ವಿಧಾನ ಸಭೆ ಚುನಾವಣೆ: ಮತ ಗಳಿಕೆ ಪ್ರಮಾಣದಲ್ಲೂ ಹಿಂದೆ ಬಿದ್ದ ಬಿಜೆಪಿ

Update: 2018-12-11 18:09 GMT

ಹೊಸದಿಲ್ಲಿ,ಡಿ.11: ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಚತ್ತೀಸ್‌ಗಡದ ವಿಧಾನ ಸಭೆ ಚುನಾವಣೆಗಳ ಫಲಿತಾಂಶವು ಮಂಗಳವಾರ ಹೊರಬಿದ್ದಿದ್ದು, ಮೂರೂ ರಾಜ್ಯಗಳಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅನೇಕ ಸ್ಥಾನಗಳನ್ನು ಕಳೆದುಕೊಳ್ಳುವುದರ ಜೊತೆಗೆ ಮತ ಗಳಿಕೆಯಲ್ಲೂ ಗಮನಾರ್ಹ ನಷ್ಟವನ್ನು ಅನುಭವಿಸಿದೆ.

ತೆಲಂಗಾಣ ಮತ್ತು ಮಿಝೊರಾಂನಲ್ಲಿ ಸ್ಥಳೀಯ ಪಕ್ಷಗಳು ಜಯಭೇರಿ ಬಾರಿಸಿರುವುದು 2014ರ ನಂತರ ರಾಜ್ಯಗಳಲ್ಲಿ ಮತದಾರರು ಬಿಜೆಪಿ ಮತ್ತು ಕಾಂಗ್ರೆಸ್ ಬದಲಾಗಿ ಸ್ಥಳೀಯ ಪಕ್ಷಗಳಿಗೆ ಮಣೆ ಹಾಕುವ ವಿದ್ಯಾಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ವಿದ್ಯಾಮಾನವು 2019ರ ಲೋಕಸಭಾ ಚುನಾವಣೆಯಲ್ಲಿ ಮಹತ್ತರ ಪಾತ್ರವನ್ನು ನಿಭಾಯಿಸಲಿದ್ದು ಈಗಾಗಲೇ ವಿರೋಧ ಪಕ್ಷಗಳಿಂದ ಬಿಜೆಪಿಗೆ ಎದುರಾಗಿ ತೃತೀಯ ರಂಗವನ್ನು ಸ್ಥಾಪಿಸುವ ಪ್ರಯತ್ನ ನಡೆದಿದೆ.

ಹಾಗಾಗಿ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಮುಂದುವರಿಯುವ ಕನಸಿಗೆ ಇದು ತಡೆ ಹಾಕಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಚತ್ತೀಸ್‌ಗಡದಲ್ಲಿ ಬಿಜೆಪಿ ಮತ ಗಳಿಕೆ ಅಂತರ 2013ರ ಶೇ.41ರಿಂದ ಶೇ.39.2ಕ್ಕೆ ಕುಸಿದಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಶೇ.49 ಮತಗಳನ್ನು ಗಳಿಸಿತ್ತು ಮತ್ತು 11 ಲೋಕಸಭಾ ಸ್ಥಾನಗಳ ಪೈಕಿ 10ರಲ್ಲಿ ಜಯ ಗಳಿಸಿತ್ತು. ರಾಜಸ್ಥಾನದಲ್ಲಿ ಬಿಜೆಪಿ 2013ರಲ್ಲಿ ಶೇ.45.2 ಮತ ಗಳಿಸಿದ್ದರೆ, ಈ ಬಾರಿ ಶೇ.38.8ಕ್ಕೆ ಇಳಿದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ ಗಳಿಕೆ ಪ್ರಮಾಣ ಶೇ.55 ಆಗಿತ್ತು ಎಂದು ಚುನಾವಣಾ ಅಂಕಿಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News