ಇಸ್ರೇಲ್ ಸೈನಿಕರಿಂದ ಗುಂಡಿನ ದಾಳಿ: ಫೆಲೆಸ್ತೀನಿಯರ ಗಾಯ ಉಲ್ಬಣ

Update: 2018-12-09 17:05 GMT

ಗಾಝಾ ಸಿಟಿ, ಡಿ. 9: ಗಾಝಾ ಪಟ್ಟಿಯಲ್ಲಿರುವ ಇಸ್ರೇಲ್ ಗಡಿಯಲ್ಲಿ ಎಂಟು ತಿಂಗಳುಗಳಿಂದ ನಿರಂತರವಾಗಿ ಪ್ರತಿ ವಾರ ಸಾವಿರಾರು ಫೆಲೆಸ್ತೀನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಇಸ್ರೇಲ್ ಸೈನಿಕರ ಗುಂಡೇಟುಗಳಿಗೆ ಹಲವಾರು ಮಂದಿ ಬಲಿಯಾಗಿದ್ದಾರೆ ಹಾಗೂ ಅದಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಫೆಲೆಸ್ತೀನ್‌ನಲ್ಲಿ ಅಗಾಧ ಸಂಖ್ಯೆಯ ಜನರಿಗೆ ಗುಂಡಿನ ಗಾಯಗಳಿಗಾಗಿ ಚಿಕಿತ್ಸೆಯ ಅಗತ್ಯವಿದೆ. ಆದರೆ, ಅವರನ್ನು ಆಧರಿಸುವಷ್ಟು ಫೆಲೆಸ್ತೀನ್‌ನ ಆರೋಗ್ಯ ರಕ್ಷಣೆ ವ್ಯವಸ್ಥೆ ಸುಸಜ್ಜಿತವಾಗಿಲ್ಲ ಎಂದು ವೈದ್ಯರ ಅಂತಾರಾಷ್ಟ್ರೀಯ ಮಾನವೀಯ ಸಂಘಟನೆ ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ.

ಮಾರ್ಚ್‌ನಿಂದ ಈವರೆಗೆ ತಾನು 3,000ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಿದ್ದು, ಅವರ ಪೈಕಿ ಹೆಚ್ಚಿನವರಿಗೆ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಅದು ತಿಳಿಸಿದೆ. ಆ ಗಾಯಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಕಾಲು ಭಾಗ ಜನ ಸೋಂಕಿಗೊಳಗಾಗಿದ್ದಾರೆ ಹಾಗೂ ಅದು ಹಾಗೆಯೇ ಮುಂದುವರಿದರೆ ಅವರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಬಹುದು ಹಾಗೂ ಅವರ ಕಾಲುಗಳನ್ನು ತೆಗೆಯಬೇಕಾಗಬಹುದು ಎಂದಿದೆ.

ಇಸ್ರೇಲ್‌ನ ಮುತ್ತಿಗೆಗೆ ಒಳಗಾಗಿರುವ ಗಾಝಾ ನಗರದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಹಲವರು ತಮ್ಮ ಕೈಕಾಲುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಮನೆ ಮತ್ತು ಆಸ್ತಿಗಳನ್ನು ಇಸ್ರೇಲ್‌ನಲ್ಲಿ ಬಿಟ್ಟು ಬಂದಿರುವ ಫೆಲೆಸ್ತೀನಿಯರಿಗೆ ತಮ್ಮ ಪೂರ್ವಜರ ಸ್ಥಳಗಳಿಗೆ ವಾಪಸಾಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಫೆಲೆಸ್ತೀನಿಯರು ಮಾರ್ಚ್ 30ರಿಂದ ವಾರಕ್ಕೊಮ್ಮೆ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News