ಅನಿಲ್ ಕುಂಬ್ಳೆ ನಿರ್ಗಮನದ ಹಿಂದೆ ಭಾರತದ ಈ ಪ್ರಸಿದ್ಧ ಆಟಗಾರನ ಕೈವಾಡ?

Update: 2018-12-12 15:11 GMT

ಹೊಸದಿಲ್ಲಿ, ಡಿ.12: ಕಳೆದ ವರ್ಷ ಭಾರತ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಅವರ ನಿಷ್ಠುರ ನಿರ್ಗಮನಕ್ಕೆ ಬುಧವಾರ ಹೊಸ ತಿರುವು ಲಭಿಸಿದೆ. ಸೋರಿಕೆಯಾಗಿರುವ ಇ-ಮೇಲ್‌ನಲ್ಲಿ ಕುಂಬ್ಳೆ ನಿರ್ಗಮನದ ಹಿಂದೆ ನಾಯಕ ವಿರಾಟ್ ಕೊಹ್ಲಿ ಕೈವಾಡವಿರುವುದು ಬಹಿರಂಗವಾಗಿದೆ.

2017ರ ಜೂನ್‌ನಲ್ಲಿ ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕುಂಬ್ಳೆ ಕೋಚ್ ಹುದ್ದೆಯನ್ನು ತ್ಯಜಿಸಿದ್ದರು. ನಾಯಕ ಕೊಹ್ಲಿಯೊಂದಿಗೆ ನನ್ನ ಸಂಬಂಧ ‘ಅಸಹನೀಯವಾಗಿತ್ತು’ ಎಂದು ಕುಂಬ್ಳೆ ಆಗ ಹೇಳಿಕೆ ನೀಡಿದ್ದರು. ಆದರೆ, ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಮರ್ಥನೆ ನೀಡಿತ್ತು.

ಇದೀಗ ಸೋರಿಕೆಯಾಗಿರುವ ಇ-ಮೇಲ್‌ನಲ್ಲಿ ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಮಂಡಳಿಯ ಆಡಳಿತಾಧಿಕಾರಿ ವಿನೋದ್ ರಾಯ್‌ಗೆ ಬರೆದಿರುವ ಪತ್ರದಲ್ಲಿ , ‘‘ಕೊಹ್ಲಿ ಪದೇ ಪದೇ ಸಿಇಒಗೆ ಎಸ್‌ಎಂಎಸ್ ಕಳುಹಿಸಿದ್ದನ್ನು ಪರಿಗಣಿಸಿ ನೀವು ಕ್ರಮ ಕೈಗೊಂಡಿದ್ದೀರಿ. ಹೀಗಾಗಿ ಕೋಚ್‌ರನ್ನು ಬದಲಿಸಲಾಗಿದೆ’’ ಎಂದು ತಿಳಿಸಿದ್ದರು.

ಇದೇ ವೇಳೆ, ಹಿರಿಯ ಆಡಳಿತಾಧಿಕಾರಿ ಹಾಗೂ ಮಾಜಿ ಕ್ರಿಕೆಟ್ ಆಟಗಾರ್ತಿ ಡಯಾನಾ ಎಡುಲ್ಜಿ ಅವರು ವಿವಾದ ಸ್ವರೂಪ ಪಡೆದಿರುವ ಮಹಿಳಾ ಕ್ರಿಕೆಟ್ ಕೋಚ್ ಆಯ್ಕೆಗೆ ಸಂಬಂಧಿಸಿ ಮಾಡಿರುವ ಇ-ಮೇಲ್ ಕೂಡ ಸೋರಿಕೆಯಾಗಿದ್ದು, ಅದರಲ್ಲಿ ಅವರು ಕುಂಬ್ಳೆ ಬಗ್ಗೆ ಪ್ರಸ್ತಾವಿಸಿದ್ದಾರೆ. ‘‘ಕುಂಬ್ಳೆ ಓರ್ವ ದಂತಕತೆ. ಅವರಿಗೆ ಮುಖಭಂಗವಾಗಿದೆ. ಅವರನ್ನು ಖಳನಾಯಕರನ್ನಾಗಿ ಬಿಂಬಿಸಲಾಗಿದೆ. ವಿನಯಪೂರ್ವಕವಾಗಿ ಹೊರ ನಡೆದಿರುವ ಬಗ್ಗೆ ನನಗೆ ತುಂಬಾ ಗೌರವವಿದೆ. ಅವರನ್ನು ಕೋಚ್ ಹುದ್ದೆಯಿಂದ ತೆಗೆಯುವಾಗ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಆ ಕುರಿತು ನಾನು ಆಕ್ಷೇಪ ಸಲ್ಲಿಸಿದ್ದೆ’’ ಎಂದು ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದ ಕುಂಬ್ಳೆ ಭಾರತ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆಯಲು ನೆರವಾಗಿದ್ದರು. ಜೂ.2017ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತಿತ್ತು. ಆಗ ಕುಂಬ್ಳೆ ಅವರ ಒಂದು ವರ್ಷದ ಕೋಚ್ ಅವಧಿಯೂ ಅಂತ್ಯವಾಗಿತ್ತು. ಕೊಹ್ಲಿ ಅವರು ಕುಂಬ್ಳೆ ಕೋಚಿಂಗ್ ಶೈಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಕುಂಬ್ಳೆ ಬದಲಿಗೆ ರವಿ ಶಾಸ್ತ್ರಿ ಅವರನ್ನು ಕೋಚ್ ಆಗಿ ನೇಮಿಸಲಾಗಿತ್ತು.2014-16ರ ತನಕ ತಂಡದ ನಿರ್ದೇಶಕರಾಗಿದ್ದ ಶಾಸ್ತ್ರಿ ಅವರು ಕೊಹ್ಲಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಪ್ರಸ್ತುತ ಕೊಹ್ಲಿ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸದಲ್ಲಿದ್ದು ಇ-ಮೇಲ್ ಸೋರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News