ರಫೇಲ್ ತೀರ್ಪು:ಸರಕಾರದ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದ ಸುಪ್ರೀಂ ಕೋರ್ಟ್

Update: 2018-12-15 16:08 GMT

ಹೊಸದಿಲ್ಲಿ,ಡಿ.15: 36 ರಫೇಲ್ ಯುದ್ಧವಿಮಾನಗಳ ಖರೀದಿಗಾಗಿ ನಿಗದಿಗೊಳಿಸಿರುವ ಬೆಲೆಗಳ ವಿವರಗಳ ಕುರಿತು ಸರಕಾರವು ಸೀಲ್ ಮಾಡಿದ್ದ ಲಕೋಟೆಯಲ್ಲಿ ಸಲ್ಲಿಸಿದ್ದ ದಾಖಲೆಯನ್ನು ಸರ್ವೋಚ್ಚ ನ್ಯಾಯಾಲಯವು ತಪ್ಪಾಗಿ ವ್ಯಾಖ್ಯಾನಿಸಿದೆ ಎಂದು ನ್ಯಾಯಾಲಯದಲ್ಲಿ ಕಲಾಪಗಳೊಡನೆ ನಂಟು ಹೊಂದಿದ್ದ ಅತ್ಯುನ್ನತ ಮೂಲವೊಂದು ಶನಿವಾರ ತಿಳಿಸಿದೆ. ರಫೇಲ್ ಒಪ್ಪಂದದ ಕುರಿತು ನ್ಯಾಯಾಲಯದ ನಿಗಾದಡಿ ತನಿಖೆ ಕೋರಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು.

ಬೆಲೆ ವಿವರಗಳನ್ನು ಮಹಾಲೇಖಪಾಲ(ಸಿಎಜಿ)ರೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಸಿಎಜಿ ವರದಿಯನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ(ಪಿಎಸಿ)ಯ ಎದುರು ಮಂಡಿಸಬೇಕಿದೆ. ತಪ್ಪು ವ್ಯಾಖ್ಯಾನವನ್ನು ಸರಿಪಡಿಸುವಂತೆ ಆಗ್ರಹಿಸಿ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ ಎಂದು ಮೂಲವು ಹೇಳಿತು.

ರಫೇಲ್ ಒಪ್ಪಂದದಲ್ಲಿ ಹಸ್ತಕ್ಷೇಪವನ್ನು ನಿರಾಕರಿಸಿರುವ ಸರ್ವೋಚ್ಚ ನ್ಯಾಯಾಲಯಾದ ತೀರ್ಪಿನ 25ನೇ ಪ್ಯಾರಾದಲ್ಲಿ ‘‘ಬೆಲೆ ವಿವರಗಳನ್ನು ಸಿಎಜಿಯೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಸಿಎಜಿ ವರದಿಯನ್ನು ಪಿಎಸಿಯು ಪರಿಶೀಲಿಸಿದೆ. ವರದಿಯ ಪರಿಷ್ಕೃತ ಭಾಗವನ್ನು ಮಾತ್ರ ಸಂಸತ್ತಿನ ಮುಂದಿರಿಸಲಾಗಿದೆ ಮತ್ತು ಅದು ಸಾರ್ವಜನಿಕ ಕ್ಷೇತ್ರದಲ್ಲಿದೆ ’’ ಎಂದು ಹೇಳಲಾಗಿದೆ.

ಸಿಎಜಿ ವರದಿಯನ್ನು ಪಿಎಸಿಗೆ ಸಲ್ಲಿಸಲಾಗಿತ್ತು ಮತ್ತು ಅದು ವರದಿಯನ್ನು ಪರಿಶೀಲಿಸಿದೆ ಎಂಬ ಅಭಿಪ್ರಾಯವನ್ನು ತೀರ್ಪು ಮೂಡಿಸಿದೆ. ತೀರ್ಪಿನಲ್ಲಿಯ ಈ ಅಂಶ ರಾಜಕೀಯ ಸುಂಟರಗಾಳಿಯನ್ನೇ ಸೃಷ್ಟಿಸಿದ್ದು,ಸರಕಾರವು ನ್ಯಾಯಾಲಯವನ್ನು ದಾರಿ ತಪ್ಪಿಸಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಇಂತಹ ಸಿಎಜಿ ವರದಿಯನ್ನು ಪಿಎಸಿಗೆ ಸಲ್ಲಿಸಲಾಗಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದ್ದರು.

ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಯಾವಾಗ ಮಂಡಿಸಲಾಗಿತ್ತು ಎನ್ನುವುದನ್ನು ಪ್ರಶ್ನಿಸಲು ಅಟಾರ್ನಿ ಜನರಲ್ ಮತ್ತು ಸಿಎಜಿಯನ್ನು ಸಮಿತಿಯ ಮುಂದೆ ಕರೆಸುವಂತೆ ತಾನು ಎಲ್ಲ ಸದಸ್ಯರನ್ನು ಕೋರುವುದಾಗಿ ಖರ್ಗೆ ಶನಿವಾರ ಹೇಳಿದರು. ನ್ಯಾಯಾಲಯವನ್ನು ದಾರಿ ತಪ್ಪಿಸಿದ್ದಕ್ಕಾಗಿ ಸರಕಾರವು ಕ್ಷಮೆ ಕೋರಬೇಕೆಂದು ಅವರು ಆಗ್ರಹಿಸಿದರು.

ಸರಕಾರದ ವಿರುದ್ಧ ಆರೋಪವನ್ನು ಅಲ್ಲಗಳೆದ ಮೂಲವು,ರಫೇಲ್ ಬೆಲೆ ವಿವರಗಳನ್ನ್ನು ಸಿಎಜಿಯೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಸಿಎಜಿ ವರದಿಯನ್ನು ಪಿಎಸಿಗೆ ಸಲ್ಲಿಸಬೇಕಿದೆ. ಪಿಎಸಿ ವರದಿಯನ್ನು ಪರಿಷ್ಕೃತ ರೂಪದಲ್ಲಿ ಸಂಸತ್ತಿನಲ್ಲಿ ಮಂಡಿಸಬೇಕಿದೆ ಎಂದು ಸರಕಾರವು ತನ್ನ ಹೇಳಿಕೆಯಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ ಇದನ್ನು ತಪ್ಪಾಗಿ ವ್ಯಾಖ್ಯಾನಿಸಿರುವ ನ್ಯಾಯಾಲಯವು,ಪಿಎಸಿಯೆದುರು ‘ಮಂಡಿಸಬೇಕಿದೆ’ಎನ್ನುವುದರ ಬದಲು ‘ಮಂಡಿಸಲಾಗಿದೆ ’ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News