×
Ad

ಹಾಸನ: ನೀರು ಮುಟ್ಟಿದ, ದೇವಾಲಯ ಪ್ರವೇಶಿಸಿದ ದಲಿತರ ಮೇಲೆ ಹಲ್ಲೆ; ಆರೋಪ

Update: 2018-12-05 22:08 IST

ಹಾಸನ, ಡಿ. 5: ಸಾರ್ವಜನಿಕ ತೊಟ್ಟಿ ಹಾಗೂ ದೇವಾಲಯ ಪ್ರವೇಶ ಕುರಿತಂತೆ ಹಾಸನ ತಾಲೂಕಿನ ಹೀರೆಕಡಲೂರಿನಲ್ಲಿ ರವಿವಾರ ದಲಿತರ ಮೇಲೆ ಮೇಲ್ವರ್ಗದ ಜನರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ರವಿವಾರ ಹೀರೆಕಡಲೂರು ಗ್ರಾಮದ ಪ್ರದೀಪ್ ಅವರ ವಿವಾಹ ಸಮಾರಂಭ ಇತ್ತು. ಈ ಸಂದರ್ಭ ಸಾರ್ವಜನಿಕ ತೊಟ್ಟಿಯಿಂದ ನೀರು ತೆಗೆದ ಹಾಗೂ ದೇವಾಲಯ ಪ್ರವೇಶಿಸಿದ ಅವರ ಸಂಬಂಧಿಕರ ಮೇಲೆ ಮೇಲ್ಜಾತಿಯ ಜನರು ಹಲ್ಲೆ ನಡೆಸಿದ್ದಾರೆ ಎಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ. “ನಮ್ಮ ಜನರ ಮೇಲೆ ಪೊಲೀಸರ ಎದುರಲ್ಲೇ ಮೇಲ್ಜಾತಿಯವರು ಹಲ್ಲೆ ನಡೆಸಿದ್ದಾರೆ’ ಎಂದು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸದಲ್ಲಿರುವ ಪ್ರದೀಪ್ ಹೇಳಿದ್ದಾರೆ.

ವಿವಾಹದ ಒಂದು ಭಾಗವಾಗಿ ಈಶ್ವರ ದೇವಾಲಯದ ಸಮೀಪ ಇರುವ ಸಾರ್ವಜನಿಕ ತೊಟ್ಟಿಯಿಂದ ನೀರು ತರುವ ಸಂಪ್ರದಾಯವಿದೆ. ಈ ತೊಟ್ಟಿಯನ್ನು ಜಾನುವಾರುಗಳಿಗೆ ನೀರು ಒದಗಿಸಲು ನಿರ್ಮಿಸಲಾಗಿದೆ. ಡಿಸೆಂಬರ್ 1ರಂದು ನಮ್ಮ ಸಂಬಂಧಿಕರು ಸಂಪ್ರದಾಯದಂತೆ ನೀರು ತರಲು ತೆರಳಿದರು. ಈ ಸಂದರ್ಭ ಮೇಲ್ಜಾತಿ ಜನರು ಹಲ್ಲೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹೊನ್ನಾವರ ಗ್ರಾಮಪಂಚಾಯತ್‌ನ ಹೀರೆಕಡಲೂರು ಗ್ರಾಮದಲ್ಲಿ 500ಕ್ಕೂ ಅಧಿಕ ಮನೆಗಳಿವೆ. ಇದರಲ್ಲಿ ದಲಿತರದ್ದು ಕೇವಲ 30 ಮನೆಗಳು ಮಾತ್ರ.

ತೊಟ್ಟಿಯಿಂದ ನೀರು ತರಲು ತೆರಳಿದ್ದ ನಮ್ಮ ಮಹಿಳೆಯರಿಗೆ ಮೇಲ್ಜಾತಿ ಜನರು ಬೈದರು. ವಿವಾಹದ ದಿನವಾದುದರಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ನಾವು ಪೊಲೀಸರಿಗೆ ದೂರು ನೀಡಿದೆವು. ಆದರೆ, ಅನಂತರ ನಾವು ಪ್ರಾರ್ಥನೆ ಸಲ್ಲಿಸಲು ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭ ಪೊಲೀಸರ ಸಮ್ಮುಖದಲ್ಲೇ ಅವರು ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಪ್ರದೀಪ್ ಸಹೋದರ ಮಂಜುನಾಥ್ ಹೇಳಿದ್ದಾರೆ. ಈ ವೇಳೆ ಮೇಲ್ಜಾತಿಯ ವ್ಯಕ್ತಿಯೋರ್ವ ದೇವಾಲಯದಲ್ಲಿ ಇದ್ದ ಮೈಕ್ರೋ ಫೋನ್ ತೆಗೆದುಕೊಂಡು ದೇವಾಲಯ ಪ್ರವೇಶಿಸುವ ದಲಿತರನ್ನು ತಡೆಯಲು ತಮ್ಮ ಸಮುದಾಯದ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುವಂತೆ ಕರೆ ನೀಡಿದ್ದಾನೆ ಎಂದು ಮಂಜುನಾಥ್ ತಿಳಿಸಿದ್ದಾರೆ.

ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದರು ಹಾಗೂ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಅಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಘಟನೆ ಬಗ್ಗೆ ದಲಿತ ಸಮುದಾಯಕ್ಕೆ ಸೇರಿದ ಕಿರಣ್ ಎಚ್.ಬಿ. ಇಬ್ಬರು ಮಹಿಳೆಯರು ಸೇರಿದಂತೆ 14 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಸನ ತಹಶೀಲ್ದಾರ್ ಆರ್.ಬಿ. ಶಿವಶಂಕರಪ್ಪ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಹಾಗೂ ಗ್ರಾಮ ನಿವಾಸಿಗಳೊಂದಿಗೆ ಮಾತನಾಡಿದ್ದಾರೆ. ಜಿಲ್ಲಾಡಳಿತ ಗ್ರಾಮದಲ್ಲಿ ಬುಧವಾರ ಶಾಂತಿ ಸಭೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News