ನೀರಿನ ಸಮಸ್ಯೆ ನಿವಾರಣೆಗೆ ರೈಲ್ವೇ ಇಲಾಖೆಯ ನೂತನ ಯೋಜನೆ

Update: 2018-12-09 14:34 GMT

ಹೊಸದಿಲ್ಲಿ, ಡಿ.9: ರೈಲಿನಲ್ಲಿ ಪ್ರಯಾಣಿಸುವಾಗ ನೀರಿನ ಕೊರತೆಯ ಬಗ್ಗೆ ಪ್ರಯಾಣಿಕರಿಂದ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ನಿವಾರಣೆಯ ನಿಟ್ಟಿನಲ್ಲಿ ರೈಲ್ವೇ ಇಲಾಖೆ ನೂತನ ಯೋಜನೆಯನ್ನು ರೂಪಿಸಿದೆ.

ಬಹು ದೂರ ಸಂಚರಿಸುವ ರೈಲಿನ ಬೋಗಿಗಳಿಗೆ ಪ್ರತೀ 300ರಿಂದ 400 ಕಿ.ಮೀ. ಅಂತರದಲ್ಲಿ ನೀರು ತುಂಬಿಸಲಾಗುವುದು. ನಿಲ್ದಾಣದಲ್ಲಿ ಬೋಗಿಗಳಿಗೆ ನೀರು ತುಂಬಿಸಲು ಈಗ 20 ನಿಮಿಷ ತಗುಲುತ್ತಿದ್ದು ಇನ್ನು ಮುಂದೆ ಕೇವಲ ಐದು ನಿಮಿಷ ಸಾಕಾಗುತ್ತದೆ . ಈ ಯೋಜನೆಗೆ ರೈಲ್ವೇ ಮಂಡಳಿ ಇತ್ತೀಚೆಗೆ 300 ಕೋಟಿ ರೂ. ಮಂಜೂರು ಮಾಡಿದೆ. ಒಂದು ಬೋಗಿಯಲ್ಲಿ 1,800 ಲೀಟರ್ ನೀರು ತುಂಬಿಸಲಾಗುತ್ತದೆ. ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆ ಇರುವ 142 ನಿಲ್ದಾಣಗಳಲ್ಲಿ ಮುಂದಿನ ವರ್ಷದ ಮಾರ್ಚ್ ವೇಳೆಗೆ ಈ ಯೋಜನೆ ಜಾರಿಗೊಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.

ಹೊಸ ಯೋಜನೆಯಲ್ಲಿ ಒಂದೇ ಕಾಲಕ್ಕೆ ಹಲವು ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆಯೂ ಇದೆ. ಈ ಹಿಂದೆ 4 ಇಂಚಿನ ಪೈಪನ್ನು ಬಳಸಿ ರೈಲುಗಳಿಗೆ ನೀರು ತುಂಬಿಸಲಾಗುತ್ತಿತ್ತು. ಈಗ ಅಧಿಕ ಶಕ್ತಿಯ ಮೋಟಾರು ಬಳಸಿ, 6 ಇಂಚು ಪೈಪುಗಳ ಮೂಲಕ , ಎಸ್‌ಸಿಎಡಿಎ (ಸುಪರ್ವೈಸರಿ ಕಂಟ್ರೋಲ್ ಆ್ಯಂಡ್ ಡೇಟಾ ಎಕ್ವಿಷನ್) ಎಂದು ಕರೆಯಲಾಗುವ ಕಂಪ್ಯೂಟರೀಕೃತ ವ್ಯವಸ್ಥೆಯ ಮೂಲಕ ನೀರು ತುಂಬಿಸಲಾಗುತ್ತದೆ ಎಂದು ರೈಲ್ವೇ ಮಂಡಳಿಯ ಸದಸ್ಯ ರಾಜೇಶ್ ಅಗರ್‌ವಾಲ್ ತಿಳಿಸಿದ್ದಾರೆ. ನೀರು ತುಂಬಿಸುವ ವೇಗವನ್ನು ಹೆಚ್ಚಿಸಲು 40 ಅಶ್ವಶಕ್ತಿಯ ಪಂಪ್‌ಗಳನ್ನು ಸ್ಥಾಪಿಸಲಾಗುವುದು ಎಂದು ಅಗರ್‌ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News