ತನ್ನದೇ ಪ್ರಜೆಗಳನ್ನು ಕೊಲ್ಲುವ ಯಾವುದೇ ದೇಶ ಯುದ್ಧ ಗೆಲ್ಲದು: ಮೆಹಬೂಬ ಮುಫ್ತಿ

Update: 2018-12-15 14:15 GMT

ಹೊಸದಿಲ್ಲಿ, ಡಿ.15: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಎನ್‌ಕೌಂಟರ್ ಬಳಿಕ ನಡೆದ ಘರ್ಷಣೆಯಲ್ಲಿ ನಾಗರಿಕರು ಮೃತಪಟ್ಟ ಘಟನೆಯನ್ನು ಖಂಡಿಸಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ, ನಾಗರಿಕರ ಬದುಕಿಗೆ ಭದ್ರತೆ ಒದಗಿಸಲು ಆಡಳಿತ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಅನ್ಯಾಯವಾಗಿ ಸಾವನ್ನಪ್ಪಿದ ಅಮಾಯಕರಿಗೆ ಜೀವ ತುಂಬಲು ಯಾವುದೇ ತನಿಖೆಯಿಂದಲೂ ಸಾಧ್ಯವಿಲ್ಲ. ಕಳೆದ 6 ತಿಂಗಳಿಂದ ದಕ್ಷಿಣ ಕಾಶ್ಮೀರದಲ್ಲಿ ಭೀತಿಯ ವಾತಾವರಣವಿದೆ. ಇದಕ್ಕಾಗಿಯೇ ರಾಜ್ಯಪಾಲರ ಆಡಳಿತ ಜಾರಿಗೊಳಿಸಲಾಗಿದೆಯೇ ಎಂದು ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದಾರೆ. ತನ್ನದೇ ಪ್ರಜೆಗಳನ್ನು ಕೊಲ್ಲುವ ಯಾವುದೇ ದೇಶ ಯುದ್ಧ ಗೆಲ್ಲಲಾಗದು. ಎಷ್ಟು ದಿನ ನಮ್ಮ ಯುವಜನತೆಯ ಶವಮಂಚಕ್ಕೆ ಹೆಗಲು ನೀಡಬಹುದು. ಶನಿವಾರ ಎನ್‌ಕೌಂಟರ್ ಬಳಿಕ ನಡೆದ ಘಟನೆಯಲ್ಲಿ ಹಲವು ನಾಗರಿಕರು ಮೃತಪಟ್ಟಿದ್ದಾರೆ. ಈ ಹತ್ಯೆಯನ್ನು ಖಂಡಿಸುತ್ತೇನೆ ಮತ್ತು ರಕ್ತಪಾತ ಕೊನೆಗೊಳಿಸಲು ಮನವಿ ಮಾಡುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಶಾಂತಿ ಕಾಪಾಡುವ ಏಕೈಕ ಉದ್ದೇಶದಿಂದ ರಾಜ್ಯಪಾಲರ ಆಡಳಿತ ಜಾರಿಗೊಳಿಸಲಾಗಿದೆ. ಆದರೆ ಈ ಉದ್ದೇಶ ಸಾಧಿಸಲು ಆಡಳಿತ ವಿಫಲವಾಗಿದೆ. ಪ್ರಚಾರ ಅಭಿಯಾನ ಮತ್ತು ಪುಟಗಟ್ಟಲೆ ಜಾಹೀರಾತಿನಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News