ದಿಲ್ಲಿ ದರ್ಬಾರ್

Update: 2018-12-15 18:50 GMT

ಮಮತಾ ನಡೆ ನಿಗೂಢ
ಡಿಸೆಂಬರ್ 12ರಂದು ಮುಖೇಶ್ ಅಂಬಾನಿ- ನೀತಾ ಅಂಬಾನಿ ಪುತ್ರಿ ಇಶಾ, ಅಜಯ್-ಸ್ವಾತಿ ಪಿರಮಾಳ್ ಪುತ್ರ ಆನಂದ್ ಜತೆ ವಿವಾಹಬಂಧನಕ್ಕೆ ಒಳಗಾಗಿದ್ದಾರೆ. ಮುಂಬೈ ಹೃದಯಭಾಗ ಅಂತಿಲ್ಲಿಯಾದಲ್ಲಿರುವ 27 ಮಹಡಿಯ ಭವ್ಯ ನಿವಾಸದಲ್ಲಿ ಆ ಸಂಜೆ ಅತ್ಯಂತ ವರ್ಣರಂಜಿತವಾಗಿತ್ತು. ಅಲ್ಟಾಮೌಂಟ್ ರಸ್ತೆಯಲ್ಲಿ ಬುಧವಾರ ಸಂಜೆ ಅತಿಗಣ್ಯರ ಪ್ರವಾಹವೇ ಹರಿದುಬರುತ್ತಿದ್ದರೆ, ಶ್ರೇಷ್ಠ ಎಥ್ನಿಕ್ ಹಾಗೂ ಫಾರ್ಮಲ್ ದಿರಿಸಿನಿಂದ ಇದ್ದ ಮಮತಾ ಬ್ಯಾನರ್ಜಿ ಒಬ್ಬಂಟಿಯಾಗಿ ಗುಂಪಿನಿಂದ ಪ್ರತ್ಯೇಕ ಇದ್ದರು. ಅಂಬಾನಿ ಮದುವೆಯಲ್ಲಿ ಹವಾಯಿಯಲ್ಲಿ ತಿರುಗಾಡುತ್ತಿದ್ದ ಮಮತಾ ಎಲ್ಲರ ಗಮನ ಸೆಳೆದರು. ಕಾಟನ್ ಸೀರೆ ಮತ್ತು ಸರಳ ಚಪ್ಪಲಿಗೆ ಮಮತಾ ಹೆಸರುವಾಸಿ. ಅವರನ್ನು ನಿಕಟವಾಗಿ ನೋಡುವವರು ಇನ್ನೊಂದು ಅಂಶವನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ಅವರು ಮುಂಬೈನಿಂದ ಕೋಲ್ಕತಾಗೆ ಮರಳುವ ದಾರಿಯಲ್ಲಿ ನಾಗ್ಪುರದಿಂದ ವಿಮಾನ ಏರಿದರು. ಆರೆಸ್ಸೆಸ್ ಕೇಂದ್ರ ಕಚೇರಿ ಇರುವ ನಾಗ್ಪುರವೇ ಏಕೆ ಎನ್ನುವ ಪ್ರಶ್ನೆ ಹಲವರಲ್ಲಿ ಕಾಡದಿರದು. ಮಮತಾ ಕೆಲ ಗಂಟೆಗಳ ಕಾಲ ನಾಗ್ಪುರದಲ್ಲೇ ಇದ್ದರು. ಅವರು ಯಾರನ್ನು ಭೇಟಿಯಾದರು ಮತ್ತು ಏನು ಚರ್ಚೆ ನಡೆಸಿದರು ಎನ್ನುವುದು ನಿಗೂಢವಾಗಿಯೇ ಉಳಿದಿದೆ. ಆದರೆ ಇದರ ಸುತ್ತ ನಾಲಿಗೆಗಳು ಹೇಗೆಂದರೆ ಹಾಗೆ ತಿರುಗುತ್ತವೆ. ದೀದಿ ಆರೆಸ್ಸೆಸ್ ಜತೆಗೆ ಸಲುಗೆ ಬೆಳೆಸಿಕೊಂಡಿದ್ದಾರೆಯೇ ಮತ್ತು ಯಾಕಾಗಿ? ಆದರೆ ಪಶ್ಚಿಮ ಬಂಗಾಳದ ಅಧಿಕಾರಿಗಳ ಪ್ರಕಾರ, ಆ ದಿನ ಕೋಲ್ಕತಾಗೆ ವಿಮಾನ ಇದ್ದುದು ನಾಗ್ಪುರದಿಂದ ಮಾತ್ರ. ಮುಂಬೈನಿಂದ ಕೋಲ್ಕತಾಗೆ ನೇರ ವಿಮಾನ ಇದ್ದಿರಲಿಲ್ಲವೇ? ಖಂಡಿತವಾಗಿಯೂ ಇತ್ತು.


ಚತುರ ನಡೆಯಲ್ಲಿ ಮಾಯಾ ವಿಫಲ
ಹಲವು ರಾಜಕೀಯ ಭವಿಷ್ಯಗಳು ಇತ್ತೀಚೆಗೆ ಮುಕ್ತಾಯವಾದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಆಧರಿಸಿವೆ. 2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ ನಡೆಯುವ ಸೆಮಿಫೈನಲ್ ಎಂದೇ ಇದನ್ನು ಬಿಂಬಿಸಲಾಗಿತ್ತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡದ ವಿಧಾನಸಭಾ ಚುನಾವಣೆಗಳು ಹೊಸ ಮುಖಂಡನ ಸಾರಥ್ಯದ ಹಳೆಯ ಪಕ್ಷಕ್ಕೆ ಪ್ರಮುಖವಾಗಿದ್ದವು. ಆದರೆ ಇದರ ಪರಿಣಾಮ ನೆಹರೂ ವಂಶದ ಕುಡಿಯ ಬದಲು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಮೇಲೆ ಹೆಚ್ಚಾಗಿತ್ತು. ಮಾಯಾ ನೆರವಿಲ್ಲದೇ ಮೂರೂ ರಾಜ್ಯಗಳನ್ನು ಗೆದ್ದರೆ ಆಕೆಗೆ ಪಾಠ ಕಲಿಸಬಹುದು ಎಂಬ ತುಡಿತ ಕಾಂಗ್ರೆಸ್ ಮುಖಂಡರಲ್ಲಿತ್ತು. ಕಾಂಗ್ರೆಸಿಗರು ಬಹುತೇಕ ಇದನ್ನು ಸಾಧಿಸಿದ್ದಾರೆ. ಬಿಜೆಪಿಯ ಸಿನಿಕತನದ ವಿನ್ಯಾಸದಲ್ಲಿ ಮಾಯಾವತಿ ಗುಪ್ತವಾಗಿ ಸಹಭಾಗಿ ಎಂಬ ಮಾತುಗಳು ಕೇಳಿಬರುತ್ತಿವೆ. ಮೂರೂ ರಾಜ್ಯಗಳಲ್ಲಿ ಆಕೆಯ ಪಕ್ಷದ ಬೆಂಬಲ ಯಾಚಿಸುವ ಅಗತ್ಯವಂತೂ ಕಾಂಗ್ರೆಸ್‌ಗೆ ಎದುರಾಗಲಿಲ್ಲ. ಮಧ್ಯಪ್ರದೇಶದಲ್ಲಿ ಮಾಯಾ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದರು. ಆದರೆ ಬಿಎಸ್ಪಿ ಪ್ರಭಾವ ಬೀರಲು ವಿಫಲವಾಯಿತು. ಇದೀಗ ಸಹಜವಾಗಿಯೇ ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಜತೆಗಿನ ಚೌಕಾಶಿಯ ವಿರುದ್ಧ ದಾಳಿ ಮಾಡಲು ಕಾಂಗ್ರೆಸ್‌ಗೆ ಅಸ್ತ್ರ ಸಿಕ್ಕಿದೆ. ಜತೆಗೆ ಗುಜರಾತ್ ಹಾಗೂ ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಳ್ಳುವಂತೆ ಒತ್ತಡ ಹೇರುವ ಅವಕಾಶವೂ ಲಭಿಸಿದೆ. ಮಧ್ಯಪ್ರದೇಶದಲ್ಲಿ ಇಬ್ಬರು ಶಾಸಕರ ಬೆಂಬಲವನ್ನು ಕಾಂಗ್ರೆಸ್‌ಗೆ ಘೋಷಿಸಿರುವ ಮಾಯಾವತಿಯವರಿಗೆ ಅದು ಅನಿವಾರ್ಯವಾಗಿತ್ತು. ಇದೀಗ ಸಂಯುಕ್ತ ವಿರೋಧ ಪಕ್ಷಗಳಿಗೆ ಮಾಯಾ ಮತ್ತೇನು ಅಚ್ಚರಿ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಅವರು ಹೇಳುವಂತೆ ಬೆಹನ್‌ಜಿಯವರು ವಿಶ್ವಾಸಾರ್ಹವಲ್ಲ.


ಕಮಲ್‌ನಾಥ್ ಕೂಲ್ ಕೂಲ್...
ಫಲಿತಾಂಶಕ್ಕೆ ಮುನ್ನವೇ ಮಧ್ಯಪ್ರದೇಶದ ಶಕ್ತಿ ಕೇಂದ್ರದಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಹಾಗೂ ಕಮಲ್‌ನಾಥ್ ಸಿಎಂ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಅಧಿಕಾರ ಬದಲಾವಣೆಯಾದ ತಕ್ಷಣ ತಮ್ಮ ಹೊಣೆಗಳ ಬದಲಾವಣೆ ಬಗ್ಗೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಉನ್ನತ ಅಧಿಕಾರಿಗಳು ಸಹಜವಾಗಿಯೇ ಲಾಬಿ ಆರಂಭಿಸಿದ್ದರು. ಈ ಬಾರಿಯ ಫಲಿತಾಂಶ ಮಧ್ಯಪ್ರದೇಶಕ್ಕೆ ಹೊಸ ಸರಕಾರವನ್ನು ತರುತ್ತದೆ ಎಂಬ ಶೇ. 100ರಷ್ಟು ನಂಬಿಕೆಯಿಂದ ಈ ಬಾಬೂಗಳು ಹೊಸ ಸಿಎಂ ಸಹಿತ ಹೊಸ ತಂಡದ ಬಗ್ಗೆ ಊಹಾಪೋಹಗಳನ್ನೂ ಹುಟ್ಟುಹಾಕಿದ್ದರು. ಹಲವು ಇಂಥ ಚುನಾವಣೆಗಳನ್ನು ನೋಡಿದ, ಸಿಎಂ ಹುದ್ದೆ ರೇಸ್‌ನ ಮುಂಚೂಣಿಯಲ್ಲಿದ್ದ ಕಮಲ್‌ನಾಥ್ ಮಾತ್ರ ತಣ್ಣಗಿದ್ದರು. ಮತಗಳ ಎಣಿಕೆ ವೇಳೆ ತಟಸ್ಥ ಹಾಗೂ ವಸ್ತುನಿಷ್ಠವಾಗಿರುವಂತೆ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿದ್ದರು. ಡಿಸೆಂಬರ್ 11ರ ಬಳಿಕ ಡಿಸೆಂಬರ್ 12 ಬರುತ್ತದೆ ಎನ್ನುವುದು ನೆನಪಿರಲಿ ಎಂದು ಹೇಳಿದ್ದರು. ಅದು ಬಂದೇ ಬಿಟ್ಟಿತು ಹಾಗೂ ಕಮಲ್‌ನಾಥ್ ಅವರ ಮುಖ್ಯಮಂತ್ರಿಯಾಗಿದ್ದಾರೆ. ಕಠಿಣ ಪರಿಶ್ರಮದ ಪ್ರವೃತ್ತಿ ಹೊಂದಿರುವ ಕಮಲ್‌ನಾಥ್, ಕೇಂದ್ರ ಸರಕಾರದಲ್ಲಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಬಳಿಕ ಅಧಿಕಾರಿಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಚೆನ್ನಾಗಿ ಬಲ್ಲರು. ಅದನ್ನು ಹೇಗೆ ಭೇದಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕು!


ಕಮ್ಯುನಿಸ್ಟ್ ಮುಖಂಡನ ಪುಕ್ಕಟೆ ಸಲಹೆ
ಕಮ್ಯುನಿಸ್ಟ್ ರಾಜಕಾರಣಿಗಳು ಎಲ್ಲರಿಗಿಂತ ಭಿನ್ನ. ಅವರಲ್ಲಿ ಬಹುತೇಕ ಮಂದಿ ಜನರ ಜತೆ ಬಾಳುತ್ತಾರೆ; ತಮ್ಮ ಬಗ್ಗೆ ರಾಜಕಾರಣಿ ಎಂಬ ಗರ್ವ ಇರುವುದಿಲ್ಲ. ಕೆಲವೊಮ್ಮೆ ಇದಕ್ಕೆ ಇದರದ್ದೇ ಆದ ಅಪಾಯಗಳೂ ಇವೆ. ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯೊಂದರಲ್ಲಿ, ಸಿಪಿಎಂ ಮುಖಂಡ ಹನ್ನನ್ ಮೊಲ್ಲಾ ತಮ್ಮ ಮೊಬೈಲ್ ಕಳೆದುಕೊಂಡರು. ರ್ಯಾಲಿಯಲ್ಲಿ ಇತರರೊಂದಿಗೆ ಪಾಲ್ಗೊಂಡಿದ್ದಾಗ ಬಹುಶಃ ಯಾರೋ ಅವರ ಕಿಸೆಗೆ ಕತ್ತರಿ ಹಾಕಿದ್ದರು. ಇದರಿಂದ ಪುಕ್ಕಟೆ ಮನೋರಂಜನೆ ಪಡೆದವರಲ್ಲಿ ಪಕ್ಷದ ಮತ್ತೊಬ್ಬ ನೀಲೋತ್ಪಲ್ ಬಸು ಒಬ್ಬರು. ಬಸು ಹಿಂದೆ ಇಂಥದ್ದೇ ರ್ಯಾಲಿಯಲ್ಲಿ ಮೊಬೈಲ್ ಕಳೆದುಕೊಂಡಿದ್ದಾಗ ಫೋನ್ ಬಗ್ಗೆ ಜಾಗೃತೆ ವಹಿಸಬೇಕು; ತಾನು ಹೇಗೆ ತಮ್ಮ ವಸ್ತುಗಳ ಬಗ್ಗೆ ಕಾಳಜಿ ಹೊಂದಿದ್ದೇನೆ ಎಂಬ ಬಗ್ಗೆ ಮೊಲ್ಲಾ ಬೋಧಿಸಿದ್ದರು. ಆದರೆ ಈ ಬಾರಿ ಮೊಲ್ಲಾ ಅವರನ್ನೇ ದುರದೃಷ್ಟ ಕಾಡಿತ್ತು. ನಾನು ಮೊಬೈಲ್ ಕಳೆದುಕೊಂಡಾಗ ಪಾಠ ಮಾಡಿದ್ದ ಮೊಲ್ಲಾ ಅವರೇ ಈಗ ತಮ್ಮ ಫೋನ್ ಕಳೆದುಕೊಂಡಿದ್ದಾರೆ ಎಂದು ಬಸು ಹೇಳುತ್ತಿದ್ದರು. ಈ ವೇಳೆ ಸೀತಾರಾಂ ಯೆಚೂರಿಯವರು ಇತರ ಮುಖಂಡರಿಗೆ ರ್ಯಾಲಿಗಳಲ್ಲಿ ಪಿಕ್‌ಪಾಕೆಟ್ ಮಾಡುವವರ ಬಗ್ಗೆ ಹೇಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡುತ್ತಿದ್ದುದು ಕೇಳಿಬಂತು. ಈಗ ದುರದೃಷ್ಟ ಸ್ವತಃ ಯೆಚೂರಿಗೆ ಯಾವಾಗ ವಕ್ಕರಿಸಿಕೊಳ್ಳುತ್ತದೆ ಎಂದು ಕಾದು ನೋಡಬೇಕು.


ಉಪರಾಷ್ಟ್ರಪತಿಗಳ ಉಗ್ರಾವತಾರ
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚುಟುಕು ಮಾತು ಮತ್ತು ಬಹುತೇಕ ಹಾಸ್ಯಪ್ರಜ್ಞೆಗೆ ಹೆಸರಾದವರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಸದಾ ವ್ಯಗ್ರರಾಗಿರುವುದೇ ಕಾಣಿಸುತ್ತಿದೆ. ಅಥವಾ ಜನ ಅವರಿಗೆ ಕೋಪ ಬರಿಸುತ್ತಿದ್ದಾರೆ. ಇತ್ತೀಚೆಗೆ ತಮ್ಮದೇ ಅಧ್ಯಕ್ಷತೆಯ ಕಲಾಪ ಸಲಹಾ ಸಮಿತಿ (ಬಿಎಸಿ)ಯ ಉದ್ದೇಶಿತ ಸಭೆಗೆ ಹಾಜರಾಗಲು ಸಚಿವರು ವಿಫಲರಾಗಿದ್ದರಿಂದ ಸರಕಾರದ ಸದಸ್ಯರ ಬಗ್ಗೆಯೇ ನಾಯ್ಡು ಹರಿಹಾಯ್ದರು. ಬೆಳಗ್ಗೆ ನಿಗದಿತ ಸಮಯಕ್ಕೆ ಸರಿಯಾಗಿಯೇ ನಾಯ್ಡು ಆಗಮಿಸಿದರು. ಆದರೆ ಆಗ ಹಾಜರಿದ್ದವರು ಅವರು ಮಾತ್ರ. ರಾಜ್ಯಸಭೆಯ ನಡಾವಳಿಯಂಥ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಕರೆದಿದ್ದ ಈ ಮಹತ್ವದ ಸಭೆಗೆ ಸಚಿವರು ಗೈರುಹಾಜರಾಗಲು ಏನು ಕಾರಣ ಎನ್ನುವುದು ಅವರಿಗೆ ಆ ಬಳಿಕ ತಿಳಿಯಿತು. ಸಿಟ್ಟಿನಿಂದ ಸಭೆ ರದ್ದುಗೊಳಿಸಿ ನಾಯ್ಡು ಹೊರಟುಹೋದರು. ಬಳಿಕ ಗೈರುಹಾಜರಾದ ಸಚಿವರಿಗೆ ಅವರು ಕ್ಲಾಸ್ ತೆಗೆದುಕೊಂಡಿರಬಹುದು. ಆದರೆ ಮೇಲ್ಮನೆಯ ಅಧ್ಯಕ್ಷರಾಗಿ ತಮ್ಮ ಕಾಲ ಬಹುಶಃ ಚೆನ್ನಾಗಿಲ್ಲ ಎಂದು ಅವರಿಗೆ ಎನಿಸಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News