ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ಸೇವಿಸುವ ಮೊದಲು ಈ ವಿಷಯಗಳು ನಿಮಗೆ ತಿಳಿದಿರಲಿ

Update: 2018-12-12 11:06 GMT

ಆ್ಯಂಟಿಬಯಾಟಿಕ್‌ಗಳು ಅಥವಾ ಪ್ರತಿಜೀವಕಗಳು ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಸಾಮಾನ್ಯ ಔಷಧಿಗಳಾಗಿವೆ. ಆದರೆ ಆ್ಯಂಟಿಬಯಾಟಿಕ್ ಮಾತ್ರೆಯನ್ನು ನುಂಗುವ ಮುನ್ನ ಅದರೊಂದಿಗೆ ಗುರುತಿಸಿಕೊಂಡಿರುವ ಕೆಲವು ವಿಷಯಗಳು ನಿಮಗೆ ತಿಳಿದಿರಲೇಬೇಕು. ಈ ಕುರಿತು ಮಾಹಿತಿಗಳಿಲ್ಲಿವೆ.....

ಆ್ಯಂಟಿಬಯಾಟಿಕ್ಸ್‌ಗಳು ಆವಿಷ್ಕಾರಗೊಂಡಾಗಿನಿಂದಲೂ ಅವುಗಳ ಬಳಕೆ ಹೆಚ್ಚುತ್ತಲೇ ಬಂದಿದೆ. ವೈದ್ಯರೂ ಹೆಚ್ಚಾಗಿ ಅವುಗಳನ್ನು ಶಿಫಾರಸು ಮಾಡುತ್ತಾರೆ. ಹೀಗಾಗಿ ಅವುಗಳ ಬಳಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಕಾರಣಗಳಿಲ್ಲವೆಂಬಂತೆ ಕಂಡು ಬರುತ್ತದೆ. ಆದರೂ ಆ್ಯಂಟಿಬಯಾಟಿಕ್‌ಗಳು ಪ್ರಬಲ ಔಷಧಿಗಳೆಂದು ಭಾವಿಸುವುದು ಮೂರ್ಖತನವಾಗುತ್ತದೆ. ಹೀಗಾಗಿ ಅವುಗಳ ಬಳಕೆಯಲ್ಲಿ ಎಚ್ಚರಿಕೆಯಂತೂ ಇರಲೇಬೇಕು.

► ಆ್ಯಂಟಿಬಯಾಟಿಕ್‌ಗಳು ಎಲ್ಲ ರೋಗಗಳನ್ನೂ ಗುಣಪಡಿಸುವುದಿಲ್ಲ

ಈ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಶರೀರದಲ್ಲಿ ಬ್ಯಾಕ್ಟೀರಿಯಾಗಳಿಂದ ಸೋಂಕುಗಳುಂಟಾದಾಗ ಮಾತ್ರ ಆ್ಯಂಟಿಬಯಾಟಿಕ್‌ಗಳು ಪ್ರಯೋಜನಕ್ಕೆ ಬರುತ್ತವೆ ಮತ್ತು ವೈರಲ್ ಸೋಂಕುಗಳಿಗೆ ಇವುಗಳನ್ನು ಶಿಫಾರಸು ಮಾಡಲಾಗುವುದಿಲ್ಲ.

► ಆ್ಯಂಟಿಬಯಾಟಿಕ್ ಪ್ರತಿರೋಧಿ ಬ್ಯಾಕ್ಟೀರಿಯಾಗಳು

ಪದೇಪದೇ ಆ್ಯಂಟಿಬಯಾಟಿಕ್‌ಗಳನ್ನು ಸೇವಿಸುತ್ತಿದ್ದರೆ ಅದು ಶರೀರದಲ್ಲಿ ಆ್ಯಂಟಿಬಯಾಟಿಕ್ ಪ್ರತಿರೋಧಕ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗುವ ಅವಕಾಶಗಳನ್ನು ಹೆಚ್ಚಿಸುತ್ತದೆ. ಈ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಚಿಕಿತ್ಸೆಯು ಕಷ್ಟವಾಗುತ್ತದೆ ಮತ್ತು ಅಗತ್ಯ ಸಂದರ್ಭಗಳಲ್ಲಿ ಆ್ಯಂಟಿಬಯಾಟಿಕ್‌ಗಳು ನಿರೀಕ್ಷಿತ ಪರಿಣಾಮವನ್ನುಂಟು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ವ್ಯಕ್ತಿಯ ಆರೋಗ್ಯವು ಇನ್ನಷ್ಟು ಹದಗೆಟ್ಟು ಹೆಚ್ಚಿನ ಅಪಾಯಕ್ಕೆ ಆಹ್ವಾನವನ್ನು ನೀಡಬಹುದು.

► ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ನಾಶಗೊಳಿಸುತ್ತವೆ

ಆ್ಯಂಟಿಬಯಾಟಿಕ್‌ಗಳು ಸೋಂಕುಗಳ ವಿರುದ್ಧ ಹೋರಾಡುವಾಗ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳೆಂದು ಆಯ್ಕೆ ಮಾಡುವುದಿಲ್ಲ ಮತ್ತು ಎರಡೂ ವಿಧಗಳ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುವ ಉದ್ದೇಶದಿಂದ ಆ್ಯಂಟಿಬಯಾಟಿಕ್‌ಗಳನ್ನು ಸೇವಿಸಿದ್ದರೂ ಕೂಡ ಅವು ಕರುಳಿನಲ್ಲಿಯ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ ಮತ್ತು ಇದು ವ್ಯಕ್ತಿಯ ಆರೋಗ್ಯಕ್ಕೆ ಅಪಾಯಕಾರಿಯಾಗಬಲ್ಲುದು.

► ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ

ಆ್ಯಂಟಿಬಯಾಟಿಕ್‌ಗಳ ಅತಿಯಾದ ಬಳಕೆಯು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ವ್ಯಕ್ತಿಯನ್ನು ಸೋಂಕುಗಳಿಗೆ ಸುಲಭವಾಗಿ ಗುರಿಯಾಗಿಸುತ್ತದೆ ಎನ್ನುವುದು ಅಚ್ಚರಿಯನ್ನುಂಟು ಮಾಡಬಹುದು. ಅವು ರೋಗ ನಿರೋಧಕ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದಷ್ಟೇ ಅಲ್ಲ,ಕರುಳಿನಲ್ಲಿಯ ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ನಾಶಗೊಳಿಸುತ್ತವೆ. ಹೆಚ್ಚೆಚ್ಚು ಆ್ಯಂಟಿಬಯಾಟಿಕ್‌ಗಳನ್ನು ಸೇವಿಸಿದಷ್ಟೂ ರೋಗ ನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುತ್ತಲೇ ಹೋಗುತ್ತದೆ ಮತ್ತು ಅವುಗಳು ಪರಿಣಾಮ ಬೀರುವಂತಾಗಲು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ.

► ರೋಗದ ಮೂಲವು ನಿವಾರಣೆಯಾಗುವುದಿಲ್ಲ

ಆ್ಯಂಟಿಬಯಾಟಿಕ್‌ಗಳ ಸೇವನೆಯು ಬ್ಯಾಕ್ಟೀರಿಯಾಗಳಿಂದ ಉಂಟಾದ ಸೋಂಕನ್ನು ಗುಣಪಡಿಸುತ್ತವೆಯಾದರೂ ರೋಗದ ಮೂಲ ಕಾರಣವು ನಿವಾರಣೆ ಯಾಗುವುದಿಲ್ಲ. ಖನಿಜಗಳು ಮತ್ತು ವಿಟಾಮಿನ್‌ಗಳ ಕೊರತೆ ಜನರು ಅನಾರೋಗ್ಯಕ್ಕೆ ಗುರಿಯಾಗಲು ಮುಖ್ಯ ಕಾರಣಗಳಲ್ಲೊಂದಾಗಿದೆ ಮತ್ತು ಇಂತಹ ಸಂದರ್ಭಗಳಲ್ಲಿ ಆ್ಯಂಟಿಬಯಾಟಿಕ್‌ಗಳು ಯಾವುದೇ ನೆರವು ನೀಡುವುದಿಲ್ಲ.

► ಅಲರ್ಜಿಕ್ ಪ್ರತಿವರ್ತನೆಗಳು

ಆ್ಯಂಟಿಬಯಾಟಿಕ್‌ಗಳು ವೈದ್ಯರು ಸಾಮಾನ್ಯವಾಗಿ ಶಿಫಾರಸು ಮಾಡುವ ಔಷಧಿಗಳಾಗಿರುವುದರಿಂದ ಅವು ಅತ್ಯಂತ ಸುರಕ್ಷಿತವೆಂಬಂತೆ ಕಂಡುಬರುತ್ತದೆ ಯಾದರೂ ಅವು ಶರೀರದಲ್ಲಿ ಅಲರ್ಜಿಯನ್ನುಂಟು ಮಾಡುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ವ್ಯಕ್ತಿಯು ಯಾವುದೇ ಆ್ಯಂಟಿಬಯಾಟಿಕ್‌ನಿಂದ ಅಲರ್ಜಿಗೆ ತುತ್ತಾಗಬಹುದು ಮತ್ತು ಅಲರ್ಜಿಯ ಪ್ರತಿವರ್ತನೆಗಳು ಸೌಮ್ಯವಾಗಿರಬಹುದು ಇಲ್ಲವೇ ತೀವ್ರವೂ ಆಗಿರಬಹುದು.

► ಗಂಭೀರ ಬ್ಯಾಕ್ಟೀರಿಯಾ ಸೋಂಕುಗಳನ್ನು ತಡೆಯುತ್ತವೆ

ಆ್ಯಂಟಿಬಯಾಟಿಕ್‌ಗಳು ರೋಗ ನಿರೋಧಕ ವ್ಯವಸ್ಥೆಯ ಸಾಮಾನ್ಯ ಕಾರ್ಯ ನಿರ್ವಹಣೆಗೆ ಬೆದರಿಕೆಯನ್ನೊಡ್ಡಬಲ್ಲವಾದರೂ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಉಂಟಾಗುವ ಗಂಭೀರ ಕಾಯಿಲೆಗಳ ತೊಂದರೆಗಳನ್ನು ತಡೆಯುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News