ರಾಜಸ್ತಾನ, ತೆಲಂಗಾಣದಲ್ಲಿ ಪ್ರಚಾರ ಕಾರ್ಯ ಅಂತ್ಯ: ಶುಕ್ರವಾರ ಮತದಾನ
ಜೈಪುರ, ಡಿ.5: ರಾಜಸ್ತಾನ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯ ಬುಧವಾರ ಅಂತ್ಯಗೊಂಡಿದ್ದು ಶುಕ್ರವಾರ ಈ ಎರಡೂ ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಬುಧವಾರ ರಾಜಸ್ತಾನದಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಸುಮೇರ್‌ಪುರ ಹಾಗೂ ದೌಸಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಜ್ಮೇರ್‌ನಲ್ಲಿ ರೋಡ್ ಶೋ ನಡೆಸಿದರು. ಹಿರಿಯ ಬಿಜೆಪಿ ಮುಖಂಡರಾದ ರಾಜನಾಥ್ ಸಿಂಗ್, ವಸುಂಧರಾ ರಾಜೆ, ಸ್ಮೃತಿ ಇರಾನಿ, ರಮಣ್ ಸಿಂಗ್, ಗಜೇಂದ್ರ ಸಿಂಗ್ ಶೆಖಾವತ್ ರಾಜ್ಯದಾದ್ಯಂತ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು. ಕಾಂಗ್ರೆಸ್ ಮುಖಂಡರಾದ ಅಶೋಕ್ ಗೆಹ್ಲೋಟ್ , ಸಚಿನ್ ಪೈಲಟ್ , ಮುಕುಲ್ ವಾಸ್ನಿಕ್, ಹರೀಶ್ ರಾವತ್ ಹಾಗೂ ರಾಜ್‌ಬಬ್ಬರ್ ಕೂಡಾ ರಾಜಸ್ತಾನದ ವಿವಿಧೆಡೆ ಪ್ರಚಾರ ಕಾರ್ಯ ಕೈಗೊಂಡರು. ತೆಲಂಗಾಣದಲ್ಲಿ ಹಲವೆಡೆ ಪ್ರಚಾರ ನಡೆಸಿದ ರಾಹುಲ್ ಗಾಂಧಿ , ಕೊಡಾಡ್‌ನಲ್ಲಿ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಜೊತೆ ಜಂಟಿ ಪ್ರಚಾರ ನಡೆಸಿದರು.
ಬಿಜೆಪಿ ಹಿರಿಯ ಮುಖಂಡರಾದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಉ.ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕರೀಂನಗರ, ಮುಧೋಳ್, ಭೂಪಾಲಪಳ್ಳಿ ಮುಂತಾದೆಡೆ ಪ್ರಚಾರ ನಡೆಸಿದರು. ಟಿಆರ್‌ಎಸ್ ಮುಖಂಡ ಚಂದ್ರಶೇಖರ ರಾವ್ ಹಾಗೂ ಪಕ್ಷದ ಪ್ರಮುಖರು ಹಲವೆಡೆ ಪ್ರಚಾರ ನಡೆಸಿದರು. ಶುಕ್ರವಾರ ನಡೆಯಲಿರುವ ಮತದಾನಕ್ಕೆ ಅಧಿಕಾರಿಗಳು ಸರ್ವ ಸಿದ್ಧತೆ ನಡೆಸಿದ್ದು ಮತದಾನ ಕೇಂದ್ರಕ್ಕೆ ತಲುಪುವ ದಾರಿಯ ನಕ್ಷೆ ಹೊಂದಿರುವ ಮತದಾರರ ಚೀಟಿಯನ್ನು ವಿತರಿಸಲಾಗಿದೆ. ಮತಗಳ ಎಣಿಕೆ ಶುಕ್ರವಾರ ನಡೆಯಲಿದೆ.