ಯುಪಿಎ ರಕ್ಷಿಸಿದ ಮಧ್ಯವರ್ತಿಯನ್ನು ‘ಚಾಯ್‌ವಾಲಾ’ ದೇಶಕ್ಕೆ ಕರೆತಂದಿದ್ದಾನೆ: ಪ್ರಧಾನಿ ಮೋದಿ

Update: 2018-12-05 16:14 GMT

ಜೈಪುರ, ಡಿ.5: ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ವ್ಯಾಪ್ತಿ ಅಗೆದಷ್ಟೂ ವಿಸ್ತಾರವಾಗಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹಗರಣದ ಆಳಕ್ಕೆ ಕೈಹಾಕಿ ಒಬ್ಬ ಮಧ್ಯವರ್ತಿಯನ್ನು ಹಿಡಿಯಲು ಸಫಲವಾಗಿದ್ದೇವೆ. ಯುಪಿಎ ರಕ್ಷಿಸಿದ್ದ ಮಧ್ಯವರ್ತಿಯನ್ನು ‘ಚಾಯ್‌ವಾಲಾ’ ದೇಶಕ್ಕೆ ಕರೆತಂದಿದ್ದಾನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಜಸ್ತಾನ ವಿಧಾನಸಭೆ ಚುನಾವಣೆಯ ಅಂತಿಮ ದಿನದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಹಗರಣದ ಮಧ್ಯವರ್ತಿಯನ್ನು ದುಬೈಯಿಂದ ದೇಶಕ್ಕೆ ಕರೆತರಲು ಕೇಂದ್ರ ಸರಕಾರ ಸಫಲವಾಗಿದೆ. ಇದೀಗ ತಾನು ‘ಸೇವೆ ಸಲ್ಲಿಸಿದ’ ಭಾರತೀಯ ರಾಜಕಾರಣಿಗಳ ರಹಸ್ಯವನ್ನು ಈತ ಬಾಯಿಬಿಡಲಿದ್ದಾನೆ . ಇದರ ವ್ಯಾಪ್ತಿ ಎಷ್ಟರಮಟ್ಟಿಗಿದೆ ಎಂದು ಕಾದು ನೋಡಬೇಕಿದೆ ಎಂದರು.

ವಿವಿಐಪಿ ಹೆಲಿಕಾಪ್ಟರ್ ಪ್ರಕರಣದ ಬಗ್ಗೆ ನಾನು ಉಲ್ಲೇಖಿಸಿದ್ದೆ. ಈ ಬಗ್ಗೆ ಸೋನಿಯಾ ಗಾಂಧಿ ಬರೆದಿದ್ದ ಪತ್ರದ ಕುರಿತು ಮಾತನಾಡಿದ್ದೆ. ಯುಪಿಎ ಸರಕಾರ ಈ ವ್ಯವಹಾರದ ದಾಖಲೆಗಳನ್ನು ಅಡಗಿಸಿಟ್ಟಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಅವನ್ನು ಹುಡುಕಿ ತೆಗೆದೆವು ಎಂದು ಮೋದಿ ಹೇಳಿದರು.

ನ್ಯಾಷನಲ್ ಹೆರಾಲ್ಡ್ ತೆರಿಗೆ ಪ್ರಕರಣದ ಬಗ್ಗೆ ಗಾಂಧಿ ಕುಟುಂಬವನ್ನು ಟೀಕಿಸಿದ ಮೋದಿ, “ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸರಕಾರ ಗೆಲುವು ಸಾಧಿಸಿದ್ದು ಇದಕ್ಕೆ ‘ಚಾಯ್‌ವಾಲಾ’ನ ಧೈರ್ಯ ಕಾರಣ ಎಂದರು. ಈ ಪ್ರಕರಣದ ಮರು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಆದಾಯ ತೆರಿಗೆ ಇಲಾಖೆಗೆ ಅನುಮತಿ ನೀಡಿದೆ. ಇದು ಪ್ರಾಮಾಣಿಕತೆಗೆ ಸಂದ ಗೆಲುವಾಗಿದೆ . ಗಾಂಧಿ ಕುಟುಂಬದ ಪೀಳಿಗೆಯವರು ಈ ದೇಶದಲ್ಲಿ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿದ್ದರು . ಈಗ ನೀವು ಹೇಗೆ ತಪ್ಪಿಸಿಕೊಳ್ಳುತ್ತೀರಿ ನೋಡಬೇಕು. ದೇಶವನ್ನು ನಾಲ್ಕು ತಲೆಮಾರಿನಿಂದ ಆಳುತ್ತಾ ಬಂದವರನ್ನು ನ್ಯಾಯಾಲಯದ ಬಾಗಿಲಿಗೆ ಎಳೆದು ತಂದಿರುವ ಚಾಯ್‌ವಾಲಾ’ನ ಧೈರ್ಯವನ್ನು ನೋಡಿ” ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News