ರಾಜ್ಯದಲ್ಲಿ ವಿದೇಶಿ ಮಾದಕ ದ್ರವ್ಯ ಜಾಲದ ಕರಾಳ ಹಸ್ತ

Update: 2018-12-14 07:19 GMT

ಮಂಗಳೂರು, ಡಿ.13: ಕೃತಕ ಮಾದಕ ವಸ್ತುಗಳ ಮಾರಾಟದಲ್ಲಿ ವ್ಯಾಪಕವಾಗಿ ಹರಡಿರುವ, ಆಧುನಿಕ ಭ್ರಮಾಲೋಕವನ್ನೇ ಸೃಷ್ಟಿಸುವ ವಿದೇಶಿ ಮಾದಕ ದ್ರವ್ಯ ಜಾಲ ಸದ್ದಿಲ್ಲದೆ ರಾಜ್ಯದಲ್ಲೂ ವಿಸ್ತರಿಸುತ್ತಿದೆ. ಭಾವನೆಗಳನ್ನೇ ಬದಲಿಸುವ ಎಲ್‌ಎಸ್‌ಡಿ (ಲೈಸೆರ್ಜಿಕ್ ಆ್ಯಸಿಡ್ ಡೈಥೈಲಾಮೈಡ್) ಎಂಬ ಭಯಾನಕ ಮಾದಕ ವಸ್ತು ಈಗ ಮಂಗಳೂರಿನಲ್ಲೂ ತನ್ನ ಕರಾಳ ಹಸ್ತವನ್ನು ಚಾಚುತ್ತಿರುವುದು ಪತ್ತೆಯಾಗಿದೆ.

ನೆರೆಯ ಗೋವಾ ರಾಜ್ಯವನ್ನು ಕೇಂದ್ರವಾಗಿರಿಸಿಕೊಂಡು ಎಲ್‌ಎಸ್‌ಡಿ ಮಾದಕ ವಸ್ತುವನ್ನು ವಿದೇಶಗಳಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳುವ ಜಾಲ ಹೆಚ್ಚುತ್ತಿದೆ. ಗೋವಾದಿಂದ ಕರ್ನಾಟಕದ ವಿವಿಧೆಡೆ ಈ ಮಾದಕವಸ್ತು ಪೂರೈಕೆಯಾಗುತ್ತಿದೆ.

13 ಎಲ್‌ಎಸ್‌ಡಿ ವಶ:  ಡಿ.11ರಂದು ಮಂಗಳೂರು ನಗರದ ಕಟ್ಟಡವೊಂದರ ಎದುರಿನ ರಸ್ತೆ ಬದಿಯಲ್ಲಿ ಮೂವರು ಆರೋಪಿಗಳು ‘ಎಲ್‌ಎಸ್‌ಡಿ’ ಮಾದಕ ವಸ್ತುವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕ ನೇತೃತ್ವದ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದ. ಬಂಧಿತರಿಂದ 13,000 ರೂ. ಮೌಲ್ಯದ 13 ‘ಎಲ್‌ಎಸ್‌ಡಿ’ಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮನೋರಂಜನೆಗೆ ಬಳಕೆ: ‘ಎಲ್‌ಎಸ್‌ಡಿ ಮಾದಕ ದ್ರವ್ಯದ ಟಾರ್ಗೆಟ್ ವಿದ್ಯಾರ್ಥಿಗಳು ಹಾಗೂ ಯುವಕರೇ ಆಗಿದ್ದಾರೆ. ಮನೋರಂಜನೆಗಾಗಿಯೇ ಈ ಕೃತಕ ಮಾದಕವನ್ನು ಬಳಸಲಾಗುತ್ತಿದೆ. ಈ ಮಾದಕ ಸೇವನೆಯಿಂದ ಭ್ರಮಾಲೋಕವೇ ಸೃಷ್ಟಿಯಾಗುತ್ತದೆ. ಇಲ್ಲದ ವಸ್ತುವನ್ನು ಕಣ್ಮುಂದೆ ಇದೆ ಎನ್ನುವ ಭಾವನೆಯನ್ನು ಮೂಡಿಸುತ್ತದೆ’ ಎಂದು ದ.ಕ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಅಧಿಕಾರಿ ಡಾ.ರತ್ನಾಕರ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದರು.

