×
Ad

ದೇವಸ್ಥಾನ ವಶಕ್ಕೆ ಭೀಮ ಸೇನೆಯಿಂದ ಕರೆ: ಹನುಮಾನ್ ಧಾಮಕ್ಕೆ ಬಿಗಿ ಭದ್ರತೆ

Update: 2018-12-08 21:04 IST

ಮುಝಫ್ಫರ್‌ನಗರ, ಡಿ.8: ದೇಶದಲ್ಲಿರುವ ಹನುಮಾನ್ ದೇವಾಲಯಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಭೀಮ ಸೇನೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಝಫ್ಫರ್‌ನಗರದಲ್ಲಿರುವ ಹನುಮಾನ್ ಧಾಮಕ್ಕೆ ಶನಿವಾರ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.

ದೇಶದಲ್ಲಿರುವ ಎಲ್ಲ ಹನುಮಾನ್ ಮಂದಿರಗಳನ್ನು ದಲಿತ ಸಮುದಾಯ ವಶಕ್ಕೆ ಪಡೆದುಕೊಳ್ಳಬೇಕು ಮತ್ತು ಅವುಗಳಿಗೆ ದಲಿತ ಅರ್ಚಕರನ್ನು ನೇಮಿಸಬೇಕು ಎಂದು ಭೀಮ ಸೇನೆ ಮುಖ್ಯಸ್ಥ ಚಂದ್ರಶೇಖರ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹನುಮಾನ್ ದಲಿತನಾಗಿದ್ದ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್ ಈ ಕರೆ ನೀಡಿದ್ದರು.

ಹನುಮಾನ್ ಧಾಮದ ಸುತ್ತ ಪ್ರಾಂತೀಯ ಶಸಸ್ತ್ರ ಪಡೆ (ಪಿಎಸಿ) ಮತ್ತು ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ. ಸದ್ಯ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ತಾನದ ಅಲ್ವಾರ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಆದಿತ್ಯನಾಥ್, ಹನುಮಾನ್ ಅರಣ್ಯವಾಸಿಯಾಗಿದ್ದ, ವಂಚಿತ ಮತ್ತು ದಲಿತನಾಗಿದ್ದ. ಭಾರತದ ಉತ್ತರದಿಂದ ದಕ್ಷಿಣ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಎಲ್ಲ ಮೂಲೆಗಳ ಸಮುದಾಯಗಳನ್ನು ಒಟ್ಟುಗೂಡಿಸುವಲ್ಲಿ ಬಜರಂಗ ಬಲಿ ಬಹಳ ಶ್ರಮಪಟ್ಟಿದ್ದ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News