ಬುಲಂದಶಹರ್ ನಲ್ಲಿ ಮತ್ತೊಂದು ದನದ ಕಳೇಬರ ಪತ್ತೆ: ತರಾತುರಿಯಲ್ಲಿ ಹೂತುಹಾಕಿದ ಪೊಲೀಸರು

Update: 2018-12-05 15:18 GMT

ಹೊಸದಿಲ್ಲಿ,ಡಿ.5: ಸೋಮವಾರ ಬುಲಂದಶಹರ್ ಜಿಲ್ಲೆಯಲ್ಲಿ ದನದ ಕಳೇಬರ ಪತ್ತೆಯಾದ ಬಳಿಕ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತು ಪೊಲೀಸ್ ಅಧಿಕಾರಿಯ ಹತ್ಯೆಯ ಬೆನ್ನಿಗೇ ಅಲ್ಲಿಂದ ಸುಮಾರು 30 ಕಿ.ಮೀ. ದೂರದ ಬುಲಂದಶಹರ್‌ನ ಜಹಾಂಗೀರಾಬಾದ್ ಪ್ರದೇಶದಲ್ಲಿ ಬುಧವಾರ ಇನ್ನೊಂದು ದನದ ಕಳೇಬರ ಪತ್ತೆಯಾಗಿದೆ. ಆದರೆ ಸೋಮವಾರದ ಘಟನೆಯಿಂದ ಪಾಠ ಕಲಿತಿರುವ ಪೊಲೀಸರು ಅದನ್ನು ತಕ್ಷಣವೇ ಹೂತುಹಾಕಿ ನೆರೆದಿದ್ದ ಜನರ ಗುಂಪನ್ನು ಚದುರಿಸಿ ಶಾಂತಿಯನ್ನು ಕಾಯ್ದುಕೊಂಡಿದ್ದಾರೆ.

ಜಹಾಂಗೀರಾಬಾದ್-ದೌಲತ್‌ಪುರ ರಸ್ತ್ತೆೆಯಲ್ಲಿನ ಇಟ್ಟಿಗೆ ಭಟ್ಟಿಯೊಂದರ ಬಳಿ ದನದ ಕಳೇಬರ ಕಂಡಿದ್ದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆಗಾಗಿ ನಾಲ್ವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

 ದನದ ಕಳೇಬರ ಪತ್ತೆಯಾದ ಸುದ್ದಿ ತಿಳಿದ ಬಜರಂಗ ದಳ ಮತ್ತು ಇತರ ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿತ್ತು. ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚದಂತೆ ಪೊಲೀಸ್ ಅಧಿಕಾರಿಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News