ವಾಯುಪಡೆ ಅಧಿಕಾರಿಗಳ ವಿದೇಶ ಪ್ರಯಾಣ ವೆಚ್ಚ ಭರಿಸಿದ್ದ ಕ್ರಿಶ್ಚಿಯನ್ ಮಿಶೆಲ್: ಸಿಬಿಐ

Update: 2018-12-15 16:30 GMT

ಹೊಸದಿಲ್ಲಿ,ಡಿ.15: ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್, ಭಾರತೀಯ ವಾಯುಪಡೆ ಅಧಿಕಾರಿಗಳ ವಿದೇಶ ಪ್ರಯಾಣದ ವೆಚ್ಚವನ್ನು ಭರಿಸಿದ್ದ ಎಂದು ಸಿಬಿಐ ದಿಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ತಿಳಿಸಿದೆ.

ಶನಿವಾರದಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಮಿಶೆಲ್‌ನ ಸಿಬಿಐ ಕಸ್ಟಡಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಿದೆ. ತಾನು ಸುಮಾರು ಐದು ವರ್ಷಗಳ ಕಾಲ ಇಟಲಿ ಮತ್ತು ಸಿಝರ್‌ಲ್ಯಾಂಡ್‌ನಲ್ಲಿ ಮಿಶೆಲ್‌ನಲ್ಲಿ ವಕೀಲೆಯಾಗಿದ್ದೆ ಎಂದು ರೋಸ್‌ಮೆರಿ ಪಟ್ರಿಝಿ ತಿಳಿಸಿದ ನಂತರ ನ್ಯಾಯಾಲಯ ಆಕೆಗೆ ಮಿಶೆಲ್ ಜೊತೆ ಹತ್ತು ನಿಮಿಷಗಳ ಕಾಲ ಮಾತನಾಡುವ ಅವಕಾಶ ನೀಡಿತು. ಇದೇ ವೇಳೆ ಮಿಶೆಲ್‌ನ ಭಾರತದ ವಕೀಲ ಅಜಿಲೊ ಕೆ.ಜೋಸೆಫ್‌ಗೂ ತನ್ನ ಕಕ್ಷೀದಾರನನ್ನು ಭೇಟಿಯಾಗುವ ಅವಕಾಶವನ್ನು ನೀಡಲಾಯಿತು.

ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿಯಾಗಿರುವ ಕ್ರಿಶ್ಚಿಯನ್ ಮಿಶಲ್ ನನ್ನು ಡಿಸೆಂಬರ್ 4ರಂದು ಯುಎಇಯಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News