ಶಾಸಕರಿಂದಲೇ ವಿರೋಧ: ಉಪೇಂದ್ರ ಕುಶ್ವಾಹರ ಪಕ್ಷ ಇಬ್ಭಾಗದತ್ತ

Update: 2018-12-15 16:41 GMT

ಪಾಟ್ನ, ಡಿ.15: ಎನ್‌ಡಿಎಯಿಂದ ದೂರವಾಗುವ ನಿರ್ಧಾರ ಕೈಗೊಂಡಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷ(ಆರ್‌ಎಲ್‌ಎಸ್‌ಪಿ)ದ ಅಧ್ಯಕ್ಷ ಉಪೇಂದ್ರ ಕುಶ್ವಾಹರಿಗೆ ಸೆಡ್ಡು ಹೊಡೆದಿರುವ ಮೂವರು ಬಿಹಾರ ಶಾಸಕರು , ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಸರಕಾರದಿಂದ ಹೊರಬರುವ ಕುಶ್ವಾಹ ನಿರ್ಧಾರಕ್ಕೆ ತಮ್ಮ ಸಮ್ಮತಿಯಿಲ್ಲ ಎಂದು ತಿಳಿಸಿದ್ದಾರೆ. ಬಿಹಾರದಲ್ಲಿ ಆರ್‌ಎಲ್‌ಎಸ್‌ಪಿಯ ಮೂವರು ಶಾಸಕರು ಕೈಗೊಂಡಿರುವ ಈ ನಿರ್ಧಾರದಿಂದಾಗಿ ಪಕ್ಷ ಹೋಳಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

 ಪಾಟ್ನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರ್‌ಎಲ್‌ಎಸ್‌ಪಿಯ ಶಾಸಕರಾದ ಸುಧಾಂಶು ಶೇಖರ್, ಲಾಲನ್ ಪಾಸ್ವಾನ್ ಹಾಗೂ ವಿಧಾನಪರಿಷತ್ ಸದಸ್ಯ ಸಂಜೀವ್ ಸಿಂಗ್ ಶ್ಯಾಮ್, ಕುಶ್ವಾಹ ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಎನ್‌ಡಿಎಯಿಂದ ಹೊರಬಂದಿದ್ದಾರೆ ಎಂದು ಆರೋಪಿಸಿದರು. ತಾವು ಶೀಘ್ರ ಚುನಾವಣಾ ಆಯೋಗವನ್ನು ಭೇಟಿಯಾಗಿ ತಮ್ಮದು ನೈಜ ಆರ್‌ಎಲ್‌ಎಸ್‌ಪಿ ಪಕ್ಷವಾಗಿದೆ ಮತ್ತು ಬಹುತೇಕ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಬೆಂಬಲ ತಮಗಿದೆ ಎಂದು ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ. ಪಕ್ಷವು ಮೈತ್ರಿಕೂಟದಲ್ಲಿ ಮುಂದುವರಿಯಲಿದೆ ಎಂದವರು ಸ್ಪಷ್ಟಪಡಿಸಿದ್ದಾರೆ. ಆರ್‌ಎಲ್‌ಎಸ್‌ಪಿ ಬಿಹಾರದ ಮೂವರು ಸಂಸದರು(ಕುಶ್ವಾಹ ಸಹಿತ), ಇಬ್ಬರು ಶಾಸಕರು ಹಾಗೂ ಒಬ್ಬ ವಿಧಾನಪರಿಷತ್ ಸದಸ್ಯರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News