ಭೈರವ ಗೀತ: ಭೈರವ ಗೀತದೊಳಗೆ ರೌರವ ಜೀತ

Update: 2018-12-08 18:33 GMT

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೃಪಾಪೋಷಿತ ಚಿತ್ರ ಎಂಬ ಕಾರಣಕ್ಕೆ ಚಿತ್ರೀಕರಣದ ಆರಂಭದಿಂದಲೇ ಸದ್ದು ಮಾಡಿದಂಥ ಸಿನೆಮಾ ಭೈರವಗೀತ. (ನಿರ್ದೇಶಕ ಸಿದ್ಧಾರ್ಥ ಆರ್‌ಜಿವಿ ಶಿಷ್ಯ) ಚಿತ್ರ ಬಿಡುಗಡೆಯ ಬಳಿಕ ಕೂಡ ವರ್ಮಾ ಮತ್ತು ತೆಲುಗು ಚಿತ್ರಗಳ ಛಾಯೆಯಿಂದ ಆಚೆಗಿನ ಮಾಯೆ ಮಾಡಿಲ್ಲ ಎನ್ನುವುದು ಸತ್ಯ.

ಕತೆಯ ವಿಚಾರಕ್ಕೆ ಬಂದರೆ ತೊಂಬತ್ತರ ದಶಕದ ಸೂಪರ್ ಹಿಟ್ ಸಿನೆಮಾ ‘ರಾಮಾಚಾರಿ’ ನೆನಪಾಗುತ್ತದೆ. ಇಲ್ಲಿ ನಾಯಕ ಭೈರವ ಪೆದ್ದನಲ್ಲ, ಆದರೆ ಜೀತದಾಳಾಗಿ ನಡೆಸಿಕೊಳ್ಳಲ್ಪಟ್ಟವನು. ಅದೇ ಕಾರಣಕ್ಕೆ ಇದು ಜೀತದಾಳುಗಳು ಜಮೀನ್ದಾರರ ವಿರುದ್ಧ ನಡೆಸುವ ರಕ್ತಕ್ರಾಂತಿ ಎಂಬಂತೆ ತೋರಿಸಲಾಗಿದೆ. ಆದರೆ ಜೀತ ಪದ್ಧತಿಯ ಆಳವನ್ನಾಗಲೀ ಜೋಡಿಗಳ ಪ್ರೀತಿಯನ್ನಾಗಲೀ ಆಳವಾಗಿ ತೋರಿಸಿಲ್ಲ. ಇಲ್ಲಿ ನಾಯಕಿ ಕೂಡ ‘ಕಾಡು ಸುತ್ತುವಾ ಆಸೆ ರಾಣಿಗೇಕಮ್ಮ’ ಎಂದರೂ ಕೇಳದೆ ಬೆಂಬಲಿಗರ ಜೊತೆ ಸುತ್ತಾಡುತ್ತಾಳೆ. ಧನಂಜಯ ಕೂಡ ‘ಆಕಾಶದಾಗೆ ಯಾರೋ ಮಾಯಗಾರನು’ ಎಂದು ಹಾಡುತ್ತಾರೆ. ಆದರೆ ಹಾಡು ಮುಗಿಯುವ ಮೊದಲೇ ಖಳರ ಜೊತೆಗಿನ ಹೊಡೆದಾಟ ಶುರುವಾಗುತ್ತದೆ. ತಾಯಿಯನ್ನು ಕೂಡ ಕಂಬಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ನೀಡುವಲ್ಲಿಗೆ ರಾಮಾಚಾರಿ ಪೂರ್ಣವಾಗುತ್ತದೆ. ಆನಂತರದ್ದು ಜೀತದ ವಿರುದ್ಧದ ಹೋರಾಟದ ಕತೆ!

ವರ್ಮಾ ಎಂದಿನಂತೆ ತಮ್ಮ ಈ ಚಿತ್ರಕ್ಕೂ ಒಂದು ಸತ್ಯ ಘಟನೆಯ ಹಿನ್ನೆಲೆ ಇರುವುದಾಗಿ ಆರಂಭದಲ್ಲೇ ಹೇಳುತ್ತಾರೆ. ಆದರೆ ಘಟನೆಗಿಂತ ರಕ್ತಸಿಕ್ತ ದೃಶ್ಯಗಳೇ ಪ್ರೇಕ್ಷಕರಲ್ಲಿ ಉಳಿದುಬಿಡುತ್ತದೆ.

ಅದರ ನಡುವೆ ನಾಯಕ ಧನಂಜಯ ಮತ್ತು ನಾಯಕಿ ಇರಾ ಮೊರ್ ಸೇರಿಕೊಂಡು ಮೂರು ಮೂರು ಬಾರಿ ತುಟಿಗೆ ತುಟಿ ಬೆರೆಸಿದ್ದೇ ಕ್ರಾಂತಿ. ಉಳಿದಂತೆ ಎಲ್ಲವೂ ರಕ್ತಮಯ. ಕತ್ತರಿಸಲ್ಪಡುವ ಕೈ ಕಾಲು, ಆಳುಕಾಳುಗಳಿಗೆ ಲೆಕ್ಕವಿಲ್ಲ. ಲೆಕ್ಕವಿಟ್ಟರೆ ಕುರುಕ್ಷೇತ್ರವನ್ನು ಮೀರಿಸಬಹುದೇನೋ! ಒಂದು ಹಾಡು ಮತ್ತು ಒಟ್ಟು ಚಿತ್ರದ ಛಾಯಾಗ್ರಹಣ ಗಮನ ಸೆಳೆಯುತ್ತದೆ.

ಚಿತ್ರದ ಮೂಲಕ ಧನಂಜಯ ಗೆ ಮಾಸ್ ಲುಕ್ ಸಿಕ್ಕಿರುವುದಂತೂ ನಿಜ. ಆದರೆ ವಿಶೇಷ ನಟನೆಗೆ ಯಾವ ಅವಕಾಶವೂ ಇಲ್ಲ. ಇರಾ ಮೊರ್ ಶ್ರೀಯಾ ಶರಣ್‌ರನ್ನು ಹೋಲುತ್ತಾರೆ. ಖಳನಟರಾಗಿ ಕನ್ನಡದ ರಂಗಭೂಮಿ ಕಲಾವಿದ ಬಾಲರಾಜ್ ಉತ್ತಮ ಅವಕಾಶ ಪಡೆದುಕೊಂಡಿದ್ದಾರೆ. ಹುಡುಗಿಯ ತಂದೆ ಶಂಕರಪ್ಪನ ಪಾತ್ರದಲ್ಲಿ ಅವರು ಜಮೀನ್ದಾರಿಕೆಯ ದರ್ಪಕ್ಕೆ ಕನ್ನಡಿ ಹಿಡಿದಿದ್ದಾರೆ. ನಾಯಕಿಗೆ ನಿಶ್ಚಯಿಸಲ್ಪಡುವ ಹುಡುಗ ಮತ್ತೋರ್ವ ಖಳನಾಗಿ ಆರಡಿ ಎತ್ತರದ ನಂಜಮರಿ ಪಾತ್ರದಲ್ಲಿ ವಿಜಯ್ ಗಮನ ಸೆಳೆಯುತ್ತಾರೆ. ಈ ಸಂದರ್ಭಗಳು ತೆಲುಗಿನ ಸುಪರ್ ಹಿಟ್ ಚಿತ್ರ ‘ಜಯಂ’ ಸನ್ನಿವೇಶಗಳನ್ನು ನೆನಪಿಸಿದರೆ ಅಚ್ಚರಿ ಇಲ್ಲ.

ತಾರಾಗಣ: ಧನಂಜಯ, ಇರಾ ಮೊರ್

ನಿರ್ದೇಶಕ: ಸಿದ್ಧಾರ್ಥ ನಿರ್ಮಾಪಕ: ಭಾಸ್ಕರ್ ರಾಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News