ಬಿಜೆಪಿಯ ನಕಾರಾತ್ಮಕ ರಾಜಕೀಯವನ್ನು ಕಾಂಗ್ರೆಸ್ ಸೋಲಿಸಿದೆ: ಸೋನಿಯಾ

Update: 2018-12-12 15:22 GMT

ಹೊಸದಿಲ್ಲಿ, ಡಿ.12: ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಗೆಲುವು ಬಿಜೆಪಿಯ ನಕಾರಾತ್ಮಕ ರಾಜಕೀಯದ ವಿರುದ್ಧದ ಗೆಲುವಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಛತ್ತೀಸ್‌ಗಢದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಭಾರೀ ಸೋಲುಣಿಸಿರುವ ಕಾಂಗ್ರೆಸ್ 68 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ ಕೇವಲ 15 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ರಾಜಸ್ತಾನದಲ್ಲಿ ಕಾಂಗ್ರೆಸ್ 99 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ 114 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ.

ಶಿವರಾಜ್ ಸಿಂಗ್ ಚೌಹಾಣ್‌ರನ್ನು ಕೆಳಗಿಳಿಸುವುದು ನಮ್ಮ ಉದ್ದೇಶವಾಗಿತ್ತು. ಇದಕ್ಕೆ ಪೂರಕವಾಗಿ ಜನತೆ ತೀರ್ಪು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಬಿಜೆಪಿಯ ಅಹಂಕಾರ ಸೋಲಿಗೆ ಕಾರಣ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಹೇಳಿದ್ದಾರೆ. ನೀವು ಏನೂ ಕೆಲಸ ಮಾಡದಿದ್ದರೂ ಜನತೆ ಕ್ಷಮಿಸಿಬಿಡುತ್ತಾರೆ. ಆದರೆ ಅಹಂಕಾರದಿಂದ ಮೆರೆಯುವವರನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಈ ಗೆಲುವು ಕಾಂಗ್ರೆಸ್‌ನ ಕಾರ್ಯಕರ್ತರಿಗೆ ಸಂದ ಗೆಲುವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದರು ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿರುವುದಕ್ಕಾಗಿ ಯುವಜನತೆ, ಕೃಷಿಕರು ಹಾಗೂ ವ್ಯಾಪಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದರು. ಗೆದ್ದ ಮತ್ತು ಸೋತ ರಾಜ್ಯಗಳಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News