ಸ್ವರಾಜ್ಯದಲ್ಲಿ ನಮಗೂ ಸಮಪಾಲು ಬೇಕು

Update: 2018-12-06 18:45 GMT

( ದಹಿವಡಿ ಸತಾರಾ) ಫೆಬ್ರವರಿ 1946

ಅಧ್ಯಕ್ಷ ಮಹಾಶಯರೇ ಹಾಗೂ ನನ್ನ ಅಣ್ಣ ತಮ್ಮಂದಿರೇ, ಅಕ್ಕ-ತಂಗಿಯರೇ, ಇಂದು ನಾನಿಲ್ಲಿ ದಿಲ್ಲಿಯಿಂದ ಸುಮಾರು 1,000 ಮೈಲಿ ಪ್ರವಾಸ ಮಾಡಿ ಬಂದಿದ್ದೇನೆ. ಅದಕ್ಕೆ ಕಾರಣ ಈಗಿನ ಪ್ರಸಂಗವೂ ಅಷ್ಟೇ ಮಹತ್ವದ್ದಾಗಿದೆ. ಎಲ್ಲೆಡೆ ಪ್ರತಿಯೊಂದು ಪಕ್ಷಗಳಲ್ಲಿ ಚುನಾವಣೆಯ ಗಡಿಬಿಡಿ ಆರಂಭವಾಗಿದೆ. ಆದರೆ ಇತ್ತೀಚೆಗೆ ಹಿಂದೂಸ್ಥಾನದಲ್ಲಿನ ವೃತ್ತ ಪತ್ರಿಕೆಗಳಲ್ಲಿ ಒಂದು ಸಂಗತಿ ಪ್ರಾಮುಖ್ಯವಾಗಿ ಕಂಡುಬರುತ್ತಿದೆ. ಅದೆಂದರೆ ಗಾಂಧಿ ಮತ್ತು ನನ್ನ ನಡುವಿನ ಜಗಳ, ಈ ಜಗಳ ಕಳೆದ 25 ವರ್ಷಗಳಿಂದ ಅಂದರೆ ಸುಮಾರು 1920ರಿಂದ ನಡೆದಿದೆ. ಆದರೆ ಈ ಜಗಳ ಯಾಕೆ ಮತ್ತು ಯಾವುದಕ್ಕಾಗಿ ಎಂದು ನೀವೆಲ್ಲಾ ವಿಚಾರ ಮಾಡಿ. ಗಾಂಧಿ ಮತ್ತು ತಿಲಕರದ್ದೂ ಜಗಳವಿತ್ತು. ಗಾಂಧಿ ಹಾಗೂ ಗೋಖಲೆಯವರೂ ಜಗಳವಾಡಿದ್ದರು. ಈ ಜಗಳಗಳು ಮಾತ್ರ ಈಗ ನಾಮಶೇಷವಾಗಿದೆ. ಆದರೆ ನನ್ನ ಗಾಂಧಿಯವರ ನಡುವಿನ ಜಗಳ ಮಾತ್ರ ಇನ್ನೂ ನಡೆದಿದೆ. ನಾನೊಂದು ದರಿದ್ರ ಕುಟುಂಬದಲ್ಲಿ ಜನಿಸಿದ್ದೇನೆ. ಕಷ್ಟದಿಂದ, ಹಟದಿಂದ ಕಲಿತೆ, ನಂತರ ಬಡೋದೆಯ ಸರಕಾರದ (ರಾಜರ) ಸಹಾಯದಿಂದ ವಿದೇಶಕ್ಕೆ ಹೋಗಿ ಅನೇಕ ಪದವಿಗಳನ್ನು ಪಡೆದೆ, ಕೆಲಸ ಹಿಡಿದೆ. ಎರಡು ವರ್ಷಗಳ ನಂತರ ನೌಕರಿ ಬಿಟ್ಟು ವಿದೇಶಕ್ಕೆ ಹೋಗಿ ಬ್ಯಾರಿಸ್ಟರ್ ಮತ್ತು ಡಿಎಸ್ಪಿ ಆದೆ.

ಆವಾಗಿನಿಂದ ಸಮಾಜಕಾರ್ಯ ಹಾಗೂ ಉದ್ಯೋಗ ಎರಡನ್ನೂ ಪ್ರಮಾಣಿಕವಾಗಿ ಮಾಡುತ್ತ ಬಂದಿದ್ದೇನೆ. ನಾನು ವಕೀಲಿ ವೃತ್ತಿಯನ್ನು ಆರಂಭಿಸಿದಾಗ ಹೈಕೋರ್ಟಿನಲ್ಲಿದ್ದ ಎಲ್ಲ ವಕೀಲರು ಬ್ರಾಹ್ಮಣರು ಹಾಗೂ ಎಲ್ಲ ಸಾಲಿಸಿಟರ್ಸ್(ಸಲಹಾಕಾರರು) ಗುಜರಾತಿಗಳು. ಅದೇ ಸಮಯಕ್ಕೆ ಗಾಂಧಿಯ ಬಳಿ ಹೋಗಿ ನನ್ನ ಸಲುವಾಗಿ ಏನಾದರೂ ಬೇಡಬಹುದಿತ್ತು. ಮಾನ ಸನ್ಮಾನ, ಕೇಸುಗಳು, ದುಡ್ಡು ಏನ್ನನ್ನೂ ಕೇಳಬಹುದಿತ್ತು. ಗಾಂಧಿಗೆ ಶರಣು ಹೋಗಿ ಇತರರಂತೆ ನನ್ನ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಿತ್ತು. ಆದರೆ ನನ್ನ ಮತ್ತು ಗಾಂಧಿಯ ವಾದ ಹಾಗೆಯೇ ಉಳಿದುಬಿಡುತ್ತಿತ್ತು. ಗಾಂಧಿಯ ಬಳಿ ನನಗಾಗಿ ಏನನ್ನೂ ಬೇಡುವ ಪ್ರಸಂಗವಿಲ್ಲ. ಬುದ್ಧಿ ಕರ್ತೃತ್ವ ಮತ್ತು ಪುರುಷಾರ್ಥದಿಂದ ನಾನು ನನ್ನ ಜೀವನವನ್ನು ಕಳೆಯುತ್ತಿದ್ದೇನೆ. ನಾನು ಗಾಂಧಿಯ ಬಳಿ ನಿಮಗಾಗಿ ನಿಮಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ನಿಮ್ಮ ವತಿಯಿಂದ (ನಮ್ಮ ಪರವಾಗಿ) ನ್ಯಾಯ ಬೇಡುತ್ತಿದ್ದೇನೆ. ಗಾಂಧಿಯೊಂದಿಗೆ ನಡೆದ ನನ್ನ ಈ ಜಗಳ ನಮ್ಮ ಇಡೀ ಸಮಾಜದ ಪರವಾಗಿದೆ. ಅದು ಸಮಾಜದ ಭವಿಷ್ಯಕ್ಕಾಗಿದೆ.

ಇತ್ತೀಚೆಗೆ ಎಲ್ಲರೂ(ಪ್ರತಿಯೊಬ್ಬರೂ) ಸ್ವರಾಜ್ಯದ ಬೇಡಿಕೆಯನ್ನು ಇಡುತ್ತಿದ್ದಾರೆ, ಆದರೆ ವಿಚಾರ ಮಾಡಿ ಅದು ಯಾರ ಸ್ವರಾಜ್ಯ? ನಿಮ್ಮ ರಾಜ್ಯ(ಅಧಿಕಾರ ) ನಮ್ಮ ಮೇಲೆ ಏಕೆ? ಎಂದು ನಾನು ಸವರ್ಣೀಯರನ್ನು ಕೇಳುತ್ತೇನೆ, ನಮಗೂ ನಮ್ಮ ಸ್ವರಾಜ್ಯ ಮತ್ತು ನ್ಯಾಯದ ಹಕ್ಕು ಬೇಡವೇ? ಹಿಂದೂಗಳ ಸ್ವರಾಜ್ಯವೆಂದರೆ ಪೇಶ್ವಾಯಿ ಇದ್ದಂತೆ, ಪೇಶ್ವೆಗಳೂ ಸ್ವರಾಜ್ಯವನ್ನು ಹೊಂದಿದ್ದರು. ಆಗ ಕೂಡ ನಮ್ಮ ಶೋಷಣೆ ಆಯಿತಲ್ಲವೇ? ಅಸ್ಪಶ್ಯರ ಉಗುಳು ರಸ್ತೆಯ ಮೇಲೆ ಬಿದ್ದು ಮೈಲಿಗೆಯಾಗಬಾರದೆಂದು ಕೊರಳಲ್ಲಿ ಗಡಿಗೆ ಕಟ್ಟಿದರು, ಅವರ ಪಾದಕ್ಕೆ ಹತ್ತಿದ ಧೂಳಿನ ಸ್ಪರ್ಶದಿಂದ ಮೈಲಿಗೆಯಾಗಬಾರದೆಂದು ಹಿಂದೆ ಕಸಪೊರಕೆ ಕಟ್ಟಿದರು, ಗುರುತಿಗಾಗಿ ಕೊರಳಲ್ಲಿ ಕಪ್ಪುದಾರ!. ಇಂತಹ ಪರಿಸ್ಥಿತಿ ಬರಬಾರದೆಂದೇ ನನ್ನ ಪ್ರಯತ್ನ! ಜಗಳ!

ಸ್ವರಾಜ್ಯಕ್ಕೆ ನನ್ನ ವಿರೋಧವಿಲ್ಲ, ಆದರೆ ಆ ಸ್ವರಾಜ್ಯದಲ್ಲಿ ನಮಗೆ ಸಮಪಾಲು (ಸಾಕಷ್ಟು ಪಾಲು)ಬೇಕು. ಅಧಿಕಾರ ಹಾಗೂ ಸನ್ಮಾನದ ಸ್ಥಾನದಲ್ಲಿ ನಮ್ಮ ಜನರೂ ಹಕ್ಕಿನಿಂದ ಕೂರಬೇಕು. ದುಂಡುಮೇಜಿನ ಪರಿಷತ್ತಿನಲ್ಲಿ ನಾನು ಸ್ವತಂತ್ರ ಮತದಾರ ಸಂಘಕ್ಕಾಗಿ ಜಗಳವಾಡಿದೆ. ಸವರ್ಣೀಯರು ಆಯ್ಕೆ ಮಾಡಿದ ಪ್ರತಿನಿಧಿ ನಮಗೆ ಬೇಡ ಎಂದು ಆಗ್ರಹ ಪಡಿಸಿದೆ. ಕೊನೆಗೂ ನಾನು ವಿಜಯಿಯಾದೆ. ನಮಗೆ ಸ್ವತಂತ್ರ ಮತದಾರ ಸಂಘ ದೊರೆಯಿತು. ಆದರೆ ಇದರಿಂದ ಗಾಂಧೀಜಿಯವರಿಗೆ ಬೇಸರವಾಯಿತು. ಅಸ್ಪಶ್ಯರಿಗೆ ದೊರೆತ ಸ್ವಾಭಿಮಾನದ ಹಕ್ಕನ್ನು ದುಷ್ಟತನದಿಂದ ಕಸಿದುಕೊಳ್ಳುವುದಕ್ಕಾಗಿ ಅವರು ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡರು. ನಮ್ಮ ಹಕ್ಕನ್ನು ಕಸಿದುಕೊಂಡರು. ಅದರಿಂದಾಗಿ ನಮಗೆ ಬಹಳ ಕಡಿಮೆ ಹಕ್ಕುಗಳು ದೊರೆತವು. ನಮ್ಮ ಭದ್ರ ಕೋಟೆಗೆ ಬಿದ್ದ ಬಿರುಕನ್ನು ನಾವು ಸಂಘಟನೆಯ ಕೆಚ್ಚನ್ನು ಹಾಕಿ ತುಂಬಿ ತೆಗೆಯಬೇಕು, ಬಿರುಕನ್ನು ಮುಚ್ಚಬೇಕು. ಸರಕಾರಿ ಅಧಿಕಾರಿಗಳು ನಮ್ಮವರಾಗಿರಬೇಕು. ಮಧ್ಯವರ್ತಿ ಸರಕಾರದಲ್ಲಿ ಕೂಡಾ ನಮ್ಮ ಮಂತ್ರಿಗಳಿರಬೇಕು. ಹೀಗಿರುವಾಗ 2 ಪ್ರಾಂತಗಳಲ್ಲಿ ಕಾಂಗ್ರೆಸ್ ಮಂತ್ರಿಮಂಡಳಗಳಾದರೂ ಗಾಂಧಿಯ ದೃಷ್ಟಿಕೋನ ಬದಲಾಗಲಿಲ್ಲ. ಅವರ ಹೃದಯ ಪರಿವರ್ತನೆ ಆಗಲಿಲ್ಲ ಮೊನ್ನೆ ಗಾಂಧಿ ಮದ್ರಾಸಿಗೆ ಹೋದರು ಅಲ್ಲಿ ಒಬ್ಬರು ಅಸ್ಪಶ್ಯರು ಮತ್ತು ನಿಮ್ಮ ನಡುವೆ ವಾದವೇಕೆ ಎಂದು ಪ್ರಶ್ನಿಸಿದರು. ಆಗ ನೇರವಾಗಿ ಸ್ಪಷ್ಟ ಉತ್ತರವನ್ನು ಕೊಡದೇ ಹಾರಿಕೆಯ ಮಾತನ್ನು ಹೇಳಿ ಬ್ರಿಟಿಷರು ಇವರಿಗೆಲ್ಲ ಅಧಿಕಾರದ ಚಟ ಹಚ್ಚಿದ್ದಾರೆ ಎಂದರು. ಮರಾಠ, ಮುಸಲ್ಮಾನ ಅಂತೆಯೇ ಕ್ರಿಶ್ಚಿಯನ್, ಆಂಗ್ಲೋ ಇಂಡಿಯನ್ ಇವರಿಗೆಲ್ಲಾ ಕೆಲಸ ಕೊಟ್ಟರೆ ಗಾಂಧಿಗೆ ಸಮ್ಮತಿ ಇದೆ, ಆದರೆ ಅಸ್ಪಶ್ಯರಿಗೆ ಕೊಟ್ಟರೆ ಮಾತ್ರ ಇವರಿಗೆ ಹೊಟ್ಟೆಕಿಚ್ಚು ಎನ್ನುವುದು ನನ್ನ ಅನುಭವ.

 ಈ ಚುನಾವಣೆ ಅತಿ ಮಹತ್ವದ್ದಾಗಿದೆ. ಇಂಗ್ಲಿಷರು ತಮ್ಮ ಅಧಿಕಾರವನ್ನು ಬಿಟ್ಟು ಕೊಡುವವರಿದ್ದಾರೆ. ಜನ ಸಾಮಾನ್ಯರಿಗೆ ಅಧಿಕಾರ ಮತ್ತು ಸಂವಿಧಾನ ತಯಾರಿಸುವ (ಸಿದ್ಧಪಡಿಸುವವರು) ಅಧಿಕಾರವನ್ನು ಕೊಡುವವರಿದ್ದಾರೆ. ಅದಕ್ಕಾಗಿ ಒಂದು ಸಂವಿಧಾನ ಸಮಿತಿಯನ್ನು ರಚಿಸುವವರಿದ್ದಾರೆ. ಅದಕ್ಕಾಗಿ ನಮ್ಮ ಸಂಸದರು ಅಲ್ಲಿ ಹೋಗಿ ಸಂವಿಧಾನದ ವ್ಯಾಪ್ತಿಯನ್ನು ನಿರ್ಧರಿಸುವವರಿದ್ದಾರೆ. ನಮಗಾಗಿ ನೌಕರಿ, ಶಿಕ್ಷಣ, ಪ್ರತಿನಿಧಿತ್ವ, ಅಧಿಕಾರ, ಸ್ವತಂತ್ರ ಅಸ್ತಿತ್ವ, ವಸತಿ ಮುಂತಾದವುಗಳ ಬೇಡಿಕೆಯನ್ನು ನಿರ್ಭಯದಿಂದ ಮಂಡಿಸುವ ಜನರ ಆವಶ್ಯಕತೆ ಇದೆ. ಅಸ್ಪಶ್ಯರ ಬೊಗಸೆಯಿಂದ ನೀರು ಕುಡಿಯುವ ಜನ ಬೇಡ. ಕಾಂಗ್ರೆಸ್‌ನಿಂದ ಟಿಕೆಟ್ ದೊರೆತ ಉಮೇದುದಾರರು ಯಾವುದೇ ಹಿಂಜರಿಕೆಯಿಲ್ಲದೆ ನಮ್ಮ ಬೇಡಿಕೆಗಳನ್ನು ಮುಂದಿಡಲು ಸಿದ್ಧರಾದರೆ ನಾನು ಅವರಿಗೆ ನನ್ನ ಬೆಂಬಲ ಕೊಡುತ್ತೇನೆ. ಆದರೆ ಆ ಜನ ಸ್ಪಶ್ಯರ ಗುಲಾಮರು, ಅಸ್ಪಶ್ಯರ ಹಿತದ ಕಡೆಗೆ ಗಮನ ಹರಿಸದೇ ಕೇವಲ ಸ್ವಾರ್ಥವನ್ನು ಸಾಧಿಸುವವರು. ನಾವು ಅವರನ್ನು ಸೋಲಿಸಿದರೆ ಒಳ್ಳೆಯದಾಗುತ್ತದೆ. ಮಾಲಕ ತನ್ನ ನಾಯಿ ಬೇರೆಡೆ ಹೋಗಬಾರದೆಂದು ಕೊರಳಪಟ್ಟಿ ಹಾಕುತ್ತಾನೋ ಅದೇ ರೀತಿ ಕಾಂಗ್ರೆಸ್ ಟಿಕೆಟೆಂದರೆ ಹಿತ್ತಾಳೆಯ ಕೊರಳಪಟ್ಟಿ. ಕಾಂಗ್ರೆಸನ್ನು ಹತ್ತಿರ ಸೇರಿಸಬೇಡಿ. ಕಾಂಗ್ರೆಸ್‌ನ ಉಮೇದುವಾರ ನಮ್ಮ ಶತ್ರು. ಪರಾಧೀನ ಅವನು. ನಮ್ಮ ಜನ ಪರಾಧೀನರಾಗಕೂಡದು. ಆದ್ದರಿಂದ ನೀವು ಎಚ್ಚರಿಕೆಯಿಂದಿರಿ.

ಪರಾಧೀನತೆಯಿಂದ ಉಂಟಾಗುವ ಹಾನಿಯ ಬಗ್ಗೆ ಒಂದು ಪ್ರತ್ಯಕ್ಷ ಘಟನೆಯನ್ನು ಹೇಳುತ್ತೇನೆ. ಫಲವನ್‌ದ ಹೊಲೆಯರ ಬಳಿ ಭೂಮಿ ಇತ್ತು. ಅಲ್ಲಿನ ರಾಜ ಅದಾವುದೋ ಕಾರಣಕ್ಕಾಗಿ ಅಲ್ಲಿನ ಒಂದು ದೇವಸ್ಥಾನದಲ್ಲಿ ದಿನಾಲೂ ಐದುನೂರು ಜನ ಬ್ರಾಹ್ಮಣರಿಗೆ ಪಂಚಪಕ್ವಾನ್ನದ ಊಟ ಹಾಕಿಸುತ್ತಿದ್ದ. ಅರಮನೆಯಿಂದ ದಿನಾಲೂ ಬಂಡಿ ತುಂಬಿ ಊಟ ಬರುತ್ತಿದ್ದರಿಂದ ಆ ಹೊಲೆಯರು ಆ ಎಂಜಲು ಊಟದ ಮೇಲೇ ಅವಲಂಬಿತರಾಗಿ, ಕೆಲಸ ಕಾರ್ಯ ಮಾಡುತ್ತಿರಲಿಲ್ಲ. ಹೊಲ ಹಾಗೆಯೇ ಬಿದ್ದಿತ್ತು. ಅವರ ಹೊಲದ ಮೇಲೆ ಅರಣ್ಯವನ್ನು ಬೆಳೆಸಿ ಮರಾಠರು ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಮಂದೆ 60/70 ವರ್ಷಗಳ ನಂತರ ರಾಜ ಬ್ರಾಹ್ಮಣರಿಗೆ ಊಟ ಹಾಕುವುದನ್ನು ನಿಲ್ಲಿಸಿದಾಗ ಹೊಲೆಯರಿಗೂ ಊಟ ಸಿಗುವುದು ನಿಂತುಹೋಯಿತು. ಆಗ ಮುದುಕನೊಬ್ಬ ನಮ್ಮ ಭೂಮಿಯನ್ನು ಕೊಡಿಸಿ ಎಂದು ನನ್ನ ಬಳಿ ಕಾಗದ ದಾಸ್ತಾವೇಜು ತೆಗೆದುಕೊಂಡು ಬಂದ. ಆದರೆ 1874 ಕ್ಕೂ ಹಿಂದೆಯೇ ಭೂಮಿಯ ಮೇಲಿನ ಹಕ್ಕು ಹೋಗಿದ್ದರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ಈ ರೀತಿ ಎಂಜಲು ಊಟದಿಂದ ಹೊಲೆಯರು ಭೂಮಿ ಕಳೆದುಕೊಳ್ಳಬೇಕಾಗಿ ಬಂತು. ಪರಾವಲಂಬಿ ಜೀವನದಿಂದಾಗಿ ಹಕ್ಕನ್ನು ಕಳೆದುಕೊಳ್ಳಬೇಕಾಯಿತು. ಆದ್ದರಿಂದ ನಿದ್ದೆ ಬಿಟ್ಟು ಕಣ್ಣು ತೆರೆಯಿರಿ, ಎಚ್ಚರಗೊಳ್ಳಿ, ಎರಡು ವರ್ಷಗಳಲ್ಲಿ ಇಲ್ಲಿ ಬಹುದೊಡ್ಡ ಪರಿವರ್ತನೆಯಾಗಲಿದೆ. ಇಂಗ್ಲಿಷರು ಕೊಟ್ಟ ಅಧಿಕಾರ ಬೇರೆಯವರಿಗೆ ಹೋಗದೆ ಅದು ನಮ್ಮ ಕೈಯಲ್ಲಿ ಉಳಿಯಬೇಕು. ಅದಕ್ಕಾಗಿ ಈಗಿನ ಚನಾವಣೆ ನಿರ್ಣಾಯಕ ಸಂಗ್ರಾಮವಾಗಿದೆ. ಕೌರವ ಪಾಂಡವರ ಸಂಗ್ರಾಮದಂತೆ.

ನಮ್ಮ ಬ್ರಾಹ್ಮಣೇತರ ಸ್ನೇಹಿತರು ಈಗ ಕಾಂಗ್ರೆಸ್‌ನ ಕಡೆಗೆ ಒಲವು ತೋರಿಸುತ್ತಿದ್ದಾರೆ. ಈಗ ಕಾಂಗ್ರೆಸ್ ಮತ್ತು ನಮ್ಮ ಫೆಡರೇಶನ್‌ನ ಮಧ್ಯೆ ಜಗಳವಿದೆ. ನಾವೆಲ್ಲ ಒಗ್ಗಟ್ಟಿನಿಂದ ನಿರ್ಧಾರ ಮಾಡಿದರೆ ಜಯ ನಮ್ಮದೇ. ಸತ್ತರೂ ಪರವಾಗಿಲ್ಲ ಆದರೆ ಸನ್ಮಾನದಿಂದ ಬದುಕುತ್ತೇವೆ ಎಂದು ನಿರ್ಧಾರ ಮಾಡದ ಹೊರತು ಶಾಶ್ವತವಾದ ಸಾಮುದಾಯಿಕ ಬದಲಾವಣೆ ತರಲು ಸಾಧ್ಯವಿಲ್ಲ.

ಇಪ್ಪತ್ತು ವರ್ಷಗಳ ಹಿಂದಿನ ಮತ್ತು ಇಂದಿನ ಪರಿಸ್ಥಿತಿಯಲ್ಲಿ ಅಜಗಜಾಂತರವಿದೆ. ಆ ಸಮಯದಲ್ಲಿ 90 ಪ್ರತಿಶತದಷ್ಟು ಜನ ‘‘ಅಣ್ಣಾ ನಿನ್ನ ಗ್ವಾದ್ನಿಯೊಳಗ ಇರುತೀನಿ’’ ಎನ್ನುತ್ತಿದ್ದರು. ಇಂದು ನಮ್ಮಲ್ಲಿನ ಯಾರೂ ಆ ರೀತಿಯಿಂದ ಹೇಳುವುದಿಲ್ಲ ಎನ್ನುವುದು ಆನಂದದ ವಿಷಯ. ಹೊಲೆಯರಿಗೆ ಮೊದಲು ಕಾಯ್ದೆ ಮಂಡಳದ ಕಟ್ಟಡದ ಕಸಗುಡಿಸುವ ಕೆಲಸವನ್ನು ಮಾತ್ರ ಕೊಡಲಾಗುತ್ತಿತ್ತು. ಆದರೆ ಇಂದು ನನ್ನ 15 ಜನರು ಕಾಯ್ದೆ ಮಂಡಳದಲ್ಲಿ ಸದಸ್ಯರಾಗಿದ್ದಾರೆ. ಇತರರ ತೊಡೆಗೆ ತೊಡೆ ಹಚ್ಚಿ ಸನ್ಮಾನದಿಂದ ಕೂರುತ್ತಿದ್ದಾರೆ. ಇವತ್ತಿಲ್ಲ ನಾಳೆ ಮಂತ್ರಿಗಳಾಗುತ್ತಾರೆ. ಆದ್ದರಿಂದ ಈ ಚುನಾವಣೆ ಬಹಳ ಮಹತ್ವದ್ದಾಗಿದೆ. ಬ್ರಾಹ್ಮಣ ಮತ್ತು ಬ್ರಾಹ್ಮಣೇತರರು ಸೇರುವ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಭಾಗವಹಿಸುತ್ತಾರೆ.

ಆದರೆ ನಿಮಗೆ ಮತ್ತು ನಿಮಗೆ ಚುನಾವಣೆಯ ಅನಿವಾರ್ಯತೆ ಎಂದರೆ ಬೀಸುಕಲ್ಲಿನಲ್ಲಿ ಸಿಕ್ಕಿ ಪುಡಿಯಾಗುವುದನ್ನು ತಪ್ಪಿಸಿಕೊಳ್ಳುವುದು. ಬೀಸುಕಲ್ಲಿನ ಗೂಟವನ್ನು ನಮ್ಮ ಕೈಯಲ್ಲಿಟ್ಟುಕೊಳ್ಳಬೇಕು. ಗುಲಾಮಗಿರಿಯನ್ನು ತಪ್ಪಿಸಿಕೊಳ್ಳುವುದು ನಾವು ಮಾಡಬೇಕಾದ ಮೊದಲ ಕೆಲಸ. ನಮ್ಮ ಬಳಿ ಹಣವಿಲ್ಲ, ಬಲವಿಲ್ಲ. ಆದ್ದರಿಂದ ರಾಜಕೀಯವಾಗಿ ಸಮರ್ಥರಾಗಬೇಕು. ನಮ್ಮ ಒಪ್ಪಿಗೆ ಸಮ್ಮತಿಯಿಂದ ಆಡಳಿತ ನಡೆಯಬೇಕು. ಆದ್ದರಿಂದ ಮತದಾನದ ಹಕ್ಕು ಇರುವವರೆಲ್ಲ ಅದೊಂದು ಅಮೂಲ್ಯ ವಸ್ತುವೆಂದು ತಿಳಿದುಕೊಂಡು ಅದನ್ನು ಬಳಸಿ. ಮತವೆಂದರೆ ಈಶ್ವರ ಕೊಟ್ಟ ಸಂಜೀವಿನಿ ಮಂತ್ರವಾಗಿದೆ. ಅದನ್ನು ಸರಿಯಾಗಿ ಉಪಯೋಗಿಸಿದರೆ ಅದು ನಮ್ಮ ರಕ್ಷಣೆ ಮಾಡುತ್ತದೆ. ಸ್ವಾಭಿಮಾನ ಬದುಕಿಗೆ ಅದೇ ಒಂದು ತಾರಕೋಪಾಯವಾಗಿದೆ. ಅದನ್ನು ಜೋಪಾನ ಮಾಡಿ. ಆ ದೃಷ್ಟಿಯಿಂದಲೇ ಚುನಾವಣೆಯ ವಿಚಾರ ಮಾಡಿ.

ನಾವು ಕಾಯ್ದೆ ಮಂಡಳಿಯಲ್ಲಿ ಕೂಡ ಅಲ್ಪಸಂಖ್ಯಾತರು 175ರಲ್ಲಿ 15 ಜನ ಮಾತ್ರ. ಈ ಸಂಖ್ಯೆಯಿಂದ ಕೆಲಸ ಮಾಡುವುದು ಕಠಿಣ. ಆದ್ದರಿಂದ ಈ 15 ಅನ್ನು 20, 25ನ್ನಾಗಿ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜನ ಆರಿಸಿ ಹೋಗಬೇಕು. ಅದಕ್ಕಾಗಿ ನಾವು ಜನರಲ್ ಸ್ಥಾನಕ್ಕಾಗಿ ಕೂಡ ಹೋರಾಟ ಮಾಡುತ್ತಿದ್ದೇವೆ. ನಾವೆಲ್ಲರೂ ಅವರಿಗೆ ನಾಲ್ಕೂ ಮತಗಳನ್ನು ಕೊಟ್ಟರೆ ಜಯ ನಮ್ಮದಾಗುತ್ತದೆ. 10,000 ಮತಗಳಿವೆ. 10,000 ಜನರಾದರೂ ಅವರಿಗೆ ಮತ ಹಾಕಬೇಕು. ಪ್ರತಿಯೊಬ್ಬರಿಗೂ 4 ಮತಗಳು ಹಾಗೂ 4 ಸ್ಥಳಗಳಿವೆ. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ನಮ್ಮ ವಿರೋಧಿಗಳ ಬಳಿ ಹಣವಿದೆ. ನಮ್ಮ ವಿರೋಧಿಗಳು ಮೋಸದಿಂದ ಗಳಿಸಿದ ಹಣವನ್ನು ಪಾಪಕ್ಷಲನೆಗಾಗಿ ಕಾಂಗ್ರೆಸ್‌ಗೆ ಚುನಾವಣೆಗೆ ಬಳಸಲು ಕೊಡುತ್ತಿದ್ದಾರೆ. ಆದರೆ ರಾಜಕಾರಣ ಹಣದ ಮೇಲೆ ಅವಲಂಬಿತವಾದರೆ ನಮಗೆ ರಾಜಕಾರಣವನ್ನೇ ಬಿಡಬೇಕಾಗುತ್ತದೆ.

ರಾಜಕಾರಣವೆಂದರೆ ಒಂದು ಆಟವಾಗುತ್ತಿದೆ. ನಾವು ಅಸ್ಪಶ್ಯರು ಕಾಂಗ್ರೆಸ್‌ನ ಹಿಂದೆ ಹೋಗುವುದು. ಇತರ ಜನರು ಹಣದ ಆಸೆಗಾಗಿ. ಕಾಂಗ್ರೆಸ್‌ನ ಹಿಂದೆ ಓಡುತ್ತಾರೆ ಏಕೆಂದರೆ, ಕಾಂಗ್ರೆಸನ್ನು ಜನ ನಂಬಿದ್ದಾರೆ. ಎಂದರೆ ಚುನಾವಣೆಗಳು ಯಾವುದೇ ವೆಚ್ಚವಿಲ್ಲದೇ ಆಗಬೇಕು. 1932ರಲ್ಲಿ ನನ್ನ ವಿರೋಧಿ 25,000 ರೂ. ಖರ್ಚು ಮಾಡಿದರು. ನನ್ನ ಖರ್ಚು ಕೇವಲ 900 ರೂ. ಅದೂ ಅತ್ಯವಶ್ಯಕ ಸಂಗತಿಗಳಿಗಾಗಿ. ಇಷ್ಟಾದರೂ ನಾನು ಮೊದಲನೇ ಸ್ಥಾನ ಗಳಿಸಿದೆ. ಅದಕ್ಕಾಗಿ ನನಗೆ ಧನ್ಯತೆ ಇದೆ. ಹೀಗಿದ್ದಾಗ ರಾಜಕಾರಣ ನಿಜವಾದ ಅರ್ಥದಲ್ಲಿ ಯಾರಿಗಾದರೂ ತಿಳಿದಿದ್ದರೆ ಅದು ಅಸ್ಪಶ್ಯರಿಗೆ ಎಂದೇ ಹೇಳಬೇಕಾಗುತ್ತದೆ. ಇತರರು ತಮಗಾಗಿ ಸ್ವಾಥರ್ಕ್ಕಾಗಿ ರಾಜಕಾರಣವನ್ನು ಮಾಡುತ್ತಾರೆ. ಅವರಿಗೆ ಸಮಾಜದ ದೇಶದ ಹಿತ ಮಹತ್ವದ್ದಾಗಿರುವುದಿಲ್ಲ.

ನಾನು ಕಳೆದ 20 ವರ್ಷಗಳಿಂದ ಸತತವಾಗಿ ರಾಜಕಾರಣದಲ್ಲಿದ್ದೇನೆ. ರಾಜಕಾರಣವನ್ನು ಆಳವಾಗಿ ಅಭ್ಯಸಿಸಿದ್ದೇನೆ. ನನ್ನ ರಾಜಕಾರಣ ಎಂದಿಗೂ ಮೋಸಗೊಂಡಿಲ್ಲ. ನಾನು ರಾಜಕಾರಣದಲ್ಲಿ ಚೆನ್ನಾಗಿ ಪಳಗಿದ್ದೇನೆ. ಆದ್ದರಿಂದ ನನ್ನ ರಾಜಕಾರಣ ನಿಜವಾದ ರಾಜಕಾರಣ, ಪ್ರಾಮಾಣಿಕ ಮತ್ತು ಸ್ವಭಾವ ಜನ್ಯವಾಗಿದೆ. ಇತರರು ರಾಜಕಾರಣ ಸಮುದ್ರದ ದಂಡೆಯ ಮೇಲೆ ನಿಂತು ಸುಮ್ಮನೆ ಜಿಗಿದಾಡಿ ತಮಾಷೆ ನೋಡುತ್ತಾರೆ. ಅವರಿಗೆ ಅನುಭವವಿಲ್ಲ. ನಮ್ಮದು ಹಾಗಲ್ಲ. ಆದರೂ ನಾವೆಲ್ಲರೂ ಜಾಗರೂಕರಾಗಿದ್ದು ವಿರೋಧಿಗಳ ಯಾವುದೇ ಸುಳ್ಳುಗಳಿಗೆ ಬೆದರಿಕೆಗಳಿಗೆ ಲಕ್ಷಕೊಡದೇ ಸಮಾಜದ ಉದ್ಧಾರದ ಪವಿತ್ರ ಕರ್ತವ್ಯವೆಂದು ನಮ್ಮ ನಾಲ್ಕು ಮತಗಳನ್ನು ನಮ್ಮ ಉಮೇದುವಾರನಿಗೇ ಹಾಕಬೇಕು. ಹೇಳಬೇಕಾದುದನ್ನು ಹೇಳಿ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನೀವೆಲ್ಲ ನಿಮ್ಮ ಕರ್ತವ್ಯವನ್ನು ಮಾಡುತ್ತೀರಿ ಎಂದು ಆಶಿಸುತ್ತೇನೆ.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News