ಆರ್‌ಬಿಐ ಗವರ್ನರ್ ಆಗಿ ‘ಕೋಲೆಬಸವ’ ದಾಸ್ ನೇಮಕ ಅಪಾಯಕಾರಿ: ಶಿವಸೇನೆ ಎಚ್ಚರಿಕೆ

Update: 2018-12-15 17:10 GMT

ಮುಂಬೈ,ಡಿ.15: ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಅವರ ನೇಮಕದ ವಿರುದ್ಧ ತೀವ್ರ ದಾಳಿಯನ್ನು ನಡೆಸಿರುವ ಬಿಜೆಪಿಯ ಮಿತ್ರಪಕ್ಷ ಶಿವಸೇನೆಯು,ಎಲ್ಲದಕ್ಕೂ ‘ಎಸ್’ ಎನ್ನುವ ‘ಕೋಲೆಬಸವ’ ದಾಸ್ ಅವರ ನೇಮಕವು ಅಪಾಯಕಾರಿಯಾಗಿದ್ದು,ಇದು ದೇಶದಲ್ಲಿ ‘ಆರ್ಥಿಕ ಭಯೋತ್ಪಾದನೆ’ಯನ್ನು ಹುಟ್ಟುಹಾಕುವ ಸಾಧ್ಯತೆಯಿದೆ ಎಂದು ಕಟುವಾಗಿ ಟೀಕಿಸಿದೆ.

ಸತ್ಯವನ್ನು ನುಡಿಯುವ ಜನರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಬೇಕಿಲ್ಲ,ಅದು ತಾನು ಹೇಳುವ ಎಲ್ಲದಕ್ಕೂ ಹೂಂಗುಡುವ ಜನರನ್ನೇ ಬಯಸುತ್ತದೆ. ಇದು ದಾಸ್ ನೇಮಕದ ಹಿಂದಿನ ಉದ್ದೇಶವಾಗಿದ್ದರೆ ಇದು ಹಣಕಾಸು ಭಯೋತ್ಪಾದನೆಯ ಆಳ್ವಿಕೆಯನ್ನು ಸಂಕೇತಿಸುತ್ತದೆ ಎಂದು ಶಿವಸೇನೆ ತನ್ನ ಮುಖವಾಣಿಗಳಾದ ‘ಸಾಮ್ನಾ’ ಮತ್ತು ‘ದೋಪಹರ್ ಕಾ ಸಾಮನಾ’ಗಳ ಶನಿವಾರದ ಸಂಚಿಕೆಗಳ ಸಂಪಾದಕೀಯದಲ್ಲಿ ಎಚ್ಚರಿಕೆಯನ್ನು ನೀಡಿದೆ.

 ಗವರ್ನರ್ ಹುದ್ದೆಗೆ ನೇಮಕಕ್ಕೆ ದಾಸ್ ಅವರ ಅರ್ಹತೆಯನ್ನು ಪ್ರಶ್ನಿಸಿರುವ ಅದು,ಹಿಂದಿನ ಇಬ್ಬರು ಆರ್‌ಬಿಐ ಗವರ್ನರ್‌ಗಳಾದ ರಘುರಾಮ ರಾಜನ್ ಮತ್ತು ಊರ್ಜಿತ್ ಪಟೇಲ್ ಅವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದರು. ಆದರೆ ಈಗ ನೇಮಕಗೊಂಡಿರುವ ಐಎಎಸ್ ಅಧಿಕಾರಿ ದಾಸ್ ಅವರು ಕೇವಲ ಇತಿಹಾಸದಲ್ಲಿ ಪದವೀಧರರಾಗಿದ್ದಾರೆ ಎಂದು ಬೆಟ್ಟುಮಾಡಿದೆ.

ದಾಸ್ ಅವರು ನರೇಂದ್ರ ಮೋದಿ ಸರಕಾರದ ಎಲ್ಲ ಒಳ್ಳೆಯ ಮತ್ತು ಕೆಟ್ಟ ನೀತಿಗಳನ್ನು ಪ್ರಶಂಸಿಸಿದವರಾಗಿದ್ದಾರೆ. ವಿನಾಶಕಾರಿ ನೋಟು ನಿಷೇಧ ಕ್ರಮವನ್ನು ಅವರು ಕುರುಡನಂತೆ ಬೆಂಬಲಿಸಿದ್ದರು. ಆಗ ಜನರ ಸಂಕಷ್ಟಗಳಿಗೆ ಸಂವೇದಿಸುವುದರಿಂದ ಅವರು ದೂರವೇ ಉಳಿದಿದ್ದರು ಎಂದು ನೆನಪಿಸಿರುವ ಶಿವಸೇನೆ,ಆರ್‌ಬಿಐ ಗವರ್ನರ್ ಹುದ್ದೆಯೆಂದರೆ ಮುಳ್ಳಿನ ಸಿಂಹಾಸನದ ಮೇಲೆ ಕುಳಿತಂತೆ. ಹೀಗಾಗಿ ಆರ್‌ಬಿಐ ಸ್ವಾಯತ್ತತೆಯ ರಕ್ಷಣೆ ಮತ್ತು ಜಾಗತಿಕ ಹೂಡಿಕೆದಾರರಿಗೆ ಇದನ್ನು ಮನದಟ್ಟು ಮಾಡುವುದು ದಾಸ್ ಅವರ ಮೊದಲ ಆದ್ಯತೆಯಾಗಬೇಕು ಎಂದು ಕಿವಿಮಾತು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News