ಫೋರ್ಬ್ಸ್ ಭಾರತದ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ: ಮೊದಲನೆ ಸ್ಥಾನ ಯಾರಿಗೆ ಗೊತ್ತಾ?
Update: 2018-12-05 22:07 IST
ಹೊಸದಿಲ್ಲಿ, ಡಿ.5: ಈ ಬಾರಿಯ ಫೋರ್ಬ್ಸ್ ಭಾರತದ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಭಾರತದ ಅತ್ಯಂತ ಶ್ರೀಮಂತ ಸೆಲೆಬ್ರಿಟಿಯಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹೊರಹೊಮ್ಮಿದ್ದಾರೆ. ಸತತ 3ನೆ ಬಾರಿ ಸಲ್ಮಾನ್ 1ನೆ ಸ್ಥಾನದಲ್ಲಿದ್ದಾರೆ. ಆದರೆ ಈ ಬಾರಿ ಶಾರೂಖ್ ಖಾನ್ ಟಾಪ್ 10 ಪಟ್ಟಿಯಿಂದ ಹೊರಗುಳಿದಿದ್ದಾರೆ.
ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿ ಸೆಲೆಬ್ರಿಟಿಗಳ ಆದಾಯದ ಆಧಾರದಲ್ಲಿ ಈ ಪಟ್ಟಿ ಮಾಡಲಾಗುತ್ತದೆ. ಈ ಪಟ್ಟಿಯ ಎರಡನೆ ಸ್ಥಾನದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದ್ದರೆ, 3ನೆ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಇವರು ಗಳಿಕೆಯು ಕ್ರಮವಾಗಿ 253.25 ಕೋಟಿ ರೂ. 228.09 ಕೋಟಿ ರೂ. ಮತ್ತು 185 ಕೋಟಿ ರೂ. ಆಗಿದೆ.
2017ರಲ್ಲಿ 2ನೆ ಸ್ಥಾನದಲ್ಲಿದ್ದ ಶಾರೂಖ್ ಈ ಬಾರಿ ಟಾಪ್ 10ನಲ್ಲೂ ಇಲ್ಲ. ಫೋರ್ಬ್ಸ್ ಇಂಡಿಯಾ 100 ಸೆಲೆಬ್ರಿಟಿಗಳ ಪಟ್ಟಿಯ ಟಾಪ್ 5ನಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ. ಟಾಪ್ 5ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೊದಲ ಮಹಿಳಾ ಸೆಲೆಬ್ರಿಟಿಯಾಗಿದ್ದಾರೆ ದೀಪಿಕಾ.