ಕಾನೂನು ಪಾಲಿಸದ 10,500 ಹೋಟೆಲ್‌ಗಳನ್ನು ಪಟ್ಟಿಯಿಂದ ಕೈಬಿಟ್ಟ ಇ-ಕಾಮರ್ಸ್ ಸಂಸ್ಥೆಗಳು

Update: 2018-12-15 14:21 GMT

ಹೊಸದಿಲ್ಲಿ, ಡಿ.15: ಆಹಾರ ಸುರಕ್ಷತೆ ಕಾನೂನಿನ ಪ್ರಕಾರ ಲೈಸೆನ್ಸ್ ಪಡೆಯದ ಅಥವಾ ನೋಂದಾವಣೆ ಮಾಡಿಕೊಳ್ಳದ ಸುಮಾರು 10,500 ಹೋಟೆಲ್‌ಗಳನ್ನು ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಪಟ್ಟಿಯಿಂದ ಕೈಬಿಟ್ಟಿವೆ ಎಂದು ಕೇಂದ್ರ ಆರೋಗ್ಯ ಖಾತೆಯ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಎಫ್‌ಎಸ್‌ಎಸ್) ಕಾಯ್ದೆ 2006ರಡಿ ನೋಂದಾವಣೆಗೊಳ್ಳದ ಹೋಟೆಲ್‌ಗಳನ್ನು ತಮ್ಮ ಪಟ್ಟಿಯಿಂದ ಕೈಬಿಡುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಕಳೆದ ಜುಲೈಯಲ್ಲಿ ಇ-ಕಾಮರ್ಸ್ ಸಂಸ್ಥೆಗಳಿಗೆ ಸೂಚನೆ ನೀಡಿತ್ತು ಎಂದು ಸಚಿವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ತಾವು ಈಗಾಗಲೇ ತಪ್ಪಿತಸ್ತ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಇ-ಕಾಮರ್ಸ್ ಸಂಸ್ಥೆಗಳು ತಿಳಿಸಿವೆ. ಝೊಮಟೊ 2,500 ಹೋಟೆಲ್‌ಗಳನ್ನು, ಸ್ವಿಗ್ಗಿ 4 ಸಾವಿರ, ಫುಡ್‌ಪಾಂಡ 1,800, ಉಬರ್‌ಈಟ್ಸ್ 2 ಸಾವಿರ ಮತ್ತು ಫುಡ್‌ಕ್ಲೌಡ್ 200 ಹೋಟೆಲ್‌ಗಳ ಹೆಸರನ್ನು ರದ್ದುಗೊಳಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಾಯ್ದೆಯಡಿ ನೋಂದಾವಣೆಗೊಳ್ಳದೆ ಯಾವ ಸಂಸ್ಥೆ ಕೂಡಾ ಆಹಾರ ಉದ್ದಿಮೆ ಆರಂಭಿಸುವಂತಿಲ್ಲ. ಅಲ್ಲದೆ ನಿಯಮಿತ ಕಣ್ಗಾವಲು, ಮೇಲ್ವಿಚಾರಣೆ, ಆಹಾರ ಪದಾರ್ಥಗಳ ಆಕಸ್ಮಿಕ ತಪಾಸಣೆ ಇತ್ಯಾದಿಗಳನ್ನು ಅಧಿಕಾರಿಗಳು ನಡೆಸುತ್ತಾರೆ. ಒಂದು ವೇಳೆ ಆಹಾರ ಪದಾರ್ಥದ ಗುಣಮಟ್ಟ ಕಳಪೆಯಾಗಿದ್ದರೆ ಶಿಸ್ತು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಸಚಿವ ಚೌಬೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News