ಭಾರತದ ಆರ್ಚರಿ ದೀಪಿಕಾ-ಅತನುಗೆ ನಿಶ್ಚಿತಾರ್ಥ

Update: 2018-12-11 18:57 GMT

ಕೋಲ್ಕತಾ, ಡಿ.11: ಭಾರತದ ಆರ್ಚರಿಗಳಾದ ದೀಪಿಕಾ ಕುಮಾರಿ ಹಾಗೂ ಅತನು ದಾಸ್ ಇಲ್ಲಿ ನಡೆದ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ಉಂಗುರ ಬದಲಾಯಿಸಿಕೊಂಡರು. ಈ ಇಬ್ಬರು ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಕ್ರೀಮ್ ಹಾಗೂ ಹಸಿರು ಬಣ್ಣದ ಲೆಹೆಂಗಾ-ಚುನ್ಹಿ ಧರಿಸಿದ್ದ 24ರ ಹರೆಯದ ದೀಪಿಕಾ ತನ್ನ ನಿವಾಸದಲ್ಲಿ ಸೋಮವಾರ 24ರ ವಯಸ್ಸಿನ ಅತನು ದಾಸ್‌ರೊಂದಿಗೆ ಸಾಂಪ್ರದಾಯಿಕ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಹಾಗೂ ಅವರ ಪತ್ನಿ ಮೀರಾ ಮುಂಡಾ ಉಪಸ್ಥಿತರಿದ್ದರು.

ನಿಶ್ಚಿತಾರ್ಥ ಸಮಾರಂಭದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಇಬ್ಬರು ಆರ್ಚರಿಗಳು,‘‘2019ನೇ ವರ್ಷ ಬಿಡುವಿಲ್ಲದ ವರ್ಷವಾಗಿದೆ. ಮುಂದಿನ ವರ್ಷ ಒಲಿಂಪಿಕ್ ಅರ್ಹತಾ ಪಂದ್ಯಗಳು ನಡೆಯುತ್ತವೆ’’ ಎಂದರು.

ವಿಶ್ವದ ಮಾಜಿ ನಂ.1 ಆಟಗಾರ್ತಿ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ದೀಪಿಕಾ ಪ್ರಸ್ತುತ ಐದನೇ ರ್ಯಾಂಕಿನಲ್ಲಿದ್ದಾರೆ. ಎರಡು ಬಾರಿಯ ಚಾಂಪಿಯನ್ ದೀಪಿಕಾ ವಿಶ್ವಕಪ್‌ನಲ್ಲಿ ಮೂರು ಬಾರಿ ಬೆಳ್ಳಿ ಪದಕ ಹಾಗೂ ಒಂದು ಬಾರಿ ಕಂಚಿನ ಪದಕ ಜಯಿಸಿದ್ದಾರೆ. ಆದರೆ, ಒಲಿಂಪಿಕ್ಸ್‌ನಲ್ಲಿ ಪದೇ ಪದೇ ವಿಫಲರಾಗುತ್ತಿದ್ದಾರೆ.

ಕೋಲ್ಕತಾದ ಅತನು ದಾಸ್ ಪುರುಷರ ರಿಕರ್ವ್ ತಂಡದ ಖಾಯಂ ಸದಸ್ಯರಾಗಿದ್ದು ವಿಶ್ವ ಆರ್ಚರಿ ರ್ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿದ್ದಾರೆ. ಇಂಡೋನೇಶ್ಯಾದ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಸೋತು ಬರಿಗೈಯಲ್ಲಿ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News