ರಾಂಗ್ ರೂಟಲ್ಲಿ 'ರಂಗಾದ ಹುಡುಗರು'

Update: 2018-12-15 18:45 GMT

ಪದವಿ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿಕೊಳ್ಳುವ ಮೊದಲು ಹುಡುಗರು ಹೇಗಿರುತ್ತಾರೆ? ಎಲ್ಲ ಹುಡುಗರು ಇದೇ ರೀತಿ ಇರುತ್ತಾರೆ ಎಂದು ಹೇಳಲಾಗದು. ಆದರೆ ಚಿತ್ರದಲ್ಲಿನ ಮೂವರು ಯುವಕರು ತಮಗಿಷ್ಟ ಬಂದ ಕೆಲಸ ಹುಡುಕಲು ಮನೆಯಿಂದ ಆರು ತಿಂಗಳ ಕಾಲಾವಧಿ ಪಡೆದುಕೊಳ್ಳುತ್ತಾರೆ. ಆದರೆ ಆರು ತಿಂಗಳೊಳಗೆ ಅವರ ಬದುಕಿನಲ್ಲಿ ನಡೆಯುವ ಏರುಪೇರುಗಳೇ ಚಿತ್ರದ ಸಾರ.

ಮೂವರು ಯುವಕರಲ್ಲಿ ಒಬ್ಬಾತ ಪೊಲೀಸ್ ಅಧಿಕಾರಿಯ ಮಗ. ಉಳಿದ ಇಬ್ಬರು ಆತನ ಆತ್ಮೀಯ ಸ್ನೇಹಿತರು. ಸುತ್ತಾಟದ ನಡುವೆ ಇವರ ದ್ವಿಚಕ್ರ ವಾಹನಕ್ಕೆ ಹುಡುಗಿಯೊಬ್ಬಳ ಸ್ಕೂಟಿ ಢಿಕ್ಕಿಯಾಗುತ್ತದೆ. ಅದರಿಂದ ಒಬ್ಬಾತನ ಮೈಗೆ ಏಟಾಗುತ್ತದೆ. ಇನ್ನೊಬ್ಬ ಆಕೆಯ ಚೆಲುವು ನೋಡಿ ಹೃದಯಕ್ಕೆ ಏಟು ಮಾಡಿಕೊಳ್ಳುತ್ತಾನೆ. ಆದರೆ ಆ ಹುಡುಗಿ ಇವರನ್ನು ಆಟವಾಡಿಸುತ್ತಾಳೆ. ಆಕೆಯ ಬೆನ್ನು ಬಿದ್ದು ಊಟಿಗೆ ಹೋಗುವ ಹುಡುಗರು ತಮ್ಮ ಕಾರ್‌ಗೂ ಏಟು ಮಾಡಿಕೊಳ್ಳುತ್ತಾರೆ. ಆದರೆ ಅಲ್ಲಿ ಅವರಿಗೆ ಒಬ್ಬ ದಾನಶೂರ ಕರ್ಣನ ಪರಿಚಯವಾಗುತ್ತದೆ. ಅಲ್ಲಿಯ ತನಕ ದುಡ್ಡಿಗಾಗಿ ಪರದಾಡಬೇಕಾಗಿದ್ದ ಅವರಿಗೆ ಆತ ಮಹಾದಾನಿಯಂತೆ ಗೋಚರಿಸುತ್ತಾನೆ. ಆದರೆ ಮುಂದೆ ಆ ಸಹಾಯವೇ ಅವರನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ. ಆ ಕಷ್ಟವೇನು ಮತ್ತು ಅದರಿಂದ ಅವರು ಹೇಗೆ ಹೊರಗೆ ಬರುತ್ತಾರೆ ಎನ್ನುವುದನ್ನು ತಿಳಿಯಲು ಚಿತ್ರವನ್ನೊಮ್ಮೆ ನೋಡಬಹುದು.

ಚಿತ್ರದ ಆರಂಭದಲ್ಲೇ ಮುಸ್ಲಿಂ ಉಗ್ರಗಾಮಿಯೋರ್ವ ಮತ್ತೋರ್ವ ಮುಸ್ಲಿಮನನ್ನು ಕೊಲ್ಲುವ ದೃಶ್ಯವಿದೆ. ಅದರ ಮೂಲಕ ಬಹಳಷ್ಟು ಸಿನೆಮಾಗಳಲ್ಲಿ ಹೇಳಿರುವಂತೆ ಭಾರತೀಯ ಮುಸ್ಲಿಮರನ್ನು ಕೂಡ ಪಾಕಿಸ್ತಾನಿ ಭಯೋತ್ಪಾದಕರು ಇಷ್ಟಪಡುವುದಿಲ್ಲ ಎನ್ನುವುದನ್ನು ತೋರಿಸಲಾಗಿದೆ. ಈ ದೃಶ್ಯವನ್ನು ನೆನಪಲ್ಲಿ ಇರಿಸಿಕೊಂಡವರಿಗೆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿನ ಭಯೋತ್ಪಾದಕ ತಿರುವುಗಳು ಅಚ್ಚರಿ ಮೂಡಿಸುವುದಿಲ್ಲ. ಆದರೆ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ‘ಎ’ ಸರ್ಟಿಫಿಕೆಟ್ ನೀಡಲು ಭಯೋತ್ಪಾದಕ ದೃಶ್ಯಗಳಿಗಿಂತ ಹೆಚ್ಚಾಗಿ ಚಿತ್ರದ ಸಂಭಾಷಣೆಗಳೇ ಕಾರಣವಾದಂತಿದೆ. ಯಾಕೆಂದರೆ ಚಿತ್ರದ ತುಂಬ ಹುಡುಗರ ಬಾಯಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳೇ ತುಂಬಿಕೊಂಡಿವೆ.

ಪ್ರಥಮ ಬಾರಿಗೆ ನಾಯಕನಾಗಿ ನಟಿಸಿರುವ ಸಾಗರ್ ಮೊದಲ ನೋಟಕ್ಕೆ ಯಶ್ ಅವರನ್ನು ಹೋಲುತ್ತಾರೆ. ಪ್ರಥಮ ಚಿತ್ರವಾದರೂ ಸಚಿನ್ ಎಂಬ ಪಾತ್ರದ ಮೂಲಕ ಭರವಸೆಯ ನಟನೆ ನೀಡುವಲ್ಲಿ ಗೆದ್ದಿದ್ದಾರೆ. ಮಂಜುನಾಥ್ ಹೆಗ್ಡೆಯವರ ಪುತ್ರ ಮನು ತಂದೆಯಂತೆ ತಾವು ಕೂಡ ಒಬ್ಬ ಉತ್ತಮ ನಟ ಎಂದು ಸಾಬೀತು ಮಾಡಲು ಅವಕಾಶಕ್ಕೆ ಕಾದಂತಿದೆ. ಚಿತ್ರದ ನಾಯಕಿಯಾಗಿ ಅಮಿತಾ ಕುಲಾಲ್ ಅವರಿಗೆ ಇದು ನಾಲ್ಕನೆಯ ಚಿತ್ರ. ಕತೆಯಲ್ಲಿ ಹೇಳಲಾದ ಸುಂಟರಗಾಳಿ ಇಮೇಜ್‌ನ ರಮ್ಯಾ ಎನ್ನುವ ಪಾತ್ರಕ್ಕೆ ಅವರು ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಛಾಯೆಯ ಪಾತ್ರದಲ್ಲಿ ಖಳನಾಗಿ ನಟ ಭರತ್ ಅಭಿನಯಿಸಿದ್ದಾರೆ. ಸಾಗರ್‌ನ ಪೊಲೀಸ್ ತಂದೆಯಾಗಿ ಶೋಭರಾಜ್ ಬಂದು ಹೋಗುತ್ತಾರೆ. ಸಂಭಾಷಣೆಯಲ್ಲಿ ತಮಾಷೆ ಹೆಸರಲ್ಲಿ ಅಶ್ಲೀಲತೆ ತುಂಬಲಾಗಿದೆಯಾದರೂ ಡೈಲಾಗ್ ಹೇಳಿಸಿರುವ ಶೈಲಿ ಮೆಚ್ಚುವಂತಿದೆ. ಛಾಯಾಗ್ರಹಣ ಮತ್ತು ಸಂಕಲನ ಕೂಡ ಇಷ್ಟವಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸೇನಾಪತಿಯವರು ನೀಡಿರುವ ಸಂಗೀತದಲ್ಲಿ ದಿಲ್ಸೆ ದಿಲೀಪ್ ರಚನೆಗಳು ಆಕರ್ಷಕವಾಗಿ ಮೂಡಿ ಬಂದಿವೆ. ಒಟ್ಟಿನಲ್ಲಿ ರಂಗಾದ ಹುಡುಗರದ್ದು ಭರವಸೆ ಮೂಡಿಸುವ ತಂಡ ಎನ್ನುವುದರಲ್ಲಿ ಸಂದೇಹವಿಲ್ಲ.

ತಾರಾಗಣ: ಸಚಿನ್ ಸಾಗರ್, ರಾಹುಲ್ ಮನು, ಅಮಿತಾ ಕುಲಾಲ್
ನಿರ್ದೇಶನ: ತೇಜೇಶ್ ಕುಮಾರ್ ಯು ಎಸ್
ನಿರ್ಮಾಣ: ಬಸವರಾಜ್ ಟಿ.ಎಮ್  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News