ಉನ್ಮಾದದಲ್ಲಿ ಮೋಜು-ಮಸ್ತಿ: ‘ಎಲ್‌ಎಸ್‌ಡಿ’ಯನ್ನು ಸೇವಿಸಬಹುದು, ಜಗಿಯಬಹುದು, ರಕ್ತನಾಳದ ಮೂಲಕವೂ ಇಂಜೆಕ್ಟ್ ಮಾಡಿಕೊಳ್ಳಬಹುದು. ಪೋಸ್ಟಲ್ ಸ್ಟಾಂಪ್ ಆಕಾರದ ಎಲ್‌ಎಸ್‌ಡಿಯನ್ನು ನಾಲಿಗೆಯ ಕೆಳಭಾಗದಲ್ಲಿ ಇಟ್ಟುಕೊಂಡು ಹೀರಬಹುದು. ಇದರಿಂದ ಉಂಟಾಗುವ ನಶೆ ಸುಮಾರು 12 ಗಂಟೆಗಳವರೆಗೂ ಇರುತ್ತದೆ. ‘ಎಲ್‌ಎಸ್‌ಡಿ’ ಅತ್ಯಂತ ಅಪಾಯಕಾರಿ ಅಮಲು ಬರಿಸುವ ಮಾದಕವಾಗಿದೆ. ಇದು ಭಾವನೆ ಮತ್ತು ಆಲೋಚನೆಗಳನ್ನು ಬದಲಿಸುತ್ತದೆ. ವ್ಯಸನಿಯು ತನ್ನ ಮುಂದೆ ಒಬ್ಬ ವ್ಯಕ್ತಿ ಡಾನ್ಸ್ ಮಾಡುತ್ತಿದ್ದಾನೆ ಎಂದುಕೊಂಡರೆ ಆತನ ಮನಸಿಗೆ ಅದೇ ಭ್ರಮೆ ಹುಟ್ಟಲು ಶುರುವಾಗುತ್ತದೆ. ಆಗ ವ್ಯಸನಿ ಉನ್ಮಾದದಲ್ಲಿ ತೇಲುತ್ತಾ ಮೋಜು-ಮಸ್ತಿ ಅನುಭವಿಸುತ್ತಾನೆ’ ಎನ್ನುತಾರೆ ಡಾ.ರತ್ನಾಕರ್.

ಭಾವನೆ, ಆಲೋಚನೆ ಬದಲಿಸುವ ಎಲ್‌ಎಸ್‌ಡಿ

ಎಲ್‌ಎಸ್‌ಡಿ ಮಾದಕ ದ್ರವ್ಯ ಜಾಲ ವಿವಿಧೆಡೆ ಸಕ್ರಿಯವಾಗಿದ್ದು, ಇದನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಆಗಾಗ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಪ್ರಕರಣಗಳು ದಾಖಲಾಗುತ್ತಿವೆ. ಮಂಗಳೂರು ದಕ್ಷಿಣ, ಉರ್ವ, ಉಳ್ಳಾಲ ಹಾಗೂ ನಾರ್ಕೊಟಿಕ್ಸ್ ಆ್ಯಂಡ್ ಎಕೊನಾಮಿಕ್ ಅಫೆನ್ಸೆಸ್ ಸ್ಟೇಶನ್‌ನಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

 ಟಿ.ಆರ್.ಸುರೇಶ್, ಮಂಗಳೂರು ನಗರ ಪೊಲೀಸ್ ಆಯುಕ್ತ

ಏನಿದು ಎಲ್‌ಎಸ್‌ಡಿ?

ಎಲ್‌ಎಸ್‌ಡಿ ಮಾದಕ ವಸ್ತುವನ್ನು ಆ್ಯಸಿಡ್‌ನಿಂದ ಕೃತಕವಾಗಿ ತಯಾರಿಸ ಲಾಗುತ್ತದೆ. ಇದನ್ನು ರಸಾಯನ ಶಾಸ್ತ್ರಜ್ಞರೊಬ್ಬರು 1938ರಲ್ಲಿ ಕಂಡು ಹಿಡಿದರು. 1943ರವರೆಗೂ ಇದರ ದುಷ್ಪರಿಣಾಮ ಬೆಳಕಿಗೆ ಬಂದಿರಲಿಲ್ಲ. 1967ರಲ್ಲಿ ಎಲ್‌ಎಸ್‌ಡಿ ಮಾದಕ ವಸ್ತುವನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಸೇರಿದಂತೆ ಹಲವು ದೇಶಗಳು ನಿಷೇಧ ಮಾಡಿದವು. ಎಲ್‌ಎಸ್‌ಡಿ ಕಾರ್ಟೂನ್ ಇರುವ ಚಿತ್ರಗಳಿಂದ ತುಂಬಿದ್ದು, ಪೋಸ್ಟಲ್ ಸ್ಟಾಂಪ್ ಮಾದರಿಯಲ್ಲಿರುತ್ತದೆ. ಇದನ್ನು ನಾಲಿ ಗೆಯ ಮೇಲೆ ಇಟ್ಟುಕೊಂಡ ಕೆಲವೇ ನಿಮಿಷಗಳಲ್ಲಿ ನಶೆ ಏರಲು ಶುರುವಾಗುತ್ತದೆ. ನಶೆ ಸುಮಾರು 12 ಗಂಟೆಗಳ ಕಾಲ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎನ್ನುತ್ತಾರೆ ತಜ್ಞರು.

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News