಸೇರಿಸಿ ಬಳಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮಾಲ್ಟ್ ಆಧರಿತ ಪೇಯಗಳ ಭವಿಷ್ಯ ಕೊನೆಗೂ ಡೋಲಾಯಮಾನವಾಗಿ ಕಂಡು ಬರುತ್ತಿರುವ ಸ್ಥಿತಿಯಿದ್ದು,ವಾಸ್ತವದಲ್ಲಿ ದೊಡ್ಡ ಬ್ರಾಂಡ್‌ಗಳು ಮಾರುಕಟ್ಟೆಯಿಂದ ನಿರ್ಗಮಿಸುತ್ತಿವೆ. 

Writer - The print.in, ಸಂಧ್ಯಾ ರಮೇಶ್

contributor

Editor - The print.in, ಸಂಧ್ಯಾ ರಮೇಶ್

contributor

Similar News