3 ತಿಂಗಳ ಬಳಿಕ ನಡೆಯಿತು ಬಾಲಿವುಡ್ ಕೇಶವಿನ್ಯಾಸಕಿಯ ಅಂತ್ಯಸಂಸ್ಕಾರ

Update: 2018-12-07 17:28 GMT

ಮುಂಬೈ,ಡಿ.7: ಮೂರು ತಿಂಗಳ ಹಿಂದೆ ನಿಧನರಾಗಿದ್ದ ಬಾಲಿವುಡ್ ಕೇಶ ವಿನ್ಯಾಸಕಿ ಶೀಲಾ ಕಪೂರ್(75) ಅವರ ಅಂತ್ಯಸಂಸ್ಕಾರವು ಶುಕ್ರವಾರ ಇಲ್ಲಿ ನಡೆಯಿತು.

ಕಪೂರ್ ಅವರು ಈ ವರ್ಷದ ಆಗಸ್ಟ್‌ನಲ್ಲಿ ವರ್ಸೋವಾದ ತನ್ನ ಫ್ಲಾಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಬಂಧುಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಮತ್ತು ಇತರರು ವಿಫರಾಗಿದ್ದರಿಂದ ಶವವನ್ನು ಜುಹುವಿನ ಕೂಪರ್ ಆಸ್ಪತ್ರೆಯ ಶವಾಗಾರದಲ್ಲಿ ಕಾಯ್ದಿರಿಸಲಾಗಿತ್ತು.

ಅಮರಪ್ರೇಮ್,ಕಾರವಾನ್‌ನಂತಹ ಸೂಪರ್‌ಹಿಟ್ ಚಿತ್ರಗಳು ಸೇರಿದಂತೆ ಹಲವಾರು ಹಿಂದಿಚಿತ್ರಗಳಿಗೆ ಕೇಶ ವಿನ್ಯಾಸಕಿಯಾಗಿ ಕಪೂರ್ ಕಾರ್ಯ ನಿರ್ವಹಿಸಿದ್ದರು.

ಸಾಮಾಜಿಕ ಕಾರ್ಯಕರ್ತ ಪ್ರಕಾಶ ಗಿದ್ವಾನಿ ನೇತೃತ್ವದ ತಂಡವು ಪೊಲೀಸರ ಅನುಮತಿಯನ್ನು ಪಡೆದುಕೊಂಡು ಓಷಿವಾರಾ ಚಿತಾಗಾರದಲ್ಲಿ ಕಪೂರ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಿದೆ. ವರ್ಸೋವಾ ನಿವಾಸಿಯಾಗಿರುವ ಗಿದ್ವಾನಿ ಕಳೆದ ಮೂರು ದಶಕಗಳಿಂದಲೂ ಅನಾಥ ಶವಗಳ ಅಂತ್ಯಸಂಸ್ಕಾರಗಳನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News