ಊರ್ಜಿತ್ ಪಟೇಲ್ ರಾಜೀನಾಮೆ: ಮನಮೋಹನ್ ಸಿಂಗ್ ಹೇಳಿದ್ದೇನು ?

Update: 2018-12-11 03:40 GMT

ಹೊಸದಿಲ್ಲಿ, ಡಿ. 11: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆ ದುರದೃಷ್ಟಕರ ಹಾಗೂ ದೇಶದ ಆರ್ಥಿಕತೆಗೆ ಬಲುದೊಡ್ಡ ಹೊಡೆತ ಎಂದು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಹೇಳಿದ್ದಾರೆ.

ಆರ್‌ಬಿಐ ಸ್ವಾಯತ್ತತೆ ಬಗ್ಗೆ ಸರ್ಕಾರದ ಜತೆ ತಿಕ್ಕಾಟದಲ್ಲಿದ್ದ ಪಟೇಲ್ ಸೋಮವಾರ ಮುಂಜಾನೆ ವೈಯಕ್ತಿಕ ಕಾರಣ ನೀಡಿ ದಿಢೀರ್ ರಾಜೀನಾಮೆ ನೀಡಿದ್ದರು. ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯಗಳ ಜತೆ ಚರ್ಚಿಸಲು ಆಯೋಜಿಸಿದ್ದ ಸಭೆ ನಡೆಯುವ ನಾಲ್ಕು ದಿನ ಮೊದಲು ಊರ್ಜಿತ್ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿತ್ತು.

ಮೋದಿ ಸರ್ಕಾರ ಭಾರತೀಯ ಆರ್ಥಿಕತೆಯ ಸಾಂಸ್ಥಿಕ ಅಡಿಗಲ್ಲನ್ನು ಧ್ವಂಸಗೊಳಿಸಲು ನಡೆಸುವ ಪ್ರಯತ್ನಕ್ಕೆ, ಊರ್ಜಿತ್ ಪಟೇಲ್ ಅವರ ರಾಜೀನಾಮೆ ಮುನ್ಸೂಚನೆಯಲ್ಲ ಎಂಬ ವಿಶ್ವಾಸವನ್ನು ಮಾಜಿ ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಅಲ್ಪಾವಧಿ ರಾಜಕೀಯ ಲಾಭಕ್ಕಾಗಿ ಸಂಸ್ಥೆಗಳನ್ನು ಹಾಳು ಮಾಡುವುದು ಮೂರ್ಖತನ ಎಂದು ಸಿಂಗ್ ಕೆಂಡ ಕಾರಿದ್ದಾರೆ.

"ಊರ್ಜಿತ್ ಅವರ ರಾಜೀನಾಮೆ ಸುದ್ದಿ ತೀರಾ ಬೇಸರ ತಂದಿದೆ. ಹಲವು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪಟೇಲ್ ಅವರ ದಿಢೀರ್ ರಾಜೀನಾಮೆ ದುರದೃಷ್ಟಕರ ಹಾಗೂ ದೇಶದ ಆರ್ಥಿಕತೆಗೆ ಬಲುದೊಡ್ಡ ಹೊಡೆತ" ಎಂದು ಸಿಂಗ್ ಹೇಳಿದ್ದಾರೆ.

"ಪಟೇಲ್ ಅವರು ದೇಶದ ಗಣ್ಯ ಹಾಗೂ ಗೌರವಾನ್ವಿತ ಅರ್ಥಶಾಸ್ತ್ರಜ್ಞ. ದೇಶದ ಹಣಕಾಸು ಸಂಸ್ಥೆಗಳ ಬಗ್ಗೆ ಮತ್ತು ಆರ್ಥಿಕ ನೀತಿ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು ಎಂದು ಬಣ್ಣಿಸಿದ್ದಾರೆ.

"ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಸುಧೀರ್ಘ ಅವಧಿ ಬೇಕು. ಆದರೆ ಕ್ಷಣಮಾತ್ರದಲ್ಲಿ ಅದನ್ನು ಹಾಳು ಮಾಡಬಹುದು. ಆರ್‌ಬಿಐನಂಥ ಸಂಸ್ಥೆಗಳು ಸ್ವಾತಂತ್ರ್ಯಾ ನಂತರ ದೇಶದ ಪ್ರಗತಿಯಲ್ಲಿ ಬಲುದೊಡ್ಡ ಪಾತ್ರ ವಹಿಸಿವೆ. ಅಲ್ಪಾವಧಿ ರಾಜಕೀಯ ಲಾಭಕ್ಕಾಗಿ ಇದನ್ನು ಹಾಳು ಮಾಡುವುದು ಮೂರ್ಖತನ" ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News