ರಿಪಬ್ಲಿಕ್ ಟಿವಿ ವರದಿಗಾರನಿಂದ ಮಹಿಳೆಯ ಅಪಹರಣ, ಲೈಂಗಿಕ ಕಿರುಕುಳ: ಆರೋಪ

Update: 2018-12-07 17:36 GMT

ಹೊಸದಿಲ್ಲಿ,ಡಿ.7: ರಿಪಬ್ಲಿಕ್ ಟಿವಿಯ ಅಸ್ಸಾಂ ಪ್ರತಿನಿಧಿ ಅನಿರುದ್ಧ್ ಬಕತ್ ತನ್ನನ್ನು ಅಪಹರಣಗೈದು ದೈಹಿಕ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗುವಾಹಟಿ ಮೂಲದ ಪತ್ರಕರ್ತೆ ಆರೋಪಿಸಿದ್ದಾರೆ. ಬಕತ್ ವಿರುದ್ಧ ಗುವಾಹಟಿಯ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ಜೋಯ್‌ನಗರದಲ್ಲಿರುವ ಮನೆಯಿಂದ ಆಕೆಯ ಸಹೋದ್ಯೋಗಿಗಳು ರಕ್ಷಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 341, 392, 323,506 ಮತ್ತು 34ರ ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಬಂಧನದ ಎರಡು ದಿನಗಳ ನಂತರ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ಆಂಗ್ಲ ಸುದ್ದಿ ಜಾಲತಾಣದ ಜೊತೆ ಮಾತನಾಡಿರುವ ಸಂತ್ರಸ್ತೆ, ಪೊಲೀಸರು ಹೊರಗಿನ ಒತ್ತಡಕ್ಕೆ ಒಳಗಾಗಿದ್ದಾರೆ. ಹಾಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸದೆಯೇ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ದೂರು ದಾಖಲಿಸುವಾಗಲೂ ಸರಿಯಾಗಿ ಸಹಕರಿಸಿಲ್ಲ ಎಂದು ಆರೋಪಿಸಿರುವ ಸಂತ್ರಸ್ತೆ, “ಅಂದು ನಾನು ದೂರು ಬರೆಯುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಪೊಲೀಸರು ನನ್ನ ಸಹೋದ್ಯೋಗಿಯಲ್ಲಿ ಬರೆಯುವಂತೆ ಸೂಚಿಸಿದ್ದರು.ಅವರಿಗೂ ದೂರು ಬರೆಯಲು ತಿಳಿದಿರಲಿಲ್ಲ. ಆದರೆ ಪೊಲೀಸರು ಯಾವುದೇ ಸಹಾಯ ಮಾಡದೆ ಉದ್ಧಟತನ ಪ್ರದರ್ಶಿಸಿದರು. ಜೊತೆಗೆ ನನಗೆ ತಪ್ಪಾದ ಕೇಸ್ ನಂಬರ್ ನೀಡಿದರು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News