ನಾಳೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ

Update: 2018-12-10 17:53 GMT

ಹೊಸದಿಲ್ಲಿ, ಡಿ.10: 2019ರ ಲೋಕಸಭಾ ಚುನಾವಣೆಯ ಫಲಿತಾಂಶದ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದೆ. ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಮಿಝೋರಾಂಗಳ ವಿಧಾನಸಭಾ ಚುನಾವಣೆ ಮತ ಎಣಿಕೆಗೆ ಎಲ್ಲ ಸಿದ್ಧತೆ ಗಳು ಪೂರ್ಣಗೊಂಡಿವೆ. ಬೆಳಗ್ಗೆ 8:00ರಿಂದ ಮತ ಎಣಿಕೆ ಆರಂಭಗೊಳ್ಳಲಿದ್ದು, ಬಹುತೇಕ ಎಲ್ಲಾ ಕ್ಷೇತ್ರಗಳ ಫಲಿತಾಂಶಗಳು ನಾಳೆ ಸಂಜೆಯೊಳಗೆ ಹೊರಬೀಳುವ ನಿರೀಕ್ಷೆಯಿದೆ.

ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿದೆ. ಬಿಎಸ್ಪಿ ಅಭ್ಯರ್ಥಿಯೊಬ್ಬರ ನಿಧನದ ಹಿನ್ನೆಲೆಯಲ್ಲಿ ರಾಮಘರ್ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್, ಪಿಸಿಸಿ ವರಿಷ್ಠ ಸಚಿನ್ ಪೈಲಟ್ ಅವರ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

 ಮಧ್ಯಪ್ರದೇಶದಲ್ಲಿ ಇಡೀ ಮತ ಎಣಿಕೆ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ನಡೆಯಲಿದೆ. ಈ ರಾಜ್ಯದಲ್ಲೂ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಶಿವರಾಜ್‌ಸಿಂಗ್ ಚೌಹಾಣ್ ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಸುದೀರ್ಘ ಅವಧಿಯ ಬಳಿಕ ಅಧಿಕಾರದ ಗದ್ದುಗೆಯೇರಲು ಶತಾಯ ಗತಾಯ ಯತ್ನಿಸಿದೆ. ಬಿಜೆಪಿ ಆಡಳಿತದ ಇನ್ನೊಂದು ರಾಜ್ಯವಾದ ಛತ್ತೀಸ್‌ಗಡದಲ್ಲಿಯೂ ಕಾಂಗ್ರೆಸ್ ಪ್ರಬಲ ಸ್ಪರ್ಧೆಯೊಡ್ಡಿದೆ. ಛತ್ತೀಸ್‌ಗಡದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,269 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್‌ನ ಭದ್ರಕೋಟೆಯೆನಿಸಿರುವ ಮಿಝೋರಾಂನ ಎಲ್ಲಾ 40 ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿದ್ದು. ಇಲ್ಲಿ ಕಾಂಗ್ರೆಸ್ ಹಾಗೂ ಪ್ರತಿಪಕ್ಷವಾದ ಮಿಜೋ ನ್ಯಾಶನಲ್ ಫ್ರಂಟ್ ನಡುವೆ ತುರುಸಿನ ಸ್ಪರ್ಧೆಯೇರ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News