ಏನು ಮಾಡಬಾರದೆಂದು ನಾನು ಮೋದಿಯಿಂದ ಕಲಿತೆ: ರಾಹುಲ್ ಗಾಂಧಿ

Update: 2018-12-11 17:51 GMT

ಹೊಸದಿಲ್ಲಿ,ಡಿ.11: ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಅದ್ಭುತ ನಿರ್ವಹಣೆ ತೋರಿರುವ ಪಕ್ಷದ ಸಾಧನೆಯಿಂದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸತ್ಯ ಹೇಳಬೇಕೆಂದರೆ, ಏನು ಮಾಡಬಾರದು ಎಂಬುದನ್ನು ನಾನು ನರೇಂದ್ರ ಮೋದಿಯಿಂದ ಕಲಿತುಕೊಂಡೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿಯ ಕೈಗೆ ದೊಡ್ಡ ಅವಕಾಶವನ್ನು ನೀಡಲಾಗಿತ್ತು. ಆದರೆ ಅವರು ದೇಶದ ಹೃದಯ ಬಡಿತವನ್ನು ಕೇಳಲು ನಿರಾಕರಿಸಿದರು. ಅದರ ಮಧ್ಯೆ ಅಹಂ ಭಾವ ಬಂದಿತ್ತು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆಗಳಲ್ಲಿ ಮೋದಿ ಗೆಲುವು ಸಾಧಿಸುವುದು ಬಹಳ ಕಷ್ಟ ಎನ್ನುವುದು ಮೊದಲೇ ಸ್ಪಷ್ಟವಾಗಿತ್ತು. ಅವರು ಏನು ಮಾಡಬೇಕಿತ್ತೋ ಅದನ್ನು ಮಾಡುವಲ್ಲಿ ಅವರು ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಪ್ರಧಾನಿಯನ್ನು ವಿಶ್ಲೇಷಿಸಿದ್ದಾರೆ.

ಪ್ರಧಾನಿ ಮೋದಿಯನ್ನು ಆಯ್ಕೆ ಮಾಡಿದಾಗ ಅವರನ್ನು ಉದ್ಯೋಗ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳನ್ನು ನಿಭಾಯಿಸುತ್ತಾರೆ ಎಂಬ ನಿರೀಕ್ಷೆಯಿಂದ ಚುನಾಯಿಸಲಾಗಿತ್ತು. ಆದರೆ ಜನರಿಗೆ ಭ್ರಮನಿರಸನವಾಗಿದೆ. ಪ್ರಧಾನಿಯೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಅವರು ಭಾವಿಸಿದ್ದಾರೆ. ಈ ಸೋಲುಗಳು ಅದರ ಫಲವಾಗಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

“2014ರ ಚುನಾವಣೆ ನನ್ನ ಜೀವನದಲ್ಲಿ ನಡೆದ ಉತ್ತಮ ವಿಷಯಗಳಲ್ಲಿ ಒಂದಾಗಿದೆ ಎಂದು ನಾನು ಅಮ್ಮನಲ್ಲಿ ಹೇಳುತ್ತಲೇ ಇರುತ್ತೇನೆ. ಈ ಚುನಾವಣೆಯಿಂದ ನಾನು ಬಹಳಷ್ಟನ್ನು ಕಲಿತೆ. ವಿನಯತೆ ಎನ್ನುವುದು ಬಹಳ ಮುಖ್ಯ ಎನ್ನುವುದನ್ನು ನಾನು ಕಲಿತೆ” ಎಂದು ಗಾಂಧಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News