ರೋಗಿಯ ಬಾಯಿಯಿಂದ ಹೊರಬಂದ ರಕ್ತದ ಆಕೃತಿ ಕಂಡು ಅವಾಕ್ಕಾದ ವೈದ್ಯರು !

Update: 2018-12-09 17:40 GMT

ಸಾನ್‌ಫ್ರಾನ್ಸಿಸ್ಕೊ (ಅಮೆರಿಕ), ಡಿ. 9: ರೋಗಿಯೊಬ್ಬರು ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗಾಗಿ ಸಾನ್‌ಫ್ರಾನ್ಸಿಸ್ಕೊದಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ವೈದ್ಯರ ಬಳಿಗೆ ಹೋದರು.

ವೈದ್ಯರು ಅವರ ಅಂಗಾಂಗಳಿಗೆ ರಕ್ತದ ಪ್ರವಾಹವನ್ನು ಹರಿಸಲು ಕಾಲಿನ ರಕ್ತನಾಳದ ಮೂಲಕ ಹೃದಯದ ಪಂಪೊಂದನ್ನು ತುರುಕಿಸಿದರು. ಆದರೆ, ಇದಕ್ಕೊಂದು ಅಡ್ಡ ಪರಿಣಾಮವಿತ್ತು. ಇದರ ಬಳಕೆಯಿಂದ ರಕ್ತದ ಗಡ್ಡೆಗಳು ನಿರ್ಮಾಣವಾಗುವ ಸಾಧ್ಯತೆಯಿತ್ತು. ಹಾಗಾಗಿ, ರಕ್ತವನ್ನು ತೆಳು ಮಾಡಲು ವೈದ್ಯರು ರೋಗಿಗೆ ಔಷಧ ನೀಡಿದರು.

ಆದರೆ, ರಕ್ತ ಅವರ ಶ್ವಾಸಕೋಶದೊಳಕ್ಕೆ ಸೋರಿಕೆಯಾಯಿತು. ಗಡ್ಡೆಗಳು ನಿರ್ಮಾಣವಾದವು. ಮಂದಿನ ದಿನಗಳಲ್ಲಿ ರೋಗಿಯು ಅವುಗಳನ್ನು ಕೆಮ್ಮಿ ಹೊರಹಾಕಿದರು.

ಒಂದು ದಿನ ರೋಗಿ ಗಟ್ಟಿಯಾಗಿ ಕೆಮ್ಮಿದರು ಹಾಗೂ ಸುಮಾರು 6 ಇಂಚು ವಿಸ್ತಾರದ ರಕ್ತ ಬಣ್ಣದ ಆಕೃತಿಯೊಂದನ್ನು ಕೆಮ್ಮುತ್ತಾ ಹೊರಹಾಕಿದರು.

ಅದನ್ನು ವೈದ್ಯರು ಜಾಗರೂಕತೆಯಿಂದ ಸರಿಯಾದ ಕ್ರಮದಲ್ಲಿ ಜೋಡಿಸಿದರು. ಅವರಿಗೆ ಆಶ್ಚರ್ಯ ಕಾದಿತ್ತು. ರೋಗಿಯ ರಕ್ತವು ಬಲ ಶ್ವಾಸಕೋಶದ ದಾರಿಯಲ್ಲಿ ಜಮೆಯಾಗಿತ್ತು ಹಾಗೂ ಗಟ್ಟಿಯಾಗಿತ್ತು.

ರೋಗಿಯು ಜೋರಾಗಿ ಕೆಮ್ಮಿದಾಗ ಅದು ಇಡಿಯಾಗಿ ಹೊರಬಂದಿತ್ತು.

‘‘ಇಂಥ ಯಾವುದನ್ನೂ ನಮ್ಮ ತಂಡದ ಯಾವುದೇ ಸದಸ್ಯರು ಈವರೆಗೆ ನೋಡಿಲ್ಲ’’ ಎಂದು ವಿಶ್ವವಿದ್ಯಾಲಯ ಆಸ್ಪತ್ರೆಯ ಹೃದಯ ಸರ್ಜರಿ ತಜ್ಞೆ ಗ್ಯಾವಿಟ್ ವುಡರ್ಡ್ ಹೇಳಿದರು.

ಈ ಘಟನೆಯ ಬಳಿಕ 36 ವರ್ಷದ ರೋಗಿಯನ್ನು ಎರಡು ದಿನಗಳ ಕಾಲ ಇನ್‌ಕ್ಯುಬೇಟರ್‌ನಲ್ಲಿ ಇರಿಸಲಾಗಿತ್ತು.

ಆದರೆ, ರೋಗಿಯು ಒಂದು ವಾರದ ಬಳಿಕ ಮೃತಪಟ್ಟಿದ್ದಾರೆ.

ಆದಾಗ್ಯೂ, ರೋಗಿಯ ಸಾವಿಗೂ ಮೇಲಿನ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು. ರೋಗಿಯು ಹಲವು ಕಾಯಿಲೆಗಳಿಂದ ಬಳಲುತ್ತಿದ್ದನು. ಆತ ಕೆಮ್ಮಿದ ರಕ್ತದ ಗಡ್ಡೆಗಳು ಔಷಧಿಯ ಅಡ್ಡ ಪರಿಣಾಮವಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News