ಪಾರಿಕ್ಕರ್ ಆರೋಗ್ಯದ ಮಾಹಿತಿ ನೀಡುವಂತೆ ಸಲ್ಲಿಸಿದ ಅರ್ಜಿಗೆ ಗೋವಾ ಸರಕಾರದ ವಿರೋಧ

Update: 2018-12-08 16:19 GMT

ಪಣಜಿ, ಡಿ.8: ಖಾಸಗಿತನ ಮೂಲಭೂತ ಹಕ್ಕು ಎಂಬುದನ್ನು ಉಲ್ಲೇಖಿಸಿರುವ ಗೋವಾ ಸರಕಾರ, ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ಆರೋಗ್ಯಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಸರಕಾರಕ್ಕೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸಿದೆ. ಪರಿಕ್ಕರ್ ನಿರಂತರವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವುದು ಆಡಳಿತಾತ್ಮಕ ಕುಸಿತಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟ್ರಜಾನೊ ಡಿ’ಮೆಲ್ಲೋ ಒಂದು ತಿಂಗಳು ಹಿಂದೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಮರ್ಥನೀಯತೆಯನ್ನು ಪ್ರಶ್ನಿಸಿ ಗೋವಾದ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಶರ್ಮ ಹೈಕೋರ್ಟ್‌ನ ಗೋವಾ ಪೀಠಕ್ಕೆ ಅಫಿದಾವಿತ್ ಸಲ್ಲಿಸಿದ್ದಾರೆ. ತನ್ನ ಆರೋಗ್ಯ ಸಮಸ್ಯೆಯನ್ನು ಬಹಿರಂಗಗೊಳಿಸದಿರುವ ಹಕ್ಕು ಎಲ್ಲಾ ವ್ಯಕ್ತಿಗಳಿಗೂ ಇದೆ. ಅಂತೆಯೇ ಇದು ಮುಖ್ಯಮಂತ್ರಿಗಳಿಗೂ ಅನ್ವಯಿಸುತ್ತದೆ. ಆರೋಗ್ಯದ ಸಮಸ್ಯೆಯನ್ನು ಬಹಿರಂಗಗೊಳಿಸುವುದು ಸಂವಿಧಾನದ 21ನೇ ಪರಿಚ್ಛೇದದಡಿ ಬರುವಯ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ.

    ಆಡಳಿತಾತ್ಮಕ ಕುಸಿತ ಎಂಬ ಹೇಳಿಕೆ ಆಧಾರರಹಿತ, ಅಸ್ಪಷ್ಟವಾಗಿದೆ. ಗೋವಾದಲ್ಲಿ ಆಡಳಿತ ಯಂತ್ರ ಕುಸಿದಿರುವ ಬಗ್ಗೆ ಅರ್ಜಿದಾರರು ಪೂರಕ ಪುರಾವೆಗಳನ್ನು ಒದಗಿಸಿಲ್ಲ. ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಿದ್ದಾರೆ. ಶಾಸಕರನ್ನು ಭೇಟಿಯಾಗುತ್ತಿದ್ದಾರೆ ಮತ್ತು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅರ್ಜಿದಾರರು ತನಗೆ ಬೇಕಾದ ಕೆಲವು ಸುದ್ದಿಗಳನ್ನು ಮಾತ್ರ ಆಧಾರವಾಗಿರಿಸಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಅರ್ಜಿದಾರರು ನ್ಯಾ ಯಾಲಯದಿಂದ ಕೆಲವು ಪ್ರಮುಖ ಸುದ್ದಿಗಳನ್ನು ಅಡಗಿಸಿಡುವ ಅಪರಾಧವನ್ನು ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಅರ್ಜಿ ಮೇಲ್ನೋಟಕ್ಕೇ ವಿಚಾರಣೆಗೆ ಅನರ್ಹವಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ಅಫಿಧಾವಿತ್‌ನಲ್ಲಿ ತಿಳಿಸಲಾಗಿದೆ. ಸುಪ್ರೀಂಕೋರ್ಟ್ ಡಿಸೆಂಬರ್ 10ರಂದು ಅರ್ಜಿಯ ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News