ಭಾರತದ ಪ್ರಥಮ ಕೃತಕ ಹೃದಯ ಕವಾಟ ತಂತ್ರಜ್ಞಾನಕ್ಕೆ ಚಾಲನೆ

Update: 2018-12-09 17:20 GMT

ಹೊಸದಿಲ್ಲಿ,ಡಿ.9: ಭಾರತದ ಮೊಟ್ಟಮೊದಲ ಕೃತಕ ಹೃದಯ ಕವಾಟ ತಂತ್ರಜ್ಞಾನಕ್ಕೆ ಜಾಗತಿಕ ವೈದ್ಯಕೀಯ ಉಪಕರಣಗಳ ತಯಾರಕರಾದ ಮೆರಿಲ್ ಲೈಫ್ ಸೈನ್ಸೆಸ್ ಶನಿವಾರ ಚಾಲನೆ ನೀಡಿದೆ.

ಅತ್ಯಂತ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವ ಅಥವಾ ತೆರೆದ ಹೃದಯ ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಒಪ್ಪದ ರೋಗಿಗಳಿಗೆ ಈ ಆವಿಷ್ಕಾರವು ವರದಾನವಾಗಿದೆ ಎಂದು ದೇಶೀಯವಾಗಿ ರೂಪಿಸಲ್ಪಟ್ಟಿರುವ ಕೃತಕ ಹೃದಯ ಕವಾಟದ ತಯಾರಕರು ತಿಳಿಸಿದ್ದಾರೆ. ಮೈವಾಲ್ ಎಂಬ ಬ್ರಾಂಡ್ ಹೆಸರಿನಿಂದ ಮಾರಲ್ಪಡಲಿರುವ ಈ ಕೃತಕ ಹೃದಯ ಕವಾಟ (ಟಿಎವಿಆರ್)ಗಳನ್ನು ವೈದ್ಯರು ರೋಗಿಯ ತೊಡೆಯಲ್ಲಿರುವ ನರಗಳ ಮೂಲಕ ರೋಗಗ್ರಸ್ತ ಕವಾಟದ ಜಾಗದಲ್ಲಿ ಅಳವಡಿಸಬಹುದಾಗಿದೆ. ಈ ಶಸ್ತ್ರಚಿಕಿತ್ಸೆಯು ಕನಿಷ್ಟ ಅಪಾಯವನ್ನು ಹೊಂದಿದೆ ಎಂದು ತಯಾರಿಕಾ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಈ ಚಿಕಿತ್ಸೆಯು ಸಾಂಪ್ರದಾಯಿಕ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಪರ್ಯಾಯವಾಗಿ ಮಾಡಲ್ಪಡುವ ಶಸ್ತ್ರಚಿಕ್ತಿತ್ಸೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಮೆರಿಕ ಮೂಲದ ವೈದ್ಯಕೀಯ ಉಪಕರಣ ತಯಾರಕರಾದ ಮೆಡ್‌ಟ್ರೋನಿಕ್ಸ್ ಮತ್ತು ಎಡ್ವರ್ಡ್ ಲೈಫ್ ಸೈನ್ಸೆಸ್ ಸದ್ಯ ಟಿಎವಿಆರ್ ತಂತ್ರಜ್ಞಾನದಲ್ಲಿ ಪಾರಮ್ಯ ಮೆರೆದಿದೆ. ಮೆರಿಲ್ ಲೈಫ್ ಕಂಪೆನಿಯು ಇದೇ ಮೊದಲ ಬಾರಿ ಭಾರತದಲ್ಲಿ ಈ ತಂತ್ರಜ್ಞಾನವನ್ನು ವಾಣಿಜ್ಯವಾಗಿ ಲಭ್ಯವಾಗುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News