×
Ad

ಆಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದದ ‘ದಲ್ಲಾಳಿ’ ಕ್ರಿಶ್ಚಿಯನ್ ಮಿಶೆಲ್‌ಗೆ ಸಿಬಿಐ ಕಸ್ಟಡಿ

Update: 2018-12-05 20:34 IST

 ಹೊಸದಿಲ್ಲಿ, ಡಿ.5: ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ , 3,600 ಕೋಟಿ ರೂ. ಮೊತ್ತದ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ದಲ್ಲಾಳಿ(ಮಧ್ಯವರ್ತಿ) ಎನ್ನಲಾಗಿರುವ ಕ್ರಿಶ್ಚಿಯನ್ ಮಿಶೆಲ್ ಜೇಮ್ಸ್‌ಗೆ ದಿಲ್ಲಿಯ ನ್ಯಾಯಾಲಯ ಐದು ದಿನ ಸಿಬಿಐ ಕಸ್ಟಡಿ ವಿಧಿಸಿದೆ.

 ಮಿಶೆಲ್‌ಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಆತನ ವಕೀಲರು ಮನವಿ ಮಾಡಿದ್ದರೆ, ಪುರಾವೆಗಳ ಸಹಿತ ಮಿಶೆಲ್‌ರನ್ನು ವಿಚಾರಣೆ ನಡೆಸಬೇಕು ಮತ್ತು ಹಗರಣದಲ್ಲಿ ಒಳಗೊಂಡಿರುವ ಮೊತ್ತವನ್ನು ಕಂಡುಹಿಡಿಯಬೇಕಿರುವುದರಿಂದ ಸಿಬಿಐ ಕಸ್ಟಡಿ ವಿಧಿಸುವಂತೆ ಸಿಬಿಐ ವಕೀಲರು ಕೋರಿದರು. ವಾದವನ್ನು ಆಲಿಸಿದ ವಿಶೇಷ ಸಿಬಿಐ ನ್ಯಾಯಾಧೀಶ ಅರವಿಂದ್ ಕುಮಾರ್ , ಮಿಶೆಲ್‌ಗೆ ಸಿಬಿಐ ಕಸ್ಟಡಿ ವಿಧಿಸಿತು ಹಾಗೂ ಕಸ್ಟಡಿಯ ಅವಧಿಯಲ್ಲಿ ದಿನಾ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಅವರನ್ನು ಭೇಟಿಯಾಗಲು ವಕೀಲರಿಗೆ ಅವಕಾಶ ನೀಡಿತು.

ಇದೇ ಸಂದರ್ಭ ಸಲ್ಲಿಸಲಾದ ಮಿಶೆಲ್ ಜಾಮೀನು ಅರ್ಜಿಯನ್ನು ಮುಂದಿನ ವಿಚಾರಣೆಯವರೆಗೆ ಅಮಾನತ್ತಿನಲ್ಲಿರಿಸಿತು. ಇಂಗ್ಲೆಂಡಿನ ಪ್ರಜೆಯಾಗಿರುವ 57 ವರ್ಷದ ಮಿಶೆಲ್‌ರನ್ನು ಕಳೆದ ವರ್ಷ ಇಂಟರ್‌ಪೋಲ್ ನೋಟಿಸ್‌ನ ಆಧಾರದಲ್ಲಿ ದುಬೈಯಲ್ಲಿ ಬಂಧಿಸಲಾಗಿದ್ದು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ದುಬೈಯಿಂದ ಗಡೀಪಾರಾಗಿ ಹೊಸದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಮಂಗಳವಾರ ರಾತ್ರಿ ವೇಳೆ ಬಂದಿಳಿದ ಮಿಶೆಲ್‌ರನ್ನು ವಶಕ್ಕೆ ಪಡೆದು ರಾತ್ರಿಯಿಡೀ ವಿಚಾರಣೆ ನಡೆಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಸಿಬಿಐ ಮತ್ತು ಇಡಿ ತನಿಖೆ ನಡೆಸಿರುವ ಈ ಪ್ರಕರಣದಲ್ಲಿ ಮಿಶೆಲ್ ಸಹಿತ ಮೂವರು ಮಧ್ಯವರ್ತಿಗಳಿದ್ದಾರೆ. ಗ್ವಿಡೊ ಹಶ್ಕೆ ಮತ್ತು ಕಾರ್ಲೊ ಜೆರೊಸ ಇನ್ನಿಬ್ಬರು ಮಧ್ಯವರ್ತಿಗಳು ಎಂದು ಸಿಬಿಐ ತಿಳಿಸಿದೆ. ತನ್ನ ವಿರುದ್ಧದ ಆರೋಪವನ್ನು ಮಿಶೆಲ್ ನಿರಾಕರಿಸಿದ್ದಾರೆ. ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಪೂರೈಸುವ ಈ ಒಪ್ಪಂದಕ್ಕೆ ಯುಪಿಎ ಸರಕಾರದ ಅವಧಿಯಲ್ಲಿ, 2010ರ ಫೆಬ್ರವರಿ 8ರಂದು ಸಹಿ ಹಾಕಲಾಗಿದ್ದು , ವ್ಯವಹಾರದಲ್ಲಿ ನಡೆದಿರುವ ಅಕ್ರಮದಿಂದ ಸರಕಾರದ ಬೊಕ್ಕಸಕ್ಕೆ 2,666 ಕೋಟಿ ರೂ. ನಷ್ಟವಾಗಿದೆ ಎಂದು ಸಿಬಿಐ ಆರೋಪಿಸುತ್ತಿದೆ.

2017ರಲ್ಲಿ ಆರೋಪಪಟ್ಟಿ ದಾಖಲಿಸಿದ್ದ ಸಿಬಿಐ, ವಾಯುಪಡೆಯ ನಿವೃತ್ತ ಅಧಿಕಾರಿ ಜೆ.ಎಸ್.ಗುಜ್ರಾಲ್ ಸಹಿತ ಎಂಟು ಮಂದಿಯನ್ನು ಆರೋಪಿಗಳೆಂದು ಹೆಸರಿಸಿತ್ತು. ಇವರಲ್ಲಿ ಐವರು ವಿದೇಶೀಯರು. ಅಲ್ಲದೆ, ಈ ವ್ಯವಹಾರಕ್ಕೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ಸಹಿತ ಎಂಟು ಮಂದಿಯ ವಿರುದ್ಧ ಸಿಬಿಐ ದಿಲ್ಲಿಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಯನ್ನೂ ಆರೋಪಿ ಎಂದು ಹೆಸರಿಸಲಾಗಿತ್ತು. ವಿವಿಐಪಿಗಳ ಪ್ರಯಾಣಕ್ಕೆ ಅಗತ್ಯವಿರುವ ಹೆಲಿಕಾಪ್ಟರ್‌ಗಳ ಪೂರೈಕೆ ಒಪ್ಪಂದಕ್ಕೆ 2012ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಸಹಿ ಹಾಕಲಾಗಿತ್ತು. ಈ ಒಪ್ಪಂದವನ್ನು ಆಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆಗೆ ವಹಿಸುವಂತೆ ಮಿಶೆಲ್ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಭಾರತದ ಅಧಿಕಾರಿಗಳಿಗೆ ಈ ಒಪ್ಪಂದದಲ್ಲಿ ಭಾರೀ ಲಂಚ ಸಂದಾಯವಾಗಿದೆ ಎಂಬ ಆರೋಪವಿದೆ. ಆದರೆ ತನಿಖೆಗೆ ಹಾಜರಾಗದೆ ಮಿಶೆಲ್ ತಪ್ಪಿಸಿಕೊಂಡಿದ್ದರು. ಅವರ ವಿರುದ್ಧ 2015ರ ಸೆಪ್ಟೆಂಬರ್ 24ರಂದು ಸಿಬಿಐ ವಿಶೇಷ ನ್ಯಾಯಾಧೀಶರು ಜಾಮೀನುರಹಿತ ವಾರಂಟ್ ಜಾರಿಗೊಳಿಸಿದ್ದರು. ಈ ವಾರಂಟ್‌ನ ಆಧಾರದಲ್ಲಿ ಇಂಟರ್‌ಪೋಲ್ ಮಿಶೆಲ್ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು.

ಕಾಂಗ್ರೆಸ್‌ನ ‘ಅಗ್ರ ಕುಟುಂಬಕ್ಕೆ’ ತೀವ್ರ ತೊಂದರೆಯಾಗಲಿದೆ: ಬಿಜೆಪಿ

ಯುಪಿಎ ಅವಧಿಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿ ನಡೆದಿರುವ ಈ ಗಡೀಪಾರು ಪ್ರಕರಣ ಭಾರತಕ್ಕೆ ದೊರೆತ ರಾಜತಾಂತ್ರಿಕ ಗೆಲುವಾಗಿದ್ದು, ಇದರಿಂದ ಕಾಂಗ್ರೆಸ್‌ನ ಅಗ್ರ ಕುಟುಂಬಕ್ಕೆ ತೀವ್ರ ತೊಂದರೆಯಾಗಲಿದೆ ಎಂದು ಬಿಜೆಪಿ ಹೇಳಿದೆ. ಅಲ್ಲದೆ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ನರೇಂದ್ರ ಮೋದಿ ಸರಕಾರ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದರ ದೃಢೀಕರಣವಾಗಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